ಬೇರೆ ನೌಕರೀಲಿರುವ ‘ವಕೀಲರು’ ಬೇಗ ಸನ್ನದು ಅಮಾನತು ಮಾಡ್ಸಿ

Kannadaprabha News   | Kannada Prabha
Published : May 26, 2025, 07:19 AM IST
 Rajasthan many lawyers banned

ಸಾರಾಂಶ

ವಕೀಲಿಕೆ ನಡೆಸಲು ಕರ್ನಾಟಕ ವಕೀಲರ ಪರಿಷತ್‌ನಲ್ಲಿ ಸನ್ನದು ನೋಂದಣಿ ಮಾಡಿಕೊಂಡ ನಂತರ ನ್ಯಾಯಾಂಗ ಸೇರಿ ಸರ್ಕಾರದ ವಿವಿಧ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿರುವ ಒಟ್ಟು 830 ಜನ ತಮ್ಮ ಸನ್ನದು ಅಮಾನತು ಪಡಿಸಿಕೊಂಡಿದ್ದಾರೆ. 

ವೆಂಕಟೇಶ್‌ ಕಲಿಪಿ

ಬೆಂಗಳೂರು (ಮೇ.26): ವಕೀಲಿಕೆ ನಡೆಸಲು ಕರ್ನಾಟಕ ವಕೀಲರ ಪರಿಷತ್‌ನಲ್ಲಿ ಸನ್ನದು ನೋಂದಣಿ ಮಾಡಿಕೊಂಡ ನಂತರ ನ್ಯಾಯಾಂಗ ಸೇರಿ ಸರ್ಕಾರದ ವಿವಿಧ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿರುವ ಒಟ್ಟು 830 ಜನ ತಮ್ಮ ಸನ್ನದು ಅಮಾನತು ಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 1.25 ಲಕ್ಷ ವಕೀಲರಿದ್ದಾರೆ. ಅವರಲ್ಲಿ ಸುಮಾರು ಐದು ಸಾವಿರ ಮಂದಿ ಸನ್ನದು ನೋಂದಾಯಿಸಿಕೊಂಡ ನಂತರ ಸರ್ಕಾರಿ ಇಲಾಖೆ ಮತ್ತು ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದಾರೆ. ವಕೀಲರ ಕಾಯ್ದೆ-1961ರ ಸನ್ನದು ಪಡೆದ ನಂತರ ವಕೀಲಿಕೆ ನಡೆಸದೆ ಬೇರೆಡೆ ಉದ್ಯೋಗಕ್ಕೆ ಸೇರಿದ್ದರೆ, ಅಂಥವರು ಆರು ತಿಂಗಳಲ್ಲಿ ಸನ್ನದು ಅಮಾನತು ಮಾಡಿಕೊಳ್ಳುವುದು ಕಡ್ಡಾಯ. ತಾನು ವಕೀಲಿಕೆ ನಡೆಸುತ್ತಿಲ್ಲ.

ಇದರಿಂದ ಸನ್ನದು ಅಮಾನತ್ತಿನಲ್ಲಿಡಬೇಕು ಎಂದು ಕೋರಿ ಕರ್ನಾಟಕ ವಕೀಲರ ಪರಿಷತ್‌ಗೆ ಮನವಿ ಪತ್ರ ಸಲ್ಲಿಸಬೇಕು. ಆ ಮನವಿಯಂತೆ ಸನ್ನದು ಅಮಾನತು ಮಾಡಲಾಗುತ್ತದೆ. ಕರ್ನಾಟಕ ವಕೀಲರ ಪರಿಷತ್‌ ಕಳೆದ ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಿ ವಕೀಲಿಕೆ ನಡೆಸದವರು ತಮ್ಮ ಸನ್ನದು ಅಮಾನತು ಮಾಡಿಕೊಳ್ಳುವಂತೆ ಸೂಚಿಸಿತ್ತು. ಅದರಂತೆ ಮೇ 24ರವರಗೆ ಒಟ್ಟು 830 ಜನ ಸನ್ನದು ಅಮಾನತುಪಡಿಸಿಕೊಂಡಿದ್ದಾರೆ. ಅವರ ಪೈಕಿ, ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು, ಪ್ರಾಸಿಕ್ಯೂಷನ್‌ ಇಲಾಖೆಯ ಅಭಿಯೋಜಕರು, ಇತರೆ ಸರ್ಕಾರಿ ಇಲಾಖೆ ನೌಕರರು, ಅಧಿಕಾರಿಗಳು, ಬ್ಯಾಂಕ್‌ ಮ್ಯಾನೇಜರ್‌ ಹಾಗೂ ಖಾಸಗಿ ಕಂಪನಿಯ ಉದ್ಯೋಗಿಗಳಿದ್ದಾರೆ.

ಅಮಾನತು ಮಾಡಿಕೊಳ್ಳದ ಕಾರಣ ರಾಜ್ಯ ವಕೀಲರ ಪಟ್ಟಿಯಲ್ಲಿ ಹೆಸರು ಕಂಡು ಬರುತ್ತಿದೆ. ವಕೀಲರಿಗೆ ಪರಿಷತ್‌ ಕಡೆಯಿಂದ ವಿವಿಧ ಸೌಲಭ್ಯಗಳು ಸಿಗುತ್ತವೆ. ಸನ್ನದು ಅಮಾನತು ಮಾಡಿಕೊಳ್ಳದೆ ಬೇರೆಡೆ ಉದ್ಯೋಗ ನಿರ್ವಹಣೆ ಮಾಡುತ್ತಿದ್ದರೆ, ಅದು ವಕೀಲರ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ರಾಜ್ಯದಲ್ಲಿ ಸುಮಾರು 1.25 ಲಕ್ಷ ವಕೀಲರಿದ್ದಾರೆ. ಕೇವಲ 60 ಸಾವಿರ ವಕೀಲರು ಮಾತ್ರ ವಕೀಲಿಕೆ ನಡೆಸಲು ಪ್ರಮಾಣ ಪತ್ರ (ಸಿಒಪಿ) ಪಡೆದುಕೊಂಡಿದ್ದಾರೆ. ಉಳಿದ 65 ಸಾವಿರ ಜನ ಸಿಒಪಿ ಪಡೆದುಕೊಂಡಿಲ್ಲ. ಸಿಒಪಿ ಪಡೆಯದೆ ವಕೀಲಿಕೆ ನಡೆಸುವುದು ಸಹ ಅಕ್ರಮ ಎಂದು ಪರಿಷತ್ ಮೂಲಗಳು ಹೇಳುತ್ತವೆ.

ಮೇ 31 ಕೊನೆಯ ದಿನ: ಸನ್ನದು ನೋಂದಣಿ ಮಾಡಿಕೊಂಡ ನಂತರ ಸರ್ಕಾರಿ ನೌಕರಿಗೆ ಸೇರಿ 10-20 ವರ್ಷ ಕಳೆದರೂ ಸನ್ನದು ಅಮಾನತು ಮಾಡಿಕೊಳ್ಳದ ಅನೇಕರು ಇದ್ದಾರೆ. ಹೀಗಾಗಿ ಎಸ್‌.ಎಸ್‌.ಮಿಟ್ಟಲಕೋಟ ಅವರು ಪರಿಷತ್‌ ಅಧ್ಯಕ್ಷರಾದ ನಂತರ ನೋಟಿಫಿಕೇಷನ್‌ ಹೊರಡಿಸಿ ಏ.3ರೊಳಗೆ ಸನ್ನದು ಅಮಾನತು ಮಾಡಿಕೊಳ್ಳಲು ಸೂಚಿಸಿತ್ತು. ಸಾಕಷ್ಟು ಜನ ಮನವಿ ಮೇರೆಗೆ ಮೇ 31ರವರೆಗೆ ಸಮಯ ನೀಡಲಾಗಿದೆ, ಮತ್ತೆ ಕಾಲಾವಕಾಶ ವಿಸ್ತರಿಸುವುದಿಲ್ಲ ಎಂದು ಪರಿಷತ್‌ ತಿಳಿಸಿದೆ.

ಪರಿಷತ್‌ಯಿಂದ ಸನ್ನದು ರದ್ದು: ಮೇ 31ರೊಳಗೆ ಸನ್ನದು ಅಮಾನತು ಮಾಡಿಕೊಳ್ಳದವರ ಸನ್ನದನ್ನು ಪರಿಷತ್‌ ರದ್ದುಪಡಿಸಲಿದೆ. ಆ ಕುರಿತ ಮಾಹಿತಿಯನ್ನು ವಕೀಲರು ಉದ್ಯೋಗ ನಿರ್ವಹಿಸುವ ಇಲಾಖೆಗೆ ಪತ್ರ ಬರೆದು ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸೂಚಿಸುತ್ತದೆ. ಕ್ರಿಮಿನಲ್‌ ಪ್ರಕರಣ ದಾಖಲಾದರೆ, ಸನ್ನದು ಪಡೆದವರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಅವರಿಗೆ ಲಭಿಸುತ್ತಿರುವ ಸರ್ಕಾರಿ ಸೌಲಭ್ಯಗಳಿಗೆ ಕತ್ತರಿ ಬೀಳುತ್ತದೆ. ಒಂದೊಮ್ಮೆ ಸರ್ಕಾರಿ ಸೇವೆಯಿಂದ ನಿವೃತ್ತಿಯಾದರೆ ಅಥವಾ ಸ್ವಯಂ ನಿವೃತ್ತಿ ಪಡೆದು ವಕೀಲಿಕೆಗೆ ವಾಪಸಾಗಲು ಬಯಸಿದರೆ, ಅವರು ಮರಳಿ ಸನ್ನದು ಪಡೆಯಲು ಅವಕಾಶವಿದೆ.

ನ್ಯಾಯಾಂಗ ಇಲಾಖೆಯಲ್ಲಿ ಶೇ.50ರಷ್ಟು ಹಾಗೂ ಸರ್ಕಾರದ ವಿವಿಧ ಇಲಾಖೆಯಲ್ಲಿ ಶೇ.50ರಷ್ಟು ಜನ ಸನ್ನದು ಅಮಾನತು ಮಾಡಿಕೊಳ್ಳದವರಿದ್ದಾರೆ. ಮೇ 31ರೊಳಗೆ ಅಮಾನತು ಮಾಡಿಕೊಳ್ಳದವರ ಸನ್ನದು ರದ್ದುಪಡಿಸಲಾಗುತ್ತದೆ. ಆ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸೂಚಿಸಲಾಗುತ್ತದೆ.
-ಎಸ್‌.ಎಸ್‌. ಮಿಟ್ಟಲಕೋಡ, ಅಧ್ಯಕ್ಷರು, ಕರ್ನಾಟಕ ವಕೀಲರ ಪರಿಷತ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!