ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪಕ್ಕೆ ದಾಖಲೆ ಸಲ್ಲಿಸಿದ ಕೆಂಪಣ್ಣ

By Kannadaprabha NewsFirst Published Dec 8, 2023, 8:18 AM IST
Highlights

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆ ಕಾಮಗಾರಿಗಳಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ವಿಚಾರಣಾ ಆಯೋಗಕ್ಕೆ ಆಡಿಯೋ, ವಿಡಿಯೋ ಸಹಿತ ಸುಮಾರು ಆರು ಸಾವಿರ ಪುಟಗಳ ದಾಖಲೆಗಳನ್ನು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಗುರುವಾರ ಸಲ್ಲಿಸಿದೆ.

ಬೆಂಗಳೂರು (ಡಿ.8) :  ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆ ಕಾಮಗಾರಿಗಳಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ವಿಚಾರಣಾ ಆಯೋಗಕ್ಕೆ ಆಡಿಯೋ, ವಿಡಿಯೋ ಸಹಿತ ಸುಮಾರು ಆರು ಸಾವಿರ ಪುಟಗಳ ದಾಖಲೆಗಳನ್ನು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಗುರುವಾರ ಸಲ್ಲಿಸಿದೆ.

ನಗರದ ಕೆ.ಆರ್. ವೃತ್ತದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಆಯೋಗದ ಕಚೇರಿಗೆ ತೆರಳಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರಿಗೆ ದಾಖಲೆಗಳನ್ನು ಹಸ್ತಾಂತರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆಂಪಣ್ಣ, ‘ಹಿಂದಿನ ಸರ್ಕಾರ ಮಾತ್ರವಲ್ಲದೇ, ಈಗಿನ ಕಾಂಗ್ರೆಸ್ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಅದರ ಬಗ್ಗೆಯು ದಾಖಲೆಗಳನ್ನು ಸಲ್ಲಿಸಲಾಗಿದೆ. ಲಿಖಿತ ರೂಪದಲ್ಲಿ ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದರು.

ಕಮಿಷನ್ ಕೇಳಿಲ್ಲ ಎಂದರೆ ಡಿಕೆಶಿ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ: ಸಿಟಿ ರವಿ ಸವಾಲು

‘ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಬಿಬಿಎಂಪಿ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ಕಮಿಷನ್ ಆರೋಪದ ಬಗ್ಗೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಆರ್‌ಟಿಐ ಅಡಿ ಕೆಲವು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆ ಎಲ್ಲ ದಾಖಲೆಗಳು ಲಭ್ಯವಾದ ಬಳಿಕ ಮತ್ತೊಮ್ಮೆ ಸಲ್ಲಿಸುತ್ತೇವೆ. ಡಿಸೆಂಬರ್ ಅಂತ್ಯದೊಳಗೆ ಸಲ್ಲಿಕೆ ಮಾಡುವಂತೆ ನ್ಯಾಯಮೂರ್ತಿ ತಿಳಿಸಿದ್ದಾರೆ. ಅಷ್ಟರೊಳಗೆ ದಾಖಲೆ ಸಲ್ಲಿಕೆ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಕೆಂಪಣ್ಣ ತಿಳಿಸಿದರು.

‘ಗುತ್ತಿಗೆದಾರರಲ್ಲದವರಿಗೆ ಗುತ್ತಿಗೆ ನೀಡಿರುವುದು, ಕಮಿಷನ್ ನೀಡುವವರಿಗೆ ಗುತ್ತಿಗೆ ನೀಡಿರುವುದು, ಹಣ ಬಿಡುಗಡೆಯಲ್ಲಿ ತಾರತಮ್ಯ ಮಾಡಿರುವುದು ಸೇರಿದಂತೆ ಅನೇಕ ಆರೋಪಗಳ ದಾಖಲೆಗಳಿವೆ. ಆಯೋಗಕ್ಕೆ ನೀಡಿರುವ ದಾಖಲಾತಿಗಳಲ್ಲಿ ಏನಿದೆ ಎಂದು ನಾನು ಹೇಳುವುದಿಲ್ಲ. ಯಾವುದೇ ರೀತಿಯ ಹೆಚ್ಚುವರಿ ದಾಖಲೆಗಳನ್ನು ಕೇಳಿದರೆ ನೀಡುತ್ತೇವೆ. ವಿಚಾರಣೆಗೆ ಹಾಜರಾಗುತ್ತೇವೆ’ ಎಂದರು.

‘ಈ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳ ರಾಜ್ಯಭಾರ ನಡೆಯುತ್ತಿದೆ. ಆದರೆ, ಸಚಿವರ ವಿರುದ್ಧ ದೂರುಗಳು ಬಂದಿಲ್ಲ. ದೂರುಗಳು ಬಂದರೆ ಯಾರಿಗೂ ಹೆದರದೆ ಆಯೋಗಕ್ಕೆ ದಾಖಲೆ ಸಲ್ಲಿಸುತ್ತೇವೆ. ಬಿಬಿಎಂಪಿ ಮುಖ್ಯ ಎಂಜಿನಿಯರ್ ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅದನ್ನು ಎದುರಿಸುತ್ತೇವೆ. ಈ ಸರ್ಕಾರದಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ಇದೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇವೆ’ ಎಂದು ಕೆಂಪಣ್ಣ ಹೇಳಿದರು.

ನ್ಯಾಯ ಸಿಗದಿದ್ದರೆ ಹೋರಾಟ:

‘ಈ ಸರ್ಕಾರದಲ್ಲಿನ ಭ್ರಷ್ಟಾಚಾರದ ಕುರಿತು ಬೆಳಗಾವಿ ಅಧಿವೇಶನಕ್ಕೆ ತೆರಳುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇವೆ. ಅದನ್ನು ನಿಯಂತ್ರಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲು ಕೋರಿದ್ದೇವೆ. ನಿಯಂತ್ರಿಸದಿದ್ದರೆ ಅನಿವಾರ್ಯವಾಗಿ ಪ್ರತಿ ಜಿಲ್ಲೆಗೆ ಹೋಗಿ ಜನರೊಂದಿಗೆ ಸೇರಿ ಹೋರಾಟ ಮಾಡುತ್ತೇವೆ. ಹಿಂದಿನ ಸರ್ಕಾರದ ವಿರುದ್ಧ ನಡೆದ ಹೋರಾಟದ ಮಾದರಿಯಲ್ಲೇ ಈ ಸರ್ಕಾರದ ವಿರುದ್ಧವೂ ಹೋರಾಡುತ್ತೇವೆ. ಈಗ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಗಿದ್ದು, ಮುಂದಿನ ಹಂತದಲ್ಲಿ ರಾಜ್ಯಪಾಲರು, ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳಿಗೂ ದೂರು ನೀಡುತ್ತೇವೆ’ ಎಂದು ಕೆಂಪಣ್ಣ ಹೇಳಿದರು. 

 

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಮಿಷನ್‌ಗಾಗಿ ಜೀವ ಕಸಿದವರನ್ನ ಜೈಲಿಗೆ ಹಾಕ್ತೇವೆ: ಸುರ್ಜೇವಾಲಾ

ಹಿಂದಿನ ಸರ್ಕಾರದ ಕಮಿಷನ್ ಹಾಗೂ ಈಗಿನ ಸರ್ಕಾರದ ಭ್ರಷ್ಟಾಚಾರದ ಬಗ್ಗೆಯು ದಾಖಲೆಗಳನ್ನು ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಆಯೋಗಕ್ಕೆ ನೀಡುತ್ತೇವೆ. ನಾವು ಈ ಹಿಂದೆ ಮಾಡಿದ ಆರೋಪಕ್ಕೆ ಬದ್ಧರಾಗಿ ನುಡಿದಂತೆ ನಡೆದಿದ್ದೇವೆ

- ಕೆಂಪಣ್ಣ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ

click me!