
ಬೆಂಗಳೂರು (ಅ.05): ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಂಡಾಗ ಭೂ ಮಾಲೀಕರ ಖಾತೆಗೆ ನಿಗದಿತ ಪರಿಹಾರದ ಮೊತ್ತ ಠೇವಣಿ ಇಡುವುದು ವಿಶೇಷ ಭೂಸ್ವಾಧೀನಾಧಿಕಾರಿ, ಜಿಲ್ಲಾಧಿಕಾರಿಯರ ಕರ್ತವ್ಯ ಎಂದು ಹೈಕೋರ್ಟ್ ಹೇಳಿದೆ. ಆಲಮಟ್ಟಿ ಜಲಾಶಯ ಎತ್ತರಿಸುವುದರಿಂದ ಮುಳುಗಡೆಯಾಗುವ ಬಾಗಲಕೋಟೆಯ ಗದ್ದನಕೇರಿಯ ಪ್ಲಾಟ್‌ವೊಂದರ ಮಾಲೀಕ ಲೋಕಣ್ಣ ಸೇರಿ ಇನ್ನಿತರರು ಸಲ್ಲಿಸಿದ್ದ ನ್ಯಾಯಿಕ ಪರಮಾದೇಶ (ರಿಟ್ ಮ್ಯಾಂಡಮಸ್) ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಕೃಷ್ಣಾ ಭಾಗ್ಯ ಜಲನಿಗಮದಿಂದ ಜಾರಿಗೊಳಿಸುತ್ತಿರುವ ಯೋಜನೆಗಾಗಿ 2021ರಲ್ಲಿ ಜಮೀನು ಸ್ವಾಧೀನಪಡಿಸಿಕೊಂಡು, 2023ರಲ್ಲಿ ಅಂತಿಮ ಆದೇಶ ಹೊರಡಿಸಲಾಗಿತ್ತು. ಜಾಗ ಕಳೆದುಕೊಂಡಿದ್ದ ಲೋಕಣ್ಣ, ಮತ್ತಿತರರಿಗೆ ಪರಿಹಾರ ನೀಡಿರಲಿಲ್ಲ. ಯೋಜನೆಗಾಗಿ ತಾವು ಕಳೆದುಕೊಂಡಿರುವ ಪ್ಲಾಟ್‌ಗಳಿಗೆ ಪರಿಹಾರ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಲೋಕಣ್ಣ ಮತ್ತಿತರರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಾಲೀಕತ್ವ ವಿವಾದ ಸೇರಿ ವಿಶೇಷ ಪ್ರಕರಣಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ಸಂದರ್ಭಗಳಲ್ಲಿ ಭೂಮಿ ಕಳೆದುಕೊಂಡವರ ಖಾತೆಗೆ ಪರಿಹಾರ ಮೊತ್ತ ಜಮೆ ಮಾಡಬೇಕು. ಪರಿಹಾರದ ಮೊತ್ತದ ವಿಚಾರದಲ್ಲಿ ವ್ಯಾಜ್ಯವಿದ್ದರೂ ಆ ಮೊತ್ತವನ್ನು ಭೂ ಮಾಲೀಕರ ಖಾತೆಯಲ್ಲಿ ಜಮೆ ಮಾಡಬೇಕು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಂಬಂಧಿಸಿದವರು ಮೇಲ್ಮನವಿ ಪ್ರಾಧಿಕಾರ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸದೆ ಇದ್ದಾಗ ಅವರು ಪರಿಹಾರ ಮೊತ್ತ ಒಪ್ಪಿಕೊಂಡಂತೆ ಆಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಈ ಆದೇಶ ಪ್ರಕಟವಾದ ನಾಲ್ಕು ವಾರಗಳ ಒಳಗೆ ಸಂತ್ರಸ್ತ ಅರ್ಜಿದಾರರಿಗೆ ಬಡ್ಡಿ ಸಮೇತ ಪರಿಹಾರ ಪಾವತಿ ಮಾಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ