
ಬೆಂಗಳೂರು (ಜ.19): ರಾಜ್ಯದಲ್ಲಿ ಮದ್ಯ ಖರೀದಿ ಮಾಡುವ ವ್ಯಕ್ತಿಯ ಕನಿಷ್ಠ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸುವ ಅಬಕಾರಿ ಇಲಾಖೆಯ ಕರಡು ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕರಡು ನಿಯಮವನ್ನು ಹಿಂಪಡೆಯಲಾಗಿದೆ. 21 ವರ್ಷದ ಕೆಳಗಿನ ವ್ಯಕ್ತಿಗೆ ಮದ್ಯ ಮಾರಾಟ ಮಾಡಬಾರದು ಎಂಬ ನಿಯಮವನ್ನು 18 ವರ್ಷ ಎಂದು ಬದಲಿಸಲು ಸರ್ಕಾರ ಚಿಂತನೆ ನಡೆಸಿತ್ತು. ಈ ಸಂಬಂಧ ಜ.9 ರಂದು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳಿದ್ದರೆ 30 ದಿನಗಳೊಳಗಾಗಿ ಸಲ್ಲಿಸಲು ತಿಳಿಸಿತ್ತು. ಅಧಿಸೂಚನೆ ಪ್ರಕಟವಾದ ಬೆನ್ನಲ್ಲೇ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಜ.18 ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಬಕಾರಿ ಆಯುಕ್ತರು, ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮಕ್ಕೆ ತಿದ್ದುಪಡಿ ತಂದು ವಯಸ್ಸಿನ ಮಿತಿಯನ್ನು ಕಡಿಮೆ ಮಾಡಲು ಉದ್ದೇಶಿಸಿದ್ದ ತಿದ್ದುಪಡಿ ನಿಯಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.
ಗಾರ್ಮೆಂಟ್ಸ್ ನೌಕರರ ವೇತನ ಶೇ.14 ಹೆಚ್ಚಳ: 8800ರಿಂದ 13200 ಕನಿಷ್ಠ ವೇತನ ನಿಗದಿ
ಗೊಂದಲ ಬಗೆಹರಿಸಲು ಯತ್ನ, ಇಲಾಖೆ ಸಮರ್ಥನೆ: ಇನ್ನು ಈ ಯತ್ನಕ್ಕೆ ಸಮರ್ಥನೆಯನ್ನೂ ನೀಡಿರುವ ಅವರು, ಅಬಕಾರಿ ಅಧಿನಿಯ-1965ರ ಕಲಂ 36 (1)(ಬಿ) ಅನ್ವಯ 18 ವರ್ಷದೊಳಗಿನವರೆಗೆ ಮದ್ಯ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಆದರೆ, ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು-1967ರ ನಿಯಮ 10(1)(ಇ) ಪ್ರಕಾರ 21 ವರ್ಷದೊಳಗಿರುವ ವ್ಯಕ್ತಿಗೆ ಮದ್ಯ ಮಾರಾಟ ಮಾಡಬಾರದು ಎಂದು ಹೇಳಲಾಗಿದೆ.
ಇಲ್ಲಿ ಮೊದಲ ನಿಯಮದಲ್ಲಿ 18 ವರ್ಷ ಹಾಗೂ ಎರಡನೇ ನಿಯಮದಲ್ಲಿ 21 ವರ್ಷ ಇದೆ. ಈ ಗೊಂದಲ ನಿವಾರಿಸಲು 21 ವರ್ಷ ಎಂದು ಇರುವಲ್ಲಿ 18 ವರ್ಷ ಎಂದು ಉಲ್ಲೇಖಿಸಲು ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು. ಹೀಗಾಗಿ ಕರಡು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು ಎಂದು ಕರಡು ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಯುವಕರಿಗೆ ಮದ್ಯಪಾನ ಅವಕಾಶ ಅಮಲು ಭಾಗ್ಯ: 18 ವರ್ಷದೊಳಗಿನವರಿಗೆ ಮದ್ಯಪಾನಕ್ಕೆ ಅವಕಾಶ ನೀಡುವ ರಾಜ್ಯ ಸರ್ಕಾರದ ಕ್ರಮ ಅಮಲು ಭಾಗ್ಯವಾಗಿದ್ದು, ಯುವಕರನ್ನು ದುಶ್ಚಟಕ್ಕೆ ಬೀಳಿಸಿ ಒಂದು ತಲೆಮಾರನ್ನೇ ನಾಶ ಮಾಡುವ ಹುನ್ನಾರವಾಗಿದೆ. ಮದ್ಯಪಾನ ಆರೋಗ್ಯಕ್ಕೆ ಮಾರಕವಾಗಿದ್ದು ಇದನ್ನು ಯುವಜನತೆಯಲ್ಲಿ ಪ್ರೋತ್ಸಾಹಿಸುತ್ತಿರುವುದು ಸಮಾಜಘಾತುಕ ಕೃತ್ಯಗಳಿಗೆ ಆಹ್ವಾನ ನೀಡಿದಂತೆ. ಯುವಕರಿಗೆ ಮದ್ಯಮಾನಕ್ಕೆ ಅವಕಾಶ ನೀಡುವ ಪ್ರಸ್ತಾಪವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಮಂಗಳೂರು ಶಾಸಕ, ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಈ ನಡೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಸರ್ಕಾರಕ್ಕೆ ಆರೋಗ್ಯ ಮುಖ್ಯವಾಗಬೇಕೇ ಹೊರತು ದುಡ್ಡು ಅಲ್ಲ. ಈಗ ಯುವಕರಿಗೆ ಮದ್ಯಪಾನ ಜಾರಿಗೊಳಿಸಿದರೆ, ನಾಳೆ ಸಿಗರೇಟು, ತಂಬಾಕನ್ನು ಅನುಷ್ಠಾನಗೊಳಿಸಬಹುದು. ನಾನು ಆರೋಗ್ಯ ಸಚಿವನಾಗಿದ್ದಾಗ ಇವೆಲ್ಲದಕ್ಕೂ ಕಡಿವಾಣ ಹಾಕಿದ್ದೆ. ನಮಗೆ ಜನತೆಯ ಆರೋಗ್ಯ ಹಾಗೂ ರಾಜ್ಯದ ನೆಮ್ಮದಿ ಮುಖ್ಯವಾಗಿತ್ತು. ಜನಾಭಿಪ್ರಾಯಕ್ಕೆ ಮಾರಕವಾಗುವ ಯಾವುದೇ ಯೋಜನೆ, ಕಾರ್ಯಕ್ರಮ ಹಾಕಿಕೊಳ್ಳಬಾರದು ಎಂದು ಹೇಳಿದರು.
ಬಿಪಿಎಲ್‌ಗೆ 10 ಕೇಜಿ ಉಚಿತ ಅಕ್ಕಿ: ಕಾಂಗ್ರೆಸ್ ಪಕ್ಷದ 3ನೇ ಭರವಸೆ
ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಪಾನ ನಿಷೇಧಕ್ಕೆ ಆಂದೋಲನ ನಡೆಸಿದರೆ, ಬಿಜೆಪಿ ಸರ್ಕಾರ ಮದ್ಯಪಾನ ಯುವಕರಿಗೆ ಮುಕ್ತವಾಗಿಸಲು ಹೊರಟಿದೆ. ಮದ್ಯಪಾನ ಜಾರಿಗೊಳಿಸಿ 20 ಸಾವಿರ ಕೋಟಿ ರು. ಆದಾಯ ಪಡೆದು ಅದರಲ್ಲಿ ಸಮಾಜದ ಕಲ್ಯಾಣಕ್ಕೆ ಸರ್ಕಾರ ವಿನಿಯೋಗಿಸುವುದು 20 ಕೋಟಿ ರು. ಬಿಹಾರದಲ್ಲಿ ಪೂರ್ತಿ ಪಾನ ನಿಷೇಧ ಸಾಧ್ಯವಾಗಿದೆ. ಹಾಗಿರುವಾಗ ಕರ್ನಾಟಕದಲ್ಲಿ ಮತ್ತೆ ಯುವಕರಿಗೆ ಮದ್ಯಪಾನ ಜಾರಿಗೊಳಿಸುವುದು ಯಾಕೆ? ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಯುವಕರಿಗೆ ಮದ್ಯಪಾನ ಜಾರಿಗೊಳಿಸಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ