
ಹಾವೇರಿ (ಸೆ.21): ಎಐ ಬಂದ ಮೇಲೆ ನಮ್ಮ ಬದುಕು ಇನ್ನಷ್ಟು ಬದಲಾವಣೆಯಾಗಿದೆ. ಈ ಸಂದರ್ಭದಲ್ಲಿ ನಮ್ಮ ಮೌಲ್ಯಗಳು ಬದಲಾವಣೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಧಾರ್ಮಿಕ, ಸಾಮಾಜಿಕ ಮೌಲ್ಯಗಳು ಅಷ್ಟೇ ಅಲ್ಲ. ನ್ಯಾಯಾಂಗದ ಮೌಲ್ಯ ಕೂಡ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಕಟ್ಟಡದಲ್ಲಿ ಶನಿವಾರ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಅಂಚೆ ಕಚೇರಿ ಆಶ್ರಯದಲ್ಲಿ ನೂತನ ಅಂಚೆ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.
ಹಾವೇರಿಯಲ್ಲಿ ಅತ್ಯಂತ ಅವಶ್ಯಕತೆ ಇರುವ ಅಂಚೆ ಕಚೇರಿ ಉದ್ಘಾಟನೆಯಾಗುತ್ತಿರುವುದು ನಾವೆಲ್ಲರೂ ಸಂತೋಷ ಪಡುವ ವಿಚಾರ. ಆಧುನಿಕರಣ, ತಂತ್ರಜ್ಞಾನ ಹೊಸದಾಗಿ ಬಂದಿದ್ದರೂ ಅಂಚೆಗೆ ತನ್ನದೆ ಆದ ಮಹತ್ವ ಇದೆ. ನೀವು ಯಾರಿಗಾದರೂ ನೋಟಿಸ್ ಕಳುಹಿಸಿದರೆ ಅದರ ಕಾನೂನು ಮಾನ್ಯತೆ ಅಂಚೆ ಪತ್ರದ ಮೇಲೆ ಇರುತ್ತದೆ. ಇದು ಎಲ್ಲರಿಗೂ ಬಹಳ ಉಪಯುಕ್ತವಾಗಿದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳುವ ವಿಶ್ವಾಸ ಇದೆ ಎಂದರು.
ಎಐ ಬಂದ ಮೇಲೆ ನಮ್ಮ ಬದುಕು ಇನ್ನಷ್ಟು ಬದಲಾವಣೆಯಾಗಿದೆ. ಈ ಸಂದರ್ಭದಲ್ಲಿ ನಮ್ಮ ಮೌಲ್ಯಗಳು ಬದಲಾವಣೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಮೌಲ್ಯಗಳು ಅಂದರೆ, ಧಾರ್ಮಿಕ, ಸಾಮಾಜಿಕ ಮೌಲ್ಯಗಳು ಅಷ್ಟೇ ಅಲ್ಲ. ನ್ಯಾಯಾಂಗದ ಮೌಲ್ಯ ಕೂಡ ಸಾತ್ವಿಕವಾಗಿರಬೇಕು ಎಂದರು. ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಎಸ್. ವಿಶ್ವಜೀತ್ ಶೆಟ್ಟಿ ಅಂಚೆ ಕಚೇರಿ ಉದ್ಘಾಟಿಸಿ ಮಾತನಾಡಿ, ಕಂಪ್ಯೂಟರ್ ಯುಗ ಬಂದರೂ ನ್ಯಾಯಾಂಗ ಇಲಾಖೆಯ ದಾಖಲಾತಿ ವಿಲೇ ಮಾಡಲಿಕ್ಕೆ ಅಂಚೆ ಸೇವೆಯನ್ನು ಬಳಸುತ್ತೇವೆ. ಯುವ ಪೀಳಿಗೆಗೆ ಅಂಚೆ ಇಲಾಖೆಯ ಮಹತ್ವ ಗೊತ್ತಿರಲಿಕ್ಕಿಲ್ಲ.
ಕಾಲಕ್ರಮೇಣ ಬದಲಾಗಿದೆ. ಆದರೂ ಅಂಚೆ ಸೇವೆ ತನ್ನದೆಯಾದ ಛಾಪು ಉಳಿಸಿಕೊಂಡಿದೆ. ಶಿಗ್ಗಾಂವಿಯಲ್ಲಿ ಹೆಚ್ಚುವರಿ ಕೋರ್ಟ್ ನಿರ್ಮಾಣ ಮಾಡಬೇಕೆಂಬ ಪ್ರಸ್ತಾವನೆ ಇದ್ದು, ಹೆಚ್ಚುವರಿ ನ್ಯಾಯಾಲಯ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿರಾದಾರ ದೇವಿಂದ್ರಪ್ಪ ಎನ್., ಅಂಚೆ ಅಧೀಕ್ಷಕರಾದ ಮಂಜುನಾಥ ಜಿ. ಹುಬ್ಬಳ್ಳಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎಚ್. ಜತ್ತಿ, ಕಾರ್ಯದರ್ಶಿಗಳಾದ ಪಿ.ಎಸ್. ಹೆಬ್ಬಾಳ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ನಿಂಗನಗೌಡ ಪಾಟೀಲ್ ಮೊದಲಾದವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ