ವರುಣನ 5 ಜಿಲ್ಲೆಗಳು ತತ್ತರ: ಮುಂದಿನ 24 ಗಂಟೆಯಲ್ಲಿ ಭಾರೀ ಮಳೆ

By Kannadaprabha NewsFirst Published Jul 7, 2023, 4:26 AM IST
Highlights

ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನು ಎರಡ್ಮೂರು ದಿನ ಹೆಚ್ಚಿನ ಮಳೆ ಆಗಲಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ 20 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. 

ಬೆಂಗಳೂರು(ಜು.07):  ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂದಿನ 24 ಗಂಟೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಈ ಜಿಲ್ಲೆಗಳಿಗೆ ಮತ್ತೆ ‘ರೆಡ್‌ ಅಲರ್ಟ್‌’ ನೀಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನು ಎರಡ್ಮೂರು ದಿನ ಹೆಚ್ಚಿನ ಮಳೆ ಆಗಲಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ 20 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

15 ದಿನ ಬಳಿಕ ಬರ ಘೋಷಣೆ ನಿರ್ಧಾರ

ವಿಧಾನಸಭೆ: ಜುಲೈ 15ರವರೆಗೆ ಸುರಿಯುವ ಮಳೆಯ ಪ್ರಮಾಣವನ್ನು ಗಮನಿಸಿ ರಾಜ್ಯದಲ್ಲಿ ಬರಪೀಡಿತ ಹಳ್ಳಿಗಳ ಘೋಷಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಮಳೆ ಕೊರತೆ ಉಂಟಾಗಿತ್ತು. ಸದ್ಯ ಮಳೆಯ ಪ್ರಮಾಣ ಹೆಚ್ಚಾಗಿದೆ. ಮುಂದಿನ 10 ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆಯಿದೆ. ಉತ್ತರ ಕರ್ನಾಟಕದಲ್ಲೂ ಉತ್ತಮ ಮಳೆಯ ನಿರೀಕ್ಷೆ ಹೊಂದಲಾಗಿದೆ ಎಂದಿದ್ದಾರೆ.

ಚಿಕ್ಕಮಗಳೂರಲ್ಲಿ ವರುಣನ ಅಬ್ಬರಕ್ಕೆ ಧರೆಗುರುಳಿದ ಮರಗಳು: ಮುಂದಿನ 3 ದಿನ ಭಾರೀ ಮಳೆ..!

ಕೇರಳ, ಗೋವಾದಲ್ಲೂ ಮಳೆಯ ರೆಡ್‌ ಅಲರ್ಟ್‌

ಉತ್ತರ ಕರ್ನಾಟಕದ ಅನೇಕ ಕಡೆ ಬರದ ಛಾಯೆ ಆವರಿಸಿರುವ ನಡುವೆಯೇ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ತಡವಾಗಿಯಾದರೂ ಮುಂಗಾರು ಅಬ್ಬರಿಸಲಾರಂಭಿಸಿದೆ. ಬುಧವಾರ ರಾತ್ರಿಯಿದೀಂಚೆಗೆ ಸುರಿದ ಪುನರ್ವಸು ಮಳೆಗೆ ರಾಜ್ಯದ ಐದು ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನದಿ, ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಕರಾವಳಿ ಜಿಲ್ಲೆಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, 650ಕ್ಕೂ ಹೆಚ್ಚು ಮನೆಗಳು ಜಲದಿಗ್ಬಂಧನಕ್ಕೊಳಗಾಗಿವೆ. 100ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇರಳ ಮೂಲದ ವ್ಯಕ್ತಿ ಸೇರಿ ಮಳೆ ಸಂಬಂಧಿ ಅನಾಹುತಕ್ಕೆ ಇಬ್ಬರು ನೀರುಪಾಲಾಗಿದ್ದಾರೆ.

ಇನ್ನು ಉತ್ತರ ಕನ್ನಡದಲ್ಲಿ ಎರಡು ಸೇತುವೆ ಕುಸಿದು ಬಿದ್ದಿದ್ದು, ಕರಾವಳಿ ಮತ್ತು ಮಲೆನಾಡಿನ 10ಕ್ಕೂ ಹೆಚ್ಚು ಕಡೆ ಕಿರು ಸೇತುವೆಗಳು ಮುಳುಗಿ ಸಮಸ್ಯೆಯಾಗಿದೆ. ಕಾವೇರಿ ನದಿ ನೀರಿನ ಮಟ್ಟಹೆಚ್ಚಳವಾಗಿ ತ್ರಿವೇಣಿ ಸಂಗಮ ಭಾಗಶಃ ಮುಳುಗಡೆಯಾಗಿದೆ. ಹವಾಮಾನ ಇಲಾಖೆಯು ಕರಾವಳಿಯಲ್ಲಿ ಶುಕ್ರವಾರ ರೆಡ್‌ ಅಲರ್ಚ್‌ ಮತ್ತು ಮಲೆನಾಡಿನಲ್ಲಿ ಆರೆಂಜ್‌ ಅಲರ್ಚ್‌ ಘೋಷಿಸಿದ್ದು, ಹೀಗಾಗಿ ಕರಾವಳಿ ಜಿಲ್ಲೆಗಳು ಮತ್ತು ಚಿಕ್ಕಮಗಳೂರು, ಕೊಡಗಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕರಾವಳಿಯಲ್ಲಿ ಅಬ್ಬರದ ಮಳೆ:

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆ ಇದೀಗ ಚುರುಕುಗೊಂಡಿದೆ. ಈ ಭಾಗದ ಕುಮಾರಧಾರಾ, ನೇತ್ರಾವತಿ, ಸುವರ್ಣ, ಸೌಪರ್ಣಿಕಾ, ವಾರಾಹಿ, ಶಾಂಭವೀ, ಭಾಸ್ಕೇರಿ ಮತ್ತು ಗುಂಡಬಾಳಾ ಸೇರಿ ಹಲವು ನದಿಗಳ ನೀರಿನ ಮಟ್ಟಹೆಚ್ಚಳವಾಗಿ, ತೀರ ಪ್ರದೇಶಗಳಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮಣ್ಕುಳಿಯಲ್ಲಿ 80ಕ್ಕೂ ಹೆಚ್ಚು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚುಮನೆಗಳಿಗೆ ನೀರು ನುಗ್ಗಿದೆ. 350ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಮಂಗಳೂರು ನಗರದ ಹೊರವಲಯದ ತೋಟಬೆಂಗ್ರೆಯಲ್ಲಿ 80ಕ್ಕೂ ಹೆಚ್ಚು ನಿವಾಸಿಗಳು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ನಡುಗೋಡು, ಮಟ್ಟು, ಮಾನಂಪಾಡಿ, ಮೂಡುಬಿದಿರೆಯ ಬೈಲೂರು ಹಾಗೂ ಉಡುಪಿ ನಗರದಲ್ಲಿ ತಗ್ಗುಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಅದೇ ರೀತಿ ಭಾರೀ ಗಾಳಿಗೆ ಅಂಕೋಲಾ ಸೇರಿ ಕರಾವಳಿಯ ಮೂರೂ ಜಿಲ್ಲೆಗಳಲ್ಲಿ 60ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿದ್ದು, ಹಲವು ಮನೆಗಳಿಗೆ ಮತ್ತು ಒಂದು ಕಾರಿಗೆ ಹಾನಿಯಾಗಿದೆ. ಇನ್ನು ಭಟ್ಕಳದ ರಂಗೀಕಟ್ಟೆರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರ್ನಾಲ್ಕು ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು, ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.

ಇಬ್ಬರು ನೀರುಪಾಲು:

ಸುಳ್ಯದ ಅಲೆಟ್ಟಿಯ ಕೂರ್ನಡ್ಕ ಬಳಿ ಹೊಳೆ ದಾಟುವ ವೇಳೆ ಕೇರಳ ಮೂಲದ ಕೂಲಿ ಕಾರ್ಮಿಕ, ಮೂಡುಬಿದಿರೆಯಲ್ಲಿ ಅಂಗವಿಕಲರೊಬ್ಬರು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಕೊಡಗು-ಚಿಕ್ಕಮಗಳೂರು ತತ್ತರ:

ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗದಲ್ಲಿ ಮಳೆಯಬ್ಬರ ಅಷ್ಟಿರದಿದ್ದರೂ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಬಿರುಸಿನ ಮಳೆ ಜನಜೀವನವನ್ನು ಹೈರಾಣ ಮಾಡಿದೆ. ಕಾವೇರಿ, ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನಮಟ್ಟಏರಿಕೆಯಾಗಿದ್ದು, ನದಿ ತೀರದ ಕೆಲವೆಡೆ ನೀರು ನುಗ್ಗಿದೆ. ಕೊಡಗಿನಲ್ಲಿ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಕಾಣಿಸಿಕೊಂಡಿದ್ದು, ತ್ರಿವೇಣಿ ಸಂಗಮ ಭಾಗಶಃ ಮುಳುಗಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಗಾ ನದಿ ನೀರಿನಮಟ್ಟಏರಿಕೆಯಾಗಿ, ಪ್ರವಾಹದ ಆತಂಕ ಕಾಣಿಸಿಕೊಂಡಿದೆ. ಶೃಂಗೇರಿಯ ಗಾಂಧಿ ಮೈದಾನ, ಬೈಪಾಸ್‌ ರಸ್ತೆಯ ಸಮೀಪಕ್ಕೆ ನದಿಯ ನೀರು ನುಗ್ಗಿದೆ. ಕಳಸದಿಂದ ಕುದುರೆಮುಖ ಸಂಪರ್ಕಿಸುವ ರಸ್ತೆ ಬಿರುಕು ಬಿಟ್ಟಿದೆ. ಶಿವಮೊಗ್ಗದಲ್ಲೂ ಉತ್ತಮ ಮಳೆಯಾಗಿದೆ. ಉತ್ತರ ಕರ್ನಾಟಕದ ಉಳಿದೆಡೆ ಮಳೆಯಾಗದಿದ್ದರೂ ಧಾರವಾಡ ಮತ್ತು ಗದಗದಲ್ಲಿ ಕೆಲಕಾಲ ಉತ್ತಮ ಮಳೆ ಸುರಿದಿದೆ.

ಕೊಡಗಿನಲ್ಲಿ ವಿಪರೀತ ಮಳೆ, ಮಡಿಕೇರಿ-ಮೈಸೂರು ನಡುವೆ ಸಂಚಾರ ಸ್ಥಗಿತ

ಕುಸಿದ ಶಾಲಾ ಛಾವಣಿ, ರಸ್ತೆ ಸಂಪರ್ಕ ಕಡಿತ

ಮಂಗಳೂರು ಹೊರವಲಯದ ತಲಪಾಡಿಯಲ್ಲಿ ಖಾಸಗಿ ವಸತಿ ಶಾಲೆಯ ಆರಂತಸ್ತಿನ ಕಟ್ಟಡದ ಮೇಲೆ ಅಳವಡಿಸಲಾದ ಭಾರೀ ಗಾತ್ರದ ಶೀಟ್‌ ಛಾವಣಿ ಕುಸಿದು ಬಿದ್ದಿದ್ದು, ಶಾಲೆಗೆ ರಜೆ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ದೇಗುಲಗಳು ಜಲಾವೃತ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ತುಂಗಾ ನದಿ ದಡದಲ್ಲಿರುವ ಶೃಂಗೇರಿ ಶ್ರೀ ಶಾರದಾಂಬೆ ದೇವಾಲಯದ ಕಪ್ಪೆ ಶಂಕರ ದೇಗುಲ ಮುಳುಗಡೆಯಾದರೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ಪ್ರಸಿದ್ಧ ಬಪ್ಪನಾಡು ದುರ್ಗಾ ಪರಮೇಶ್ವರಿ ದೇಗುಲಕ್ಕೆ ನೀರು ನುಗ್ಗಿದೆ. ಇದರಿಂದ ಭಕ್ತರು ನೀರಿನಲ್ಲಿ ನಿಂತೇ ದೇವರ ದರ್ಶನ ಪಡೆಯಬೇಕಾಯಿತು. ಅದೇ ರೀತಿ ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಮಧೂರು ಗಣಪತಿ ದೇವಾಲಯ ಕೂಡ ಜಲಾವೃತವಾಗಿದೆ.

click me!