S Janaki amma: ಸರಸ್ವತಿಯೇ ಕಣ್ಮುಚ್ಚಿದರೆ ಸರಿಗಮ ಕೇಳುವುದೇ..? - ಕೆ. ಕಲ್ಯಾಣ್

Kannadaprabha News   | Kannada Prabha
Published : Jul 12, 2026, 06:46 AM IST
s janaki

ಸಾರಾಂಶ

ಖ್ಯಾತ ಗೀತ ರಚನಕಾರ ಕೆ. ಕಲ್ಯಾಣ್ ಅವರು ಗಾಯಕಿ ಎಸ್. ಜಾನಕಿ ಅವರೊಂದಿಗಿನ ತಮ್ಮ ತಾಯಿ-ಮಗನ ಸಂಬಂಧವನ್ನು ನೆನೆದಿದ್ದಾರೆ. ಜಾನಕಿ ಅಮ್ಮನ ಸರಳತೆ, ವೃತ್ತಿಪರತೆ ಮತ್ತು ತಮ್ಮ ಮನೆಗೆ ಬಂದು ಕೈತುತ್ತು ನೀಡಿದ ಕ್ಷಣಗಳನ್ನು ಅವರು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

- ಕೆ. ಕಲ್ಯಾಣ್‌, ಖ್ಯಾತ ಗೀತ ರಚನಕಾರ/ಸಂಗೀತ ನಿರ್ದೇಶಕ

ಜಾನಕಿ ಅಮ್ಮ(Janaki Amma) ಇಲ್ಲ ಅನ್ನುವ ಶಬ್ದ ನಮ್ಮ ಕಿವಿಗೆ ಭರಿಸಲಿಕ್ಕಾಗಲ್ಲ. ಅವರು ಇದ್ದಾರೆ ಅಂದುಕೊಂಡರಷ್ಟೇ ನಮಗೆ ಬದುಕು. ನನಗೆ ಸ್ವಂತ ತಾಯಿಗಿಂತ ಹೆಚ್ಚಾಗಿದ್ದವರು ಅವರು ಅನ್ನುವುದು ಅತಿಶಯೋಕ್ತಿ ಖಂಡಿತಾ ಅಲ್ಲ. ಅದುವೇ ವಾಸ್ತವ.

ಜಾನಕಿ ಅಮ್ಮ ತುಂಬಾ ಸಲ ನಮ್ಮ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಎಲ್ಲರ ಜೊತೆಗೆ ಸಮಯ ಕಳೆದಿದ್ದಾರೆ. ನಾವೂ ಅವರ ಮನೆಗೆ ಸಾಕಷ್ಟು ಬಾರಿ ಹೋಗಿದ್ದೆವು. ಅವರು ಖುಷಿಯಿಂದ ನಾನು ಬರೆದ ಹಾಡುಗಳನ್ನು ಹಾಡಿದ್ದಾರೆ. ನಾನು ಸಂಗೀತ ನಿರ್ದೇಶನ ಮಾಡಿರುವ ಹಾಡನ್ನೂ ಹಾಡಿದ್ದಾರೆ.

ಇದೆಲ್ಲದರ ಆಚೆ ಆಗಾಗ ನನ್ನ ಜೊತೆಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಏನಾದರೂ ಅಂದುಕೊಂಡಾಗ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಮಾತುಕತೆಗೆ ಶಿಖರಸದೃಶವಾದ ಅವರ ಸಾಧನೆ ಎಲ್ಲೂ ಅಡ್ಡಿಯಾಗುತ್ತಿರಲಿಲ್ಲ. ಅಷ್ಟು ಸಹಜ, ಆತ್ಮೀಯ ಮಾತುಕತೆ ನಮ್ಮದು.

ಚಿತ್ರರಂಗದಲ್ಲಿ ಯಾರನ್ನಾದರೂ ಬಾಯ್ತುಂಬ ಅಮ್ಮಾ ಅಂತ ಕರೆಯೋದಾದರೆ ಅವರನ್ನು ಕರೆಯುತ್ತೇನೆ. ಅವರೂ ನನ್ನನ್ನು ‘ಕಂದಾ’ ಅಂತಲೇ ಕರೆದು ಮಾತನಾಡುತ್ತಿದ್ದರು. ಮಗು ಥರ ಮನಸ್ಸಿದ್ದ ತಾಯಿ ಅವರು. ಅವರ ಹಾಡುಗಳ ಬಗ್ಗೆ ಜಗತ್ತೇ ಮಾತನಾಡುತ್ತೆ. ಜೊತೆಗೆ ಅವರ ಹಾಡುವ ಮೊದಲಿನ ಸಿದ್ಧತೆ, ಭಾಷಾ ಶುದ್ಧತೆ, ಕೆಲಸಕ್ಕಾಗಿನ ಬದ್ಧತೆಗೆ ಅವರೇ ಸಾಟಿ. ಅದೆಷ್ಟೋ ಸಲ ಕನ್ನಡ ಹಾಡಿನ ಸಾಹಿತ್ಯವನ್ನು ಅವರಿಗೆ ಡಿಕ್ಟೇಟ್‌ ಮಾಡಿದ್ದೇನೆ. ಅವರು ಅದನ್ನು ತೆಲುಗಿನಲ್ಲಿ ಬರೆದುಕೊಳ್ಳುತ್ತಿದ್ದರು. ಎಲ್ಲಾದರೂ ಒಂದು ಪದದ ಉಚ್ಚಾರಣೆ ತಪ್ಪಾದರೆ ಅದು ಸರಿ ಬರುವತನಕ ಹಾಡುತ್ತಲೇ ಇದ್ದರು. ಎಷ್ಟು ಸಮಯವಾದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅಂಥಾ ಬದ್ಧತೆ ಅವರದ್ದು. ಮನಸೋ ಪರಮಶುದ್ಧ.

ಹೈದರಾಬಾದ್‌ನಲ್ಲಿದ್ದ ಅವರ ಮನೆಗೆ ಮೊದಲ ಬಾರಿ ಹೋದ ಸಂದರ್ಭ. ಎಂದಿನ ಪ್ರೀತಿಯಿಂದ ಮನೆ ಪೂರ್ತಿ ಕರೆದುಕೊಂಡು ಹೋಗಿ ತೋರಿಸಿದರು. ಮನೆಗೆ ಕಾಲಿಟ್ಟಾಕ್ಷಣ ಮೊದಲು ಕಣ್ಣಿಗೆ ಬಿದ್ದದ್ದು ಕಲೈಮಾಮಣಿ ಪ್ರಶಸ್ತಿ. ಆಮೇಲೆ ಒಂದು ಭಾಷೆಗೆ ಸಿಕ್ಕ 16 ರಾಜ್ಯ ಪ್ರಶಸ್ತಿಗಳು, ಅಲ್ಲಿಂದ ಮುಂದೆ ಹೋದರೆ ಮತ್ಯಾವುದೋ ಭಾಷೆಯ 11 ರಾಜ್ಯ ಪ್ರಶಸ್ತಿಗಳು, ಮುಂದೆ ಮತ್ತೊಂದು ಭಾಷೆಯ 6 ರಾಜ್ಯ ಪ್ರಶಸ್ತಿಗಳು.. ಹೀಗೆ ಒಟ್ಟಾಗಿ ಲೆಕ್ಕ ಮಾಡಿದರೆ ಮೂವತ್ತೋ, ನಲವತ್ತೋ ರಾಜ್ಯ ಪ್ರಶಸ್ತಿಗಳು. ಆದರೆ ಕನ್ನಡದ ಪ್ರಶಸ್ತಿಗಳ್ಯಾವುವೂ ಕಾಣಲಿಲ್ಲ. ಬಹುಶಃ ಕನ್ನಡಿಗರು ಅವರಿಗೆ ಕೊಟ್ಟ ಪ್ರೀತಿ, ಅವರು ಕನ್ನಡಿಗರಿಗೆ ಕೊಟ್ಟ ಪ್ರೀತಿ ಇದೇ ಬಹುದೊಡ್ಡ ಪ್ರಶಸ್ತಿಯಾಗಿತ್ತು ಅನಿಸುತ್ತದೆ.

ಜಾನಕಿ ಅಮ್ಮ ಅಂದರೆ ಪ್ರೀತಿ. ಅವರ ಧ್ವನಿ ಕೇಳುವಾಗಲೇ ಮನಸ್ಸಿಗೆ ಹಿತ, ಆಹ್ಲಾದ, ನೆಮ್ಮದಿ. ಅವರ ಹತ್ರ ಮಾತನಾಡಿದರೆ ಮನಸ್ಸು ಯಾವ ಕಷ್ಟದ ಸ್ಥಿತಿಯಲ್ಲಿದ್ದರೂ ಹಗುರಾಗುತ್ತಿತ್ತು. ನೆಮ್ಮದಿ ತುಂಬಿಕೊಳ್ಳುತ್ತಿತ್ತು. ನಮ್ಮೆಲ್ಲ ವಿಚಾರಗಳನ್ನೂ ಅವರ ಬಳಿ ಮುಕ್ತವಾಗಿ ಹಂಚಿಕೊಳ್ಳಬಹುದಿತ್ತು, ಅವರ ಜೊತೆ ಮಾತನಾಡಿ ಎಲ್ಲವನ್ನು ಮರೆತು ಹಗುರಾಗಬಹುದಿತ್ತು. ಅವರ ವ್ಯಕ್ತಿತ್ವವೇ ಅಷ್ಟು ವಾತ್ಸಲ್ಯಪೂರಿತವಾಗಿತ್ತು.

ಜಾನಕಿ ಅಮ್ಮ ನಮ್ಮ ಮನೆಗೆ ಬಂದಿದ್ದಾಗ ನನಗೆ ಕೈತುತ್ತು ಕೊಟ್ಟಿದ್ದರು. ಆ ಹೊತ್ತು ಮನೆಯರೆಲ್ಲ ಜೊತೆಯಾಗಿ ಊಟಕ್ಕೆ ಕೂತಿದ್ದೆವು. ಅವರು ನನ್ನ ಪಕ್ಕ ಕುಳಿತಿದ್ದರು. ಆ ಹೊತ್ತು ನನಗೆ ಕೈತುತ್ತು ಕೊಟ್ಟರು. ನಾನೂ ಅವರಿಗೆ ಕೈತುತ್ತು ಕೊಟ್ಟಿದ್ದೆ. ನಮ್ಮ ಮನೆಯ ಅಷ್ಟೂ ಜನ ಅವರ ಜೊತೆಗೆ ಕೂತು ಊಟ ಮಾಡುತ್ತಾ, ಅವರ ಹಾಡುಗಳ ಬಗ್ಗೆ ಮಾತನಾಡುತ್ತಾ, ಸಿನಿಮಾಗಳ ಬಗ್ಗೆ ಚರ್ಚೆ ಮಾಡುತ್ತಾ ಬೇರೆಯದೇ ಲೋಕದಲ್ಲಿದ್ದೆವು. ಆಹ್, ಆ ಜಗತ್ತೇ ಬೇರೆ.

ಸರಳತೆಗೆ ಜಾನಕಿ ಅಮ್ಮ ಇನ್ನೊಂದು ಹೆಸರು. ಅವರಿಗೆ ತಮ್ಮ ಸಾಧನೆಯ ಬಗ್ಗೆ ಹಿರಿತನದ ಬಗ್ಗೆ ಒಂಚೂರೂ ತಿಳಿದೇ ಇಲ್ಲ ಅನ್ನುವ ಹಾಗಿರುತ್ತಿದ್ದರು. ತನಗೆ ಏನೂ ಗೊತ್ತಿಲ್ಲ ಅನ್ನುತ್ತಿದ್ದರು. ನಾವು ಹೇಳಿದ್ದೆಲ್ಲವನ್ನೂ ಶ್ರದ್ಧೆಯಿಂದ ಕೇಳುತ್ತಿದ್ದರು.

ಎಲ್ಲಿ ಪ್ರೀತಿ ವಾತ್ಸಲ್ಯ ಇರುತ್ತದೋ ಅಲ್ಲಿ ಜಾನಕಿಯಮ್ಮ ಇರುತ್ತಾರೆ. ಅವರು ಇರುವ ಕಡೆ ಪ್ರೀತಿ, ವಾತ್ಸಲ್ಯ ಇರುತ್ತದೆ. ಇವತ್ತು ಅವರು ಕಾಲವಾಗಿರುವ ಸುದ್ದಿ ನಂಬಲಾಗುತ್ತಿಲ್ಲ. ದುಃಖವೂ ಗೊತ್ತಾಗುವುದಿಲ್ಲ. ನಮ್ಮ ನಡುವೆ ಅಂಥಾ ದೊಡ್ಡವರು ಇರಬೇಕು. ಇದ್ದರೆ ನಮಗೆ ಬದುಕಲು ಅದೇ ದೊಡ್ಡ ಚೈತನ್ಯ.

ಜಾನಕಿ ಅಮ್ಮ ಸಂಗೀತ ಕ್ಷೇತ್ರದ ಸರಸ್ವತಿ. ಸರಸ್ವತಿಯೇ ಕಣ್ಮಚ್ಚಿದರೆ ಸರಿಗಮ ಕೇಳುತ್ತಾ? ಆ ಥರ ಆಗಿದೆ ನನ್ನ ಕಥೆ. ಗಾಬರಿ ಆಗುತ್ತದೆ, ಬೇಜಾರಾಗುತ್ತದೆ, ನೋವಾಗುತ್ತೆ. ಮರುಕ್ಷಣ ಅವರ ಮುಖ ಕಣ್ಣೆದುರು ಬಂದು ನಿಲ್ಲುತ್ತದೆ. ಅವರು ಯಾರನ್ನೂ ನೋಯಿಸಿದವರಲ್ಲ, ಯಾರನ್ನೂ ಬೇಜಾರು ಮಾಡಿದವರಲ್ಲ, ಅಷ್ಟು ಮುಗ್ಧತೆ, ಮಗುವಿನಂಥ ಶುದ್ಧ ಮನಸ್ಸು ಅವರದ್ದು. ಜಾನಕಿ ಅಮ್ಮನಿಗೆ ಸಮನಾಗಿ ಯಾರೂ ಕಾಣಲ್ಲ. ಅವರು ಹೆತ್ತಮ್ಮನಂತೆಯೇ ಇದ್ದರು. ನೆನೆಸಿಕೊಂಡರೆ ಕಣ್ಣೀರಾಗುತ್ತದೆ.

ನನಗೆ ಜನ್ಮಕೊಟ್ಟ ತಾಯಿ ಈಗ ನಮ್ಮೊಡನೆ ಇಲ್ಲ. ಅವರ ಹೋದಾಗ ಎಂಥಾ ಆಘಾತ, ನೋವು ಆಗಿತ್ತೂ, ಈಗಲೂ ಹಾಗೇ ಆಗುತ್ತಿದೆ. ನಮ್ಮ ಆಯುಷ್ಯವನ್ನಾದರೂ ಕೊಟ್ಟು ಅವರನ್ನು ಉಳಿಸಿಕೊಳ್ಳಬೇಕಿತ್ತು, ಅವರಿಲ್ಲದೆ ನಾವಿಲ್ಲ.. ಅಂತೆಲ್ಲ ನಾವು ಈ ಕ್ಷಣದಲ್ಲಿ ಮಾತನಾಡಬಹುದು. ಆದರೆ ಅವು ನಮ್ಮ ಆಂತರ್ಯದ ನುಡಿಗಳೇ ಆದರೂ ವಿಧಿಲೀಲೆ ಮುಂದೆ ನಮ್ಮ ಈ ಮಾತು ಪ್ರಯೋಜನಕ್ಕೆ ಬರುವುದಿಲ್ಲ. ಏನು ಮಾತನಾಡಲೂ ತೋಚುವುದಿಲ್ಲ.

ನಮ್ಮ ಜೊತೆಗೆ ಬಹಳ ಭಾವನಾತ್ಮಕವಾಗಿ ಇರುತ್ತಿದ್ದರು. ಕೆಲವು ಸಲ ಮನಸ್ಸಲ್ಲಿ ಏನೋ ಇದ್ದಾಗ ನನ್ನ ಬಳಿ ಬಂದು ಗಟ್ಟಿಯಾಗಿ ಕೈ ಹಿಡಿದುಕೊಂಡು ಕೂತು ಬಿಡುತ್ತಿದ್ದರು. ಎಷ್ಟೋ ಹೊತ್ತು ಹಾಗೇ ಕೂತಿರುತ್ತಿದ್ದರು. ನಮ್ಮ ನಡುವೆ ಮೌನ ಸಂವಹನ ನಡೆಯುತ್ತಿತ್ತು. ತಾಯಿಯೊಬ್ಬಳು ಮನಸ್ಸು ತುಂಬಿದಾಗ ಬಂದು ಮಗನ ಕೈಯನ್ನು ಸುಮ್ಮನೆ ಹಿಡಿದುಕೊಳ್ಳುವ ರೀತಿಯಲ್ಲಿ ಅವರ ಆ ನಡೆ ಇರುತ್ತಿತ್ತು. ಅದನ್ನೆಲ್ಲ ನೆನೆಸಿಕೊಂಡರೆ ಇದೆಲ್ಲ ನಿಜವಾ ಕನಸಾ ಇದೆಲ್ಲ ಏನೋ ಮಾಯೆ ಅಂತ ಅನಿಸುತ್ತದೆ.

ಎದೆಗೆ ಭಾರವಾದ ಕ್ಷಣವಿದು. ಅವರಿಗೆ ಶ್ರದ್ಧಾಂಜಲಿ ಹೇಳುವುದು ಇತ್ಯಾದಿಗಳೆಲ್ಲ ನನ್ನಂಥವರಿಗೆ ಊಹಿಸಲೂ ಸಾಧ್ಯವಾಗದ ಕ್ಷಣ. ಅವರ ಪಾದಗಳಲ್ಲಿ ನನ್ನ ಶಿರವನ್ನಿಟ್ಟು, ಪಾದಗಳನ್ನು ಕಣ್ಣಿಗೊತ್ತಿಕೊಂಡು ಅವರ ಆಶೀರ್ವಾದ ಬೇಡುವುದೊಂದೇ ಉಳಿದಿರುವುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾನಕಿಯಂತಹ ಗಾಯಕಿ ಬೇರೊಬ್ಬರು ಇಲ್ಲ.. ಅವರ ಹಾಡು ಕೇಳುವ ಕಾಲದಲ್ಲಿ ನಾವಿದ್ದೇವು ಅನ್ನುವುದೇ ಅದೃಷ್ಟ: - ಅನಂತನಾಗ್
ಚಿಲ್ಲರೆ ನೀಡದ್ದಕ್ಕೆ ಸಾರಿಗೆ ಸಚಿವರನ್ನೇ ಬಸ್‌ನಿಂದ ಕೆಳಗಿಳಿಸಿದ ಕಂಡಕ್ಟರ್! ಮುಂದೇನಾಯ್ತು ನೋಡಿ