ರಾಜ್ಯದ ಇತರೆ ಶಾಲೆಗಳಂತೆ ಮದರಸಾಗಳಲ್ಲೂ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ ಭಾಷಾ ವಿಷಯಗಳ ಬೋಧನೆಯ ಜೊತೆಗೆ ವಿಜ್ಞಾನ, ಗಣಿತ ವಿಷಯಗಳನ್ನು ಕಲಿಸಲು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು (ಆ.29) : ರಾಜ್ಯದ ಇತರೆ ಶಾಲೆಗಳಂತೆ ಮದರಸಾಗಳಲ್ಲೂ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ ಭಾಷಾ ವಿಷಯಗಳ ಬೋಧನೆಯ ಜೊತೆಗೆ ವಿಜ್ಞಾನ, ಗಣಿತ ವಿಷಯಗಳನ್ನು ಕಲಿಸಲು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಸಭಾಂಗಣದಲ್ಲಿ ಸೋಮವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮದರಸಗಳಲ್ಲಿ ಪ್ರಮುಖವಾಗಿ ಕನ್ನಡ ಕಡ್ಡಾಯವಾಗಿ ಕಲಿಸಲೇಬೇಕು. ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಗಳ ಕಲಿಕೆ ಹಾಗೂ ಕೋರ್ ಸಬ್ಜೆಕ್ಟ್ಗಳಾದ ವಿಜ್ಞಾನ, ಗಣಿತ ವಿಷಯಗಳಿಂದಲೂ ಮದರಸಾ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂದು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಲ್ಪಸಂಖ್ಯಾತ ವೈದ್ಯ ವಿದ್ಯಾರ್ಥಿಗಳ ಸಾಲ ಮೊತ್ತ ಏರಿಕೆ?
ಈ ನಿಟ್ಟಿನಲ್ಲಿ ರಾಜ್ಯದ ವಕ್ಫ್ ಮಂಡಳಿಯಲ್ಲಿ ನೋಂದಾಯಿತವಾಗಿರುವ 1265 ಮದರಸಾಗಳ ಪೈಕಿ 100 ಮದರಸಾಗಳ ಐದು ಸಾವಿರ ಮಕ್ಕಳಿಗೆ ಈ ವರ್ಷದಿಂದಲೇ ಪ್ರಾಯೋಗಿಕವಾಗಿ ಕಲಿಕೆ ಆರಂಭಿಸಿ. ಮುಂದಿನ ವರ್ಷದಿಂದ ಎಲ್ಲ ಮದರಸಗಳಲ್ಲಿ ಆರಂಭಿಸಲು ಪ್ರಸ್ತಾವನೆ ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅಲ್ಪಸಂಖ್ಯಾತರ ನಿರ್ದೇಶನಾಲಯ ವ್ಯಾಪ್ತಿಯಡಿ ವಿದೇಶದಲ್ಲಿ ವ್ಯಾಸಂಗ ಮಾಡಲು ನೀಡುವ ಪ್ರೋತ್ಸಾಹ ಧನದ ಮೊತ್ತವನ್ನು 20 ಲಕ್ಷ ರು. ನಿಂದ 30 ಲಕ್ಷ ರು.ಗಳಿಗೆ ಹೆಚ್ಚಿಸಲು ಹಾಗೂ ಐಐಟಿ, ಎನ್‌ಐಟಿ ಸೇರಿದಂತೆ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಲಿ ನೀಡುತ್ತಿರುವ ಎರಡು ಲಕ್ಷ ರು. ಪ್ರೋತ್ಸಾಹ ಧನವನ್ನು ನಾಲ್ಕು ಲಕ್ಷ ರು.ಗಳಿಗೆ ಹೆಚ್ಚಿಸಲು ಸಚಿವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜು ಮತ್ತು ಮೌಲಾನಾ ಅಜಾದ್ ಮಾದರಿ ಶಾಲೆಗಳ 9, 10 ಹಾಗೂ 12ನೇ ತರಗತಿಯ ಒಂದು ಲಕ್ಷ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟಸುಧಾರಿಸಲು ಸಿದ್ಧಪಡಿಸಿರುವ ವಿಜ್ಞಾನ ಮತ್ತು ಗಣಿತ ಸೇರಿದಂತೆ ವಿವಿಧ ವಿಷಯಗಳ ಕೈಪಿಡಿ ಹಾಗೂ ನಿರ್ದೇಶನಾಲಯದ ಯೋಜನೆಗಳ ಕೈಪಿಡಿಯನ್ನು ಸಚಿವರು ಇದೇ ವೇಳೆ ಬಿಡುಗಡೆ ಮಾಡಿ ಪುಸ್ತಕಗಳಲ್ಲಿರುವ ಕ್ಯುಆರ್ ಕೋಡ್ ಸ್ಕಾ್ಯನ್ ಮಾಡಿದರೆ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಮೊಕಾಶಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್, ವಖ್‌್ಫ ಮಂಡಳಿ ಕಾರ್ಯನಿರ್ವಾಹಕ ಖಾನ್ ಫರ್ವಜ್ ಉಪಸ್ಥಿತರಿದ್ದರು.
ಅಭಿವೃದ್ಧಿ ಕಾಮಗಾರಿಗಳ ವರದಿಗೆ ಸೂಚನೆ
ಕಳೆದ ಎರಡು ವರ್ಷಗಳಲ್ಲಿ ಅಲ್ಪಸಂಖ್ಯಾತ ನಿರ್ದೇಶನಾಲಯದಿಂದ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಇದೇ ವೇಳೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಅಕ್ರಮ ಮರಳು ಸಾಗಾಟ, ಮಟ್ಕಾ ದಂಧೆಗೆ ಬ್ರೆಕ್ ಹಾಕಿ: ಸಚಿವ ಜಮೀರ್ ಅಹ್ಮದ್
2 ವರ್ಷದಲ್ಲಿ ಎಷ್ಟುಮೊತ್ತದ ಕಾಮಗಾರಿ ಕೈಗೊಳ್ಳಲಾಗಿದೆ, ಎಷ್ಟುಮೊತ್ತದ ಬಿಲ್ ಪಾವತಿಗೆ ಬಾಕಿ ಇದೆ, ಕಾಮಗಾರಿ ಪ್ರಮಾಣ, ಗುತ್ತಿಗೆ ದಾರರಿಗೆ ಪಾವತಿಸಿರುವ ಮೊತ್ತ ಕುರಿತು ಸಮಗ್ರ ವರದಿ ನೀಡುವಂತೆ ಹೇಳಿದರು.