ವಾಲ್ಮೀಕಿಯಷ್ಟೇ ಭೈರಪ್ಪ ಜನಪ್ರಿಯ: ಕಂಬಾರ| ಅವರ ಬಗ್ಗೆ ಕೃತಿಗಳು ಬರಬೇಕು| ಮೈಸೂರಿನಲ್ಲಿ ಭೈರಪ್ಪ ಸಾಹಿತ್ಯೋತ್ಸವ
ಮೈಸೂರು[ಜ.20]: ಕುವೆಂಪು ಮತ್ತು ಭೈರಪ್ಪ ಅವರು ತಮ್ಮ ಬರಹದ ಮೂಲಕವೇ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದಲ್ಲಿ ಶನಿವಾರ ಡಾ. ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನವು ಆಯೋಜಿಸಿರುವ ಎರಡು ದಿನಗಳ ಡಾ. ಎಸ್.ಎಲ್. ಭೈರಪ್ಪ ಸಾಹಿತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
undefined
ವ್ಯಾಸ, ವಾಲ್ಮೀಕಿಯಷ್ಟೇ ಜನಪ್ರಿಯತೆ, ಸಮಾನ ಖ್ಯಾತಿ ಭೈರಪ್ಪ ಅವರಿಗೆ ಇದೆ. ದೇಶ, ವಿದೇಶದಲ್ಲಿಯೂ ಓದುಗ ಅಭಿಮಾನಿಗಳಿದ್ದಾರೆ. ಭೈರಪ್ಪನವರ ಬಗ್ಗೆ ಮಾತನಾಡುವ ಬದಲು ಕೃತಿಗಳು ಬರಬೇಕು. ಕುವೆಂಪು ಅವರು ರಾಮಾಯಣ ದರ್ಶನಂ ಮೂಲಕ ಕ್ರಾಂತಿ ಮಾಡಿದರೆ, ಎಸ್.ಎಲ್. ಭೈರಪ್ಪನವರು ತಮ್ಮ ಕಾದಂಬರಿಯ ಮೂಲಕ ದೊಡ್ಡ ಕ್ರಾಂತಿ ಮಾಡಿದರು. ನಾನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾದ ಮೇಲೆ ಎಲ್ಲೆಡೆಯೂ ಹೋಗುತ್ತಿರಬೇಕಾದರೆ ಭೈರಪ್ಪ ಅವರ ಬಗ್ಗೆ ಕೇಳುತ್ತಾರೆ. ಭೈರಪ್ಪ ನಿಮ್ಮೂರಿನವರಂತೆ, ಮೈಸೂರಿನವರಂತೆ ಎನ್ನುತ್ತಾರೆ. ದೇಶದ 24 ಭಾಷೆಯಲ್ಲಿಯೂ ಭೈರಪ್ಪನವರು ಕಾದಂಬರಿಯ ಮೂಲಕ ಜನಪ್ರಿಯತೆ ಹೊಂದಿದ್ದಾರೆ. ಅವರ ಕಾದಂಬರಿಗಳಲ್ಲಿರುವ ಖಚಿತತೆ, ಕಥನಗಳು ಅರ್ಥಗರ್ಭೀತವಾಗಿದೆ. ಪ್ರತಿಯೊಂದು ಪದಗಳಲ್ಲೂ ಜೀವಂತಿಕೆ ತುಂಬಿದ್ದಾರೆ ಎಂದು ಹೇಳಿದರು.
ಭೈರಪ್ಪರ ಮುಂದೆ ನಾನೂ ಮಾತನಾಡೋದು ಸ್ವಲ್ಪ ಕಷ್ಟ. ಕಾರ್ಯಕ್ರಮಕ್ಕೆ ಬರುವ ಮುನ್ನ ಏನು ಮಾತನಾಡಬೇಕೆಂದು ಅಂದುಕೊಂಡಿದ್ದೆನೋ ಅಂತಹ ಮಾತುಗಳೇ ಹೊರಬರುವುದಿಲ್ಲ ಎಂದರು.
ಶತಾವಧಾನಿ ಡಾ. ಆರ್. ಗಣೇಶ್ ಮಾತನಾಡಿ, ಕೆಲವರು ಒಂದು ಧರ್ಮದ ಬಗ್ಗೆ ಭೈರಪ್ಪ ಅವರಿಗೆ ಹೆಚ್ಚು ಅಭಿಮಾನ ಎನ್ನುತ್ತಾರೆ. ಆದರೆ ಸನಾತನ, ಧರ್ಮದ ಅಂದಾಭಿಮಾದ ಬಗ್ಗೆ ಚಿಕಿತ್ಸಾತ್ಮಕ ಲೇಖನವನ್ನು ಭೈರಪ್ಪ ಹೊರತು ಬೇರೆ ಯಾರೂ ಬರೆದಿಲ್ಲ. ಈ ರೀತಿಯ ಲೇಖಕರೂ ನಮ್ಮಲ್ಲಿ ಇಲ್ಲವೇ ಇಲ್ಲ ಎನ್ನುವುದನ್ನು ಅರಿಯಬೇಕು. ಅವರು ತಮ್ಮ ಕಾದಂಬರಿಗಳಲ್ಲಿ ಏಕಮುಖವಾಗಿ ಸ್ವೀಕರಿಸುವಂತೆ ಮಾಡಿಲ್ಲ. ಪ್ರತಿ ಹಂತದಲ್ಲಿಯೂ ಕಲಾತ್ಮಕತೆ, ಕಥೆಗಳು ಸಿಗುವಂತೆ ಮಾಡಿದ್ದಾರೆ. ಭೈರಪ್ಪ ಬಗ್ಗೆ ಬಂದಿರುವ ಸಂಶೋಧನೆಗಳು, ಪ್ರಬಂಧಗಳನ್ನು ಮೀರಿ ನಿರೀಕ್ಷೆಗೆ ತಕ್ಕಂತೆ ಮಾತನಾಡಬೇಕಿದೆ. ಭೈರಪ್ಪ ಅವರ ಕಾದಂಬರಿಗಳಲ್ಲಿ ಶಾಂತತೆ, ತಟಸ್ಥತೆ, ಸಹಾನುಭೂತಿ ಸೇರಿ ಜಗತ್ತು ನೋಡುವ ಪ್ರಜ್ಞೆ ಇದೆ ಎಂದು ತಿಳಿಸಿದರು.
ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ, ಹಿರಿಯ ಲೇಖಕ ಡಾ. ಪ್ರಧಾನ ಗುರುದತ್ತ, ನಿರ್ದೇಶಕ ಪಿ. ಶೇಷಾದ್ರಿ, ಸಾಹಿತಿ ಡಾ. ಕೃಷ್ಣೇಗೌಡ ಇದ್ದರು.
ಕೆಲವರು ಭೈರಪ್ಪ ಅವರ ಕಾದಂಬರಿಗಳಲ್ಲಿ ಚರ್ಚೆಗೆ ಅವಕಾಶವಿಲ್ಲ. ಆಚಾರ ಇಲ್ಲವೇ ಇಲ್ಲ ಅಂದಿದ್ದಾರೆ. ಪಾಶ್ಚಾತ್ಯ ಸಾಹಿತ್ಯಕ್ಕೆ ಹೋಲಿಸಿದರೆ ಭಾರತೀಯ ಸಾಹಿತ್ಯದಲ್ಲಿ ಭೈರಪ್ಪ ಅವರ ಕಾದಂಬರಿಗಳು ಅರ್ಥಗರ್ಭಿತವಾಗಿದೆ. ಅವರ ಕಾದಂಬರಿಗಳು ಒಂದು ಜಾತಿ, ವರ್ಗಕ್ಕೆ ಸೀಮಿತವಾಗಿಲ್ಲ. ಪ್ರತಿಯೊಂದು ನಮ್ಮ ಅಸ್ಮಿತೆಯಂತೆ ರೂಪುಗೊಂಡಿದೆ. ಕಾಮ, ಕ್ರೋಧ, ರಾಗ ದ್ವೇಷ ಕಾಲದಲ್ಲಿ ನೋಡದೆ ಭಗವದ್ಗೀತೆಯ ನೆಲದಲ್ಲಿ ನೋಡಬೇಕು. ಶತಮಾನಗಳು ಕಳೆದಾಗ ಇಂಥವರನ್ನು ಒಮ್ಮೊಮ್ಮೆ ಹುಟ್ಟಿಬರುತ್ತಾರೆ ಅನ್ನುವ ಮಾತಿನಂತೆ ಬೇಂದ್ರೆ, ಕುವೆಂಪು,ಅಡಿಗರು ಮೊದಲಾದವರ ನಂತರದಲ್ಲಿ ಈಗ ಭೈರಪ್ಪ ಇದ್ದಾರೆ ಎಂದು ಬಣ್ಣಿಸಿದರು.