ಬಿಜೆಪಿಯವರು ಮೊದಲು ಕೇಂದ್ರದಿಂದ ಬರ ಪರಿಹಾರ ತರಲಿ: ಕಮಲ ನಾಯಕರಿಗೆ ಡಿಕೆಶಿ ತಿರುಗೇಟು

By Kannadaprabha News  |  First Published Dec 8, 2023, 2:00 PM IST

ಬರಗಾಲ ಬಂದಿದೆ. ವಿಪಕ್ಷ ನಾಯಕರು ಕೂಡ ಬರ ಅಧ್ಯಯನಕ್ಕಾಗಿ ಓಡಾಡಿದ್ದಾರೆ. ಅವರು ಕೇಂದ್ರದಿಂದ ಪರಿಹಾರ ಕೊಡಿಸಲಿ. ನರೇಗಾದಡಿ 100 ಕೆಲಸದ ದಿನಗಳನ್ನು 150 ದಿನಗಳಿಗೆ ವಿಸ್ತರಿಸಬಹುದು. ಇದನ್ನು ಕೇಂದ್ರದಿಂದ ಘೋಷಣೆ ಮಾಡಿಸುತ್ತಿಲ್ಲ ಯಾಕೆ? ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಕೊಡಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್ 


ಬೆಳಗಾವಿ(ಡಿ.08):  ಬಿಜೆಪಿ ನಾಯಕರು ಬರಗಾಲದ ಬಗ್ಗೆ ಸುಮ್ಮನೆ ಮಾತನಾಡುವ ಬದಲು ಕೇಂದ್ರದಿಂದ ಪರಿಹಾರ ತರಲಿ. ಜತೆಗೆ ನರೇಗಾ ಯೋಜನೆಯಡಿ ಮಾನವ ದಿನಗಳನ್ನು 150ಕ್ಕೆ ಹೆಚ್ಚಳ ಮಾಡಿಸಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ನಗರದ ವಿಮಾನ ನಿಲ್ದಾಣದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ರಾಜ್ಯ ಬಿಟ್ಟು ತೆಲಂಗಾಣಕ್ಕೆ ಹೋಗಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದರು. ಬರಗಾಲ ಬಂದಿದೆ. ವಿಪಕ್ಷ ನಾಯಕರು ಕೂಡ ಬರ ಅಧ್ಯಯನಕ್ಕಾಗಿ ಓಡಾಡಿದ್ದಾರೆ. ಅವರು ಕೇಂದ್ರದಿಂದ ಪರಿಹಾರ ಕೊಡಿಸಲಿ. ನರೇಗಾದಡಿ 100 ಕೆಲಸದ ದಿನಗಳನ್ನು 150 ದಿನಗಳಿಗೆ ವಿಸ್ತರಿಸಬಹುದು. ಇದನ್ನು ಕೇಂದ್ರದಿಂದ ಘೋಷಣೆ ಮಾಡಿಸುತ್ತಿಲ್ಲ ಯಾಕೆ? ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಕೊಡಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

Tap to resize

Latest Videos

ಬೆಳಗಾವಿ: ಮಹದಾಯಿಯಲ್ಲಿ ನಮ್ಗೆ 7.5 ಟಿಎಂಸಿ ನೀರು ಬೇಕೆಂದು ಪಾದಯಾತ್ರೆ, ಮುರುಘೇಂದ್ರ ಶ್ರೀ

ನಮ್ಮ ಸರ್ಕಾರದಲ್ಲಿ ಕಂದಾಯ ಹಾಗೂ ಕೃಷಿ ಸಚಿವರು ಎಲ್ಲರಿಗಿಂತ ಮುಂಚಿತವಾಗಿ ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಕ್ಕೆ ತುತ್ತಾಗಿದ್ದು, ಪರಿಹಾರ ಬೇಕು ಎಂದಿದ್ದಾರೆ. ಈವರೆಗೂ ಕೇಂದ್ರ ಸರ್ಕಾರ ಬಿಡಿಗಾಸು ಪರಿಹಾರ ನೀಡಿಲ್ಲ. ಈಗ ಅವರು ಬಿಜೆಪಿ ನಾಯಕರು ತಮ್ಮ ವರದಿ ಕೊಟ್ಟು ಪರಿಹಾರ ಕೊಡಿಸಲಿ. ಬರಗಾಲ ಎಂದು ಕೇವಲ ಮಾತನಾಡುವುದಲ್ಲ. ಬರೀ ಆರೋಪ ಮಾಡುವುದಕ್ಕಿಂತ ತಾನು ಏನು ಮಾಡಿದ್ದೇವೆ ಎಂದು ಹೇಳಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದಿಂದ ಯಾವ ಪ್ಯಾಕೇಜ್ ಘೋಷಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಈ ವಿಚಾರವಾಗಿ ಮುಖ್ಯಮಂತ್ರಿಗಳು ಯಾರಿಗೆ ಯಾವ ರೀತಿ ಪರಿಹಾರ ನೀಡಬೇಕು ಎಂದು ಮಾತನಾಡಿದ್ದಾರೆ. ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಗೋಶಾಲೆಗಳಿಗೆ ಮೇವು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಇನ್ನು ತೆಲಂಗಾಣ ಸರ್ಕಾರ ರಚನೆ ಬಗ್ಗೆ ಮಾತನಾಡಿ, ಸೋನಿಯಾ ಗಾಂಧಿ ಅವರು ತೆಲಂಗಾಣ ರಾಜ್ಯ ರಚನೆಗೆ ನೆರವಾಗಿದ್ದರು. ಕೆಸಿಆರ್ ಅವರು ಪಕ್ಷವನ್ನು ವಿಲೀನ ಮಾಡಿ ನಮ್ಮ ಜೊತೆ ಇರುವುದಾಗಿ ಹೇಳಿದ್ದರು. ಆದರೆ ಅವರು ಪ್ರತ್ಯೇಕವಾಗಿ 10 ವರ್ಷಗಳ ಕಾಲ ಸರ್ಕಾರ ನಡೆಸಿದರು. ಈ ವಿಚಾರವಾಗಿ ನಾವು ಜನರಿಗೆ ಮನದಟ್ಟು ಮಾಡಿಕೊಟ್ಟು ನಿಮ್ಮಲ್ಲಿ ಬದಲಾವಣೆ ತರುತ್ತೇವೆ ಎಂದು ಭರವಸೆ ನೀಡಿದೆವು. ಹೀಗಾಗಿ ತೆಲಂಗಾಣ ರಾಜ್ಯದ ಜನ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು.

ನಮ್ಮ ರಾಜ್ಯದ ಚುನಾವಣೆ ಸಂದರ್ಭದಲ್ಲಿ ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ನೆರೆ ರಾಜ್ಯದ ಕಾಂಗ್ರೆಸ್ ನಾಯಕರು ಬಂದು ಕೆಲಸ ಮಾಡಿದ್ದರು. ಹೀಗಾಗಿ ನಮ್ಮ 45 ನಾಯಕರು ಎರಡು ಮೂರು ತಿಂಗಳ ಕಾಲ ಇಲ್ಲಿ ಕೆಲಸ ಮಾಡಿದ್ದಾರೆ. ರಾಜಕಾರಣದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿದ್ದೇವೆ ಎಂದರು.

ಬರ ನಿರ್ವಹಣೆಗೆ ಬರ: ಬೆಳೆ ನಷ್ಟ ಪರಿಹಾರ ಮರೀಚಿಕೆ, ನೀರು ಮೇವಿಗೂ ಅಭಾವ..!

ಮುಂದೆ ಜಾಮೀನು ಪಡೆಯಲು ನಾರಾಯಣ ಹೃದಯಾಲಯದಲ್ಲಿ ಬೆಡ್ ಬುಕ್ ಮಾಡಿಕೊಳ್ಳಲಿ ಎಂಬ ಯತ್ನಾಳ್ ಅವರ ಟೀಕೆ ಕುರಿತು ಪ್ರತಿಕ್ರಿಯಿಸಿ, ಅವರು ಹೇಳಿದಂತೆ ಮಾಡೋಣ ಎಂದಷ್ಟೇ ಹೇಳಿದರು.

ಕಾಂಗ್ರೆಸ್ ಸರ್ಕಾರ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ದೇಶದ ಸಂವಿಧಾನದಲ್ಲಿ ಎಲ್ಲಾ ಜನಾಂಗಕ್ಕೆ ರಕ್ಷಣೆ ನೀಡಬೇಕು ಎಂದು ಹೇಳಿದೆ. ಜನಸಂಖ್ಯೆ ಆಧಾರದ ಮೇಲೆ ಆಯಾ ವರ್ಗಕ್ಕೆ ಸಹಾಯ ಮಾಡುತ್ತೇವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೂ ನಾವು ಸಹಾಯ ಮಾಡುತ್ತಿದ್ದೇವೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

click me!