Karnataka high court: ಅಪಘಾತಕ್ಕೀಡಾದ ವಾಹನವನ್ನು ವಿಮೆ ಇಲ್ದಿದ್ರೂ ಬಿಡಿ: ಹೈಕೋರ್ಟ್ ಆದೇಶ

By Kannadaprabha NewsFirst Published Jan 3, 2023, 10:10 AM IST
Highlights

ವಿಮೆ ಇಲ್ಲದ ಕಾರಣ ಮುಂದಿಟ್ಟುಕೊಂಡು ಅಪಘಾತ ಪ್ರಕರಣಗಳಲ್ಲಿ ಸಿಲುಕಿದ ವಾಹನಗಳನ್ನು ಅವುಗಳ ಮಾಲೀಕರಿಗೆ ಬಿಡುಗಡೆ ಮಾಡಲು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಬೆಂಗಳೂರು (ಜ.3) : ವಿಮೆ ಇಲ್ಲದ ಕಾರಣ ಮುಂದಿಟ್ಟುಕೊಂಡು ಅಪಘಾತ ಪ್ರಕರಣಗಳಲ್ಲಿ ಸಿಲುಕಿದ ವಾಹನಗಳನ್ನು ಅವುಗಳ ಮಾಲೀಕರಿಗೆ ಬಿಡುಗಡೆ ಮಾಡಲು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ವಿಮೆ ಇಲ್ಲವೆಂಬ ಕಾರಣಕ್ಕೆ ತಮ್ಮ ಐಷರ್‌ ಕ್ಯಾಂಟರ್‌ ವಾಹನ(Eicher Cantor) ಬಿಡುಗಡೆ ಮಾಡಲು ನಿರಾಕರಿಸಿದ್ದ ರಾಮನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಬೆಂಗಳೂರಿನ ಗಣೇಶ್‌ ಎಂಬುವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯವು ಅಗತ್ಯ ಷರತ್ತುಗಳನ್ನು ವಿಧಿಸಿ ವಾಹನ ಬಿಡುಗಡೆ ಮಾಡಲು ತನಿಖಾಧಿಕಾರಿಗೆ ನಿರ್ದೇಶಿಸಬೇಕು ಎಂದು ಸೂಚಿಸಿದೆ.

ಅರ್ಜಿದಾರರ ಮಾಲೀಕತ್ವದ ಐಷರ್‌ ಕ್ಯಾಂಟರ್‌ ವಾಹನವು 2021ರ ಜ.22ರಂದು ಮೈಸೂರು ರಸ್ತೆಯಲ್ಲಿ ಕೆಟ್ಟಿಟ್ಟು ನಿಂತಿತ್ತು. ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೆಕ್ಯಾನಿಕ್‌ಗಾಗಿ ಕಾಯುತ್ತಿದ್ದ. ಈ ವೇಳೆ, ಮಾರುತಿ ಸುಜುಕಿ ಬ್ರೆಜಾ ಕಾರೊಂದು(Maruti Suzuki Brezza Car) ಅತಿವೇಗವಾಗಿ ಬಂದು ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿತ್ತು. ಕಾರಿನ ಮುಂಭಾಗ ಜಖಂಗೊಂಡು, ಒಳಗಿದ್ದ ವ್ಯಕ್ತಿಗೆ ಗಾಯವಾಗಿತ್ತು. ಪ್ರಕರಣ ದಾಖಲಿಸಿದ್ದ ಬಿಡದಿ ಪೊಲೀಸರು, ಎರಡೂ ವಾಹನಗಳನ್ನು ಜಪ್ತಿ ಮಾಡಿದ್ದರು.

BMTC Bus ಖರೀದಿ ಪ್ರಶ್ನಿಸಿ ಅಂಗವಿಕಲ ಅರ್ಜಿ; ಸರ್ಕಾರಕ್ಕೆ ಕೋರ್ಟ್ ನೋಟಿಸ್

ಕಾರು ಚಾಲಕ ತನ್ನ ತಪ್ಪು ಒಪ್ಪಿಕೊಂಡು, ದಂಡ ಸಹ ಪಾವತಿಸಿದ್ದ. ಈ ಮಧ್ಯೆ ಅರ್ಜಿದಾರ ತನ್ನ ವಾಹನ ಬಿಡುಗಡೆಗೆ ಕೋರಿ ರಾಮನಗರ ಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ವಾಹನಕ್ಕೆ ವಿಮೆ ಮಾಡಿಸಿಲ್ಲ ಎಂದು ತಿಳಿಸಿದ್ದ ನ್ಯಾಯಾಲಯ, ಕ್ಯಾಂಟರ್‌ ಬಿಡುಗಡೆಗೆ ನಿರಾಕರಿಸಿ 2021ರ ಮಾ.12ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಚ್‌ ಮೆಟ್ಟಿಲೇರಿದ್ದರು.

ಇದೀಗ ಆ ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್(karnataka high court), ಅಪಘಾತ ನಡೆದ ಸಂದರ್ಭದಲ್ಲಿ ಅರ್ಜಿದಾರರ ವಾಹನಕ್ಕೆ ವಿಮೆ ಇರಲಿಲ್ಲ ಎನ್ನುವುದು ಸತ್ಯ. ಆದರೆ, ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವ ವ್ಯಕ್ತಿಗಳ ಹಿತದೃಷ್ಟಿಯಿಂದ ಅವರು ಪರಿಹಾರ ಕೋರಲು ಅವಕಾಶ ಕಲ್ಪಿಸುವುದಕ್ಕಾಗಿ ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 232ಜಿ ಗೆ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ, ಅಪಘಾತದಲ್ಲಿ ಭಾಗಿಯಾದ ವಾಹನಗಳನ್ನು ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡಬಹುದಾಗಿದೆ ಎಂದು ಆದೇಶಿಸಿದೆ.

karnataka high court : ಆಸ್ಪತ್ರೆಯಿಂದ ಹೊರಬಂದ ಪತಿಗೆ ಬೆಂಗಳೂರು ಬಂಧನ!

click me!