
ಬೆಂಗಳೂರು (ಸೆ.7): ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಭಾರತೀಯರಲ್ಲಿ ಮೊದಲಿನಿಂದಲೂ ಪ್ರಕೃತಿಯೊಂದಿಗೆ ಪೂರಕವಾದ ಸಂವೇದನೆ ಇದೆ. ಭೂಮಿಯನ್ನು ತಾಯಿಯ ರೂಪದಲ್ಲಿ ಕಂಡಿದ್ದೇವೆ. ಅದರ ಕುರಿತು ಲೇಖನಗಳನ್ನು ಬರೆಯಲು ಪರಿಸರತಜ್ಞರೇ ಆಗಬೇಕು ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ ಎಂದು ಹೊಸದಿಗಂತ ಸಮೂಹ ಸಂಪಾದ ವಿನಾಯಕ ಭಟ್ ಮೂರೂರು ಹೇಳಿದರು.
ಪರಿಸರ ಸಂರಕ್ಷಣೆ ಗತಿವಿಧಿಯ ವತಿಯಿಂದ ಬನಶಂಕರಿಯ ಬಿ.ಎನ್.ಎಂ.ಐ.ಟಿ ಕಾಲೇಜಿನಲ್ಲಿ ನಡೆದ ಪರಿಸರಕ್ಕಾಗಿ ಅಕ್ಷರ ಸೇವೆ ಲೇಖಕರ ಸಮಾವೇಶದಲ್ಲಿ ಅವರು ಮಾತನಾಡಿದರು.
ಬರೆವಣಿಗೆ ಯಾವ ವೇದಿಕೆಗೆ ಹೇಗಿರಬೇಕು ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕು. ದಿನಪತ್ರಿಕೆಗಳಿಗೆ ಪ್ರಚಲಿತ ವಿದ್ಯಮಾನಕ್ಕೆ ಅನುಗುಣವಾಗಿ ಲೇಖನಗಳನ್ನು ಬರೆಯಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಬರಹಗಳು ಸಾಧ್ಯವಾದಷ್ಟು ಚಿಕ್ಕದಿರಬೇಕು. ಹೀಗೆ ಬರೆಯುವುದಕ್ಕಿರುವ ವೇದಿಕೆಗಳಿಗೆ ಸೂಕ್ತವಾದ ಶೈಲಿಯನ್ನು ರೂಢಿಸಿಕೊಳ್ಳಬೇಕು. ಹೆಚ್ಚೆಚ್ಚು ಓದಿದಾಗ ಏನು ಬರೆಯಬೇಕು, ಯಾವುದಕ್ಕೆ ಹೇಗೆ ಬರೆಯಬೇಕು ಎನ್ನುವುದು ತಿಳಿಯುತ್ತದೆ ಎಂದು ನುಡಿದರು.
ಆತ್ಮನಿರ್ಭರ ಮನೆಗಳಿಂದ ಮಾತ್ರ ಆತ್ಮನಿರ್ಭರ ಭಾರತವನ್ನು ಕಟ್ಟುವುದಕ್ಕೆ ಸಾಧ್ಯ. ನಮ್ಮ ಮಕ್ಕಳಲ್ಲಿ ಪರಿಸರದ ಕುರಿತು ಪ್ರೀತಿಯನ್ನು ಮೂಡಿಸಬೇಕು. ಪರಿಸರ ಸ್ನೇಹಿ ಜೀವನಶೈಲಿಯನ್ನು ನಾವು ರೂಢಿಸಿಕೊಳ್ಳಬೇಕು. ಪರಿಸರ ಮತ್ತು ಅಭಿವೃದ್ಧಿಯ ಕುರಿತು ದ್ವಂದ್ವವಿದ್ದಾಗ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಪರಿಹಾರಗಳನ್ನು ನಾವು ಕಂಡುಕೊಳ್ಳಬೇಕು. ಪರಿಸರ ನಮ್ಮದು ಎಂಬ ಮನಸ್ಥಿತಿ ನಮ್ಮಲ್ಲಿ ಮೂಡಿದಾಗ ಪರಿಸರ ರಕ್ಷಿಸುವ ಯಾವ ಯೋಜನೆಯ ಅಗತ್ಯವೂ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಲೇಖಕಿ ರೂಪಾ ಗುರುರಾಜ್ ಮಾತನಾಡಿ ನಮ್ಮ ಬರಹಗಳಲ್ಲಿ ಜನರಿಗೆ ಏನನ್ನು ತಿಳಿಸಬೇಕು ಎಂಬ ಪ್ರಬುದ್ಧತೆ ಲೇಖಕರಿಗೆ ಇರಬೇಕು. ಬರೆಯುವ ವಿಷಯದ ಕುರಿತು ಅಧ್ಯಯನವಿರಬೇಕು. ನಮ್ಮ ಬರಹದ ಮೊದಲ ವಿಮರ್ಶಕರು ನಾವೇ ಆಗಿದ್ದಾಗ ನಮ್ಮ ಬರಹ ಸುಂದರವಾಗಿ ಮೂಡಿಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ವಿಚಾರಕ್ಕೆ ಗಟ್ಟಿತನವಿದ್ದರೆ ನಮ್ಮ ಬರಹಕ್ಕೆ ವೇದಿಕೆ ಸಿಕ್ಕೇ ಸಿಗುತ್ತದೆ. ಬರವಣಿಗೆಯಲ್ಲಿ ನಿರಂತರತೆ ಮುಖ್ಯ. ನಾವು ಬರೆಯುವ ಬರಹಕ್ಕೆ ಆಕರಗಳು ಅಗತ್ಯ. ಎಲ್ಲದಕ್ಕಿಂತಲೂ ನಾವು ಬರೆದಂತೆಯೇ ಬದುಕಿದಾಗ ಮಾತ್ರ ನಮ್ಮ ಬರಹಗಳ ತೂಕ ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣಾ ಗತಿವಿಧಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ವೆಂಕಟೇಶ ಸಂಗನಾಳ, ಜನಸಂವಾದ ಪ್ರಾಂತ ಪ್ರಮುಖ ಸಹನಾ ಹೆಗಡೆ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ