ಲಂಚದ ವಿಡಿಯೋ ಸ್ಪೀಕರ್‌ಗೆ ನೀಡಲಿ, ಪ್ರಿಯಾಂಕ್‌ ಖರ್ಗೆಗೆ ದಡೇಸುಗೂರ್‌ ಸವಾಲ್‌

By Kannadaprabha NewsFirst Published Sep 14, 2022, 2:29 PM IST
Highlights

ಧೈರ್ಯ ಇದ್ದರೆ ನನ್ನ ವಿರುದ್ಧ ಚುನಾವಣೆಗೆ ನಿಂತು ಎದುರಿಸಬೇಕು. ಸುಖಾಸುಮ್ಮನೆ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜವಿಲ್ಲ: ದಢೇಸೂಗೂರು 

ಬೆಂಗಳೂರು(ಸೆ.14):  ಪಿಎಸ್‌ಐ ಹುದ್ದೆ ಕೊಡಿಸಲು ಹಣ ಪಡೆದಿದ್ದೇನೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ, ತಾಕತ್‌ ಇದ್ದರೆ ಆ ವಿಡಿಯೋವನ್ನು ವಿಧಾನಸಭೆಯ ಸ್ಪೀಕರ್‌ ಎದುರು ಮಂಡಿಸಲಿ ಎಂದು ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಸವಾಲು ಹಾಕಿದ್ದಾರೆ.

ಮಂಗಳವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಿಎಸ್‌ಐ ಹುದ್ದೆ ಕೊಡಿಸಲು ಹಣ ಪಡೆದಿದ್ದೇನೆ ಎಂಬುದಾಗಿ ಕಾಂಗ್ರೆಸ್‌ ನಾಯಕರು ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ. ಶಾಸಕರಿಗೆ ಹಣ ಕೊಟ್ಟಿದ್ದೇನೆ ಎಂದು ಹಣ ಕೊಟ್ಟವರು ಬಂದು ಹೇಳಬೇಕು. ಆದರೆ, ಯಾರೊಬ್ಬರು ನಾನು ಹಣ ಕೊಟ್ಟಿದ್ದೇನೆ ಎಂದು ಹೇಳುತ್ತಿಲ್ಲ. ಕಾಂಗ್ರೆಸ್‌ ನಾಯಕರು ಸ್ವ ಹಿತಾಸಕ್ತಿಗಾಗಿ ಹಾಗೂ ರಾಜಕೀಯ ಕುತಂತ್ರದಿಂದ ನನ್ನ ವಿರುದ್ಧ ಹಣ ಪಡೆದ ಆರೋಪ ಮಾಡುತ್ತಿದ್ದಾರೆ ಎಂದರು.

PSI Recruitment Scam: ಇದು ಸುಳ್ಳು, ರಾಜಕೀಯ ಷಡ್ಯಂತ್ರ: ದಡೇಸುಗೂರ್‌

ಕಾಂಗ್ರೆಸ್‌ನವರು ಬಿಡುಗಡೆ ಮಾಡಿರುವ ವಿಡಿಯೋ ಹಾಗೂ ಫೋಟೋಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಪರಸಪ್ಪನೇ ಉತ್ತರ ಕೊಡುತ್ತಾರೆ. ಶಾಸಕ ಪ್ರಿಯಾಂಕ್‌ ಖರ್ಗೆ ನಾನು ಹಣ ಪಡೆದಿರುವ ಬಗ್ಗೆ ಸಾಕಷ್ಟುವಿಡಿಯೋ ಇವೆ ಎಂದು ಹೇಳಿದ್ದಾರೆ. ತಾಕತ್‌ ಇದ್ದರೆ ಆ ವಿಡಿಯೋಗಳನ್ನು ವಿಧಾನಸಭಾ ಸ್ಪೀಕರ್‌ ಬಳಿ ಮಂಡಿಸಬೇಕು. ಇನ್ನು 15 ಜನರಿಂದ ನಾನು ಹಣ ಪಡೆದಿದ್ದೇನೆ ಎಂದು ಹೇಳಿದ್ದಾರೆ. ನನ್ನದೇ ಕಾರು ಕಳುಹಿಸುತ್ತೇನೆ. ಆ 15 ಜನರನ್ನು ಮಾಧ್ಯಮಗಳ ಎದುರು ಕರೆತಂದು ಶಾಸಕರು ಹಣ ಪಡೆದಿದ್ದಾರೆ ಎಂದು ಹೇಳಿಸಲಿ ಎಂದು ಸವಾಲು ಹಾಕಿದರು.

ರಾಜಕೀಯಕ್ಕಾಗಿ ಶಾಸಕ ಪ್ರಿಯಾಂಕ್‌ ಖರ್ಗೆ ಹೀಗೆ ಕುತಂತ್ರ ಮಾಡುತ್ತಿದ್ದಾರೆ. ಮಾಜಿ ಸಚಿವರಾದವರು ಸ್ವಾಭಿಮಾನದಿಂದ ಬದುಕುಬೇಕು. ಧೈರ್ಯ ಇದ್ದರೆ ನನ್ನ ವಿರುದ್ಧ ಚುನಾವಣೆಗೆ ನಿಂತು ಎದುರಿಸಬೇಕು. ಸುಖಾಸುಮ್ಮನೆ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜವಿಲ್ಲ. ಕಾಂಗ್ರೆಸ್‌ನವರು ಬಿಡುಗಡೆ ಮಾಡಿರುವ ಆಡಿಯೋ ತಿರುಚಲಾಗಿದೆ. ನಾನು ಯಾವುದೋ ವಿಚಾರದ ಪಂಚಾಯಿತಿ ಬಗೆಹರಿಸಲು ಹೋಗಿದ್ದಾಗಿನ ಆಡಿಯೋ ಅದು. ಪರಸಪ್ಪನ ಮಗ ಪಿಎಸ್‌ಐ ನೇಮಕಾತಿಯ ದೈಹಿಕ ಪರೀಕ್ಷೆಯನ್ನೇ ಪಾಸು ಮಾಡಿಲ್ಲ. ಇನ್ನೂ ಪಿಎಸ್‌ಐ ಆಗುವುದು ಹೇಗೆ ಎಂದು ಪ್ರಶ್ನಿಸಿದರು. ಇನ್ನು ನನ್ನ ವಿರುದ್ಧ ಕೇಳಿ ಬಂದಿರುವ ಹಣ ಪಡೆದ ಆರೋಪ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವುದೇ ವರದಿ ಕೇಳಿಲ್ಲ ಎಂದು ದಢೇಸೂಗೂರು  ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

click me!