ಲಕ್ಷಾಂತರ ಕುಟುಂಬಗಳು ಅತಂತ್ರ : ಸರ್ಕಾರದ ಜಾಣ ಕುರುಡು

By Kannadaprabha News  |  First Published Oct 14, 2020, 7:51 AM IST

ಲಕ್ಷಾಂತರ ಕುಟುಂಬಗಳು ಅತಂತ್ರವಾಗಿವೆ.  ಒಂದೂವರೆ ವರ್ಷವಾದರೂ ತಮಗೆ ಸಿಗಬೇಕಾದ ಸೌಲಭ್ಯ ಸಿಗದೇ  ಪರದಾಡುತ್ತಿವೆ. 


ಬೆಂಗಳೂರು (ಅ.14):  ಹೊಸ ಪಡಿತರ ಚೀಟಿಗಾಗಿ (2019-20ನೇ ಸಾಲಿನಲ್ಲಿ) ಅರ್ಜಿ ಸಲ್ಲಿಸಿ ಒಂದೂವರೆ ವರ್ಷ ಕಳೆದರೂ 1.42 ಲಕ್ಷ ಅರ್ಜಿದಾರರಿಗೆ ಈವರೆಗೂ ಪಡಿತರ ಚೀಟಿ ಸಿಕ್ಕಿಲ್ಲ! ಕೊರೋನಾ ಕಾಲದಲ್ಲಿ ಉಚಿತ ಆಹಾರ ಧಾನ್ಯದ ಭರವಸೆ ನೀಡಿದ್ದ ಸರ್ಕಾರ ಜಾಣ ಮರೆವು ತೋರುತ್ತಿರುವ ಕಾರಣ ಈ ಅರ್ಜಿದಾರರ ಕುಟುಂಬಗಳು ಅತಂತ್ರಗೊಂಡಿವೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಪಡಿತರ ಚೀಟಿ ವಿತರಣೆ ಸ್ಥಗಿತಗೊಳಿಸಿದ್ದ ಆಹಾರ ಇಲಾಖೆ ಕಳೆದ ವರ್ಷ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಕುಟುಂಬದವರಿಗೂ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವ ಭರವಸೆ ನೀಡಿತ್ತು. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಪ್ರತಿ ಅರ್ಜಿದಾರ ಕುಟುಂಬಕ್ಕೆ ಉಚಿತ ಆಹಾರ ಧಾನ್ಯ ವಿತರಣೆ ಮಾಡಿತ್ತು. ಆದರೆ, ಜೂನ್‌ನಿಂದ ಈವರೆಗೆ 1.42 ಲಕ್ಷ ಅರ್ಜಿದಾರ ಕುಟುಂಬಗಳಿಗೆ ಒಂದು ಕೆ.ಜಿ. ಅಕ್ಕಿಯನ್ನೂ ವಿತರಿಸಿಲ್ಲ.

Tap to resize

Latest Videos

undefined

ಕೊರೋನಾ ನಿಯಂತ್ರಣದಲ್ಲಿ ಆರೋಗ್ಯ ಸೇತು ಆ್ಯಪ್ ಪ್ರಮಖ ಪಾತ್ರ; WHO ಮೆಚ್ಚುಗೆ!

ಹಣಕಾಸು ಕೊರತೆ ಹಿನ್ನೆಲೆಯಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಮಾತ್ರ ಎಂದಿನಂತೆ ಪ್ರತಿ ತಿಂಗಳು ಪಡಿತರ ವಿತರಣೆ ಮಾಡಲು ಸರ್ಕಾರ ಸೂಚನೆ ನೀಡಿದೆ. ಆದ್ದರಿಂದ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಕುಟುಂಬದವರಿಗೆ ಆಹಾರ ಧಾನ್ಯ ವಿತರಣೆ ನಿಲ್ಲಿಸಲಾಗಿದೆ. ಹಾಗೆಯೇ ಕೊರೋನಾ ಸೋಂಕು ಕಡಿಮೆಯಾಗುತ್ತಲೇ ನೂತನ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ. ಅಲ್ಲಿವರೆಗೂ ಕಾಯಬೇಕಷ್ಟೇ ಎನ್ನುತ್ತಾರೆ ಆಹಾರ ಇಲಾಖೆ ಹಿರಿಯ ಅಧಿಕಾರಿಗಳು. ಹೀಗಾಗಿ ಪಡಿತರ ಚೀಟಿಯೂ ಸಿಗದೆ, ಕೆಲಸವೂ ಇಲ್ಲದೆ ಕೆಲ ಅರ್ಜಿದಾರರ ಕುಟುಂಬಗಳು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.

‘ಮನೆ ಬದಲಾಯಿಸಿದ್ದರಿಂದ ಕಳೆದ ಏಳೆಂಟು ವರ್ಷದಿಂದ ಇದ್ದ ಬಿಪಿಎಲ್‌ ಕಾರ್ಡು ರದ್ದಾಗಿದೆ. ಎರಡು ವರ್ಷಗಳ ಹಿಂದ ಪತಿ ಮೃತಪಟ್ಟಿದ್ದು, ನಾಲ್ಕು ಹೆಣ್ಣು ಮಕ್ಕಳನ್ನು ಸಾಕುವ ಜವಾಬ್ದಾರಿ ಹೆಗಲೇರಿದೆ. ಕೊರೋನಾದಿಂದ ಕೂಲಿ ಕೆಲಸವೂ ಸಿಗುತ್ತಿಲ್ಲ. ಹೊಸ ಬಿಪಿಎಲ್‌ ಕಾರ್ಡಿಗೆ ಅರ್ಜಿ ಹಾಕಿ ಒಂದೂವರೆ ವರ್ಷ ಕಳೆದರೂ ಬಂದಿಲ್ಲ. ಕಾರ್ಡು ಇಲ್ಲದೆ ರೇಷನ್‌ ಸಿಗುತ್ತಿಲ್ಲ. ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗಿದೆ’ ಎಂದು ತಿಮ್ಮೇನಹಳ್ಳಿಯ 48 ವರ್ಷದ ಸುಶೀಲಮ್ಮ ಅವರು ಕನ್ನಡಪ್ರಭದೊಂದಿಗೆ ಅಳಲು ತೋಡಿಕೊಂಡಿದ್ದಾರೆ.

‘ಗುತ್ತಿಗೆ ಶಿಕ್ಷಕನಾಗಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನಾನು ಕಳೆದ ವರ್ಷ ಎಪಿಎಲ್‌ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಕೊರೋನಾ ನಮ್ಮ ಬದುಕನ್ನೇ ನಾಶ ಮಾಡಿದೆ. ಎಂಟು ತಿಂಗಳಿನಿಂದ ಶಾಲೆ ತೆರೆದಿಲ್ಲ. ವಿದ್ಯಾರ್ಥಿಗಳು ನೋಂದಣಿಯಾಗದೆ ಸಂಬಳವೂ ಸಿಗುತ್ತಿಲ್ಲ. ಆರಂಭದಲ್ಲಿ ಒಂದೆರಡು ತಿಂಗಳು ಅರ್ಧ ಸಂಬಳ ನೀಡಿದ್ದ ಶಾಲೆ ಆಡಳಿತ ಮಂಡಳಿ ಆ ನಂತರ ಬಿಡಿಗಾಸನ್ನೂ ಕೊಟ್ಟಿಲ್ಲ. ಮನೆ ಬಾಡಿಗೆ ಕೊಡುವುದಿರಲಿ, ಊಟಕ್ಕೂ ಸಮಸ್ಯೆಯಾಗಿದ್ದು, ಸರ್ಕಾರ ಬಿಪಿಎಲ್‌ ಕಾರ್ಡು ಕೊಟ್ಟು ಕುಟುಂಬದ ಜೀವ ಉಳಿಸಬೇಕು’ ಎಂದು ಹೆಸರು ಹೇಳಿಕೊಳ್ಳಲು ಇಚ್ಛಿಸದ ಖಾಸಗಿ ಶಾಲಾ ಶಿಕ್ಷಕರೊಬ್ಬರು ತಮ್ಮ ನೋವು ತೋಡಿಕೊಂಡರು.

ವಿಲೇವಾರಿಯಾದ ಅರ್ಜಿಗಳು: 2019-20ನೇ ಸಾಲಿನಲ್ಲಿ ಬಿಪಿಎಲ್‌ ಕಾರ್ಡು ಕೋರಿ ರಾಜ್ಯದ ವಿವಿಧ ಜಿಲ್ಲೆಗಳಿಂದ 5,10,902 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 4,94,595 ಅರ್ಜಿಗಳು ಮಾತ್ರ ಅರ್ಹತೆ ಪಡೆದುಕೊಂಡಿದ್ದವು. ಹಾಗೆಯೇ ಎಪಿಎಲ್‌ ಕಾರ್ಡ್‌ಗಾಗಿ 2,54,727 ಅರ್ಜಿಗಳು ಸಲ್ಲಿಕೆಯಾಗಿದ್ದು 2,45,783 ಅರ್ಜಿಗಳು ಅರ್ಹತೆ ಪಡೆದಿದ್ದವು. ಪ್ರಸ್ತುತ (ಅ.13) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ವರದಿಯಂತೆ 86314 ಬಿಪಿಎಲ್‌ (ಪಿಎಚ್‌ಎಚ್‌) ಮತ್ತು 56,129 ಎಪಿಎಲ್‌ (ಎನ್‌ಪಿಎಚ್‌ಎಚ್‌) ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಜತೆಗೆ 2017ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 39 ಬಿಪಿಎಲ್‌ ಮತ್ತು 19,935 ಎಪಿಎಲ್‌, 2018ರಲ್ಲಿ 18,619 ಬಿಪಿಎಲ್‌, 10,960 ಎಪಿಎಲ್‌ ಒಟ್ಟು ಸೇರಿ 1,91,996 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ ಎಂದು ಇಲಾಖೆ ಮಾಹಿತಿ ನೀಡಿದೆ.
 
ಪಡಿತರ ಚೀಟಿ ವಿತರಣೆಗೆ ಬಯೋಮೆಟ್ರಿಕ್‌ ಕಡ್ಡಾಯವಾಗಿದೆ. ಕೊರೋನಾ ಸೋಂಕು ಕಡಿಮೆಯಾಗುತ್ತಿದ್ದಂತೆ ಪುನಃ ಪಡಿತರ ಚೀಟಿ ವಿತರಣೆ ಆರಂಭಿಸಲಾಗುವುದು. ಅರ್ಜಿದಾರರು ಆತಂಕಪಡಬಾರದು.

- ಕೆ.ಗೋಪಾಲಯ್ಯ, ಸಚಿವ, ಆಹಾರ ಮತ್ತು ನಾಗರಿಕ ಪೂರೈಕೆ

click me!