
ಮಂಡ್ಯ (ಫೆ.02): ಸಂವಿಧಾನದ ಪ್ರಜ್ಞೆ ಹೆಚ್ಚಿಸಿಕೊಳ್ಳದಿದ್ದರೆ ಹೊಸ ಪೀಳಿಗೆಗೆ ಅನಾಹುತ ಕಾದಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಎಚ್ಚರಿಸಿದರು.
ನಗರದಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ (ಕೆಎಸ್ ಎಸ್ ) ಸಂಘಟನೆ ರಾಜ್ಯ ಸಮಿತಿ ಮತ್ತು ಜಿಲ್ಲಾ ಸಮಿತಿ ಆಯೋಜಿಸಿದ್ದ 75ನೇ ಸಂವಿಧಾನ ಅಮೃತ ಮಹೋತ್ಸವ ಆಚರಣೆ ಮತ್ತು ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಸಮಾಜದ ಹಿತ ದೃಷ್ಟಿಯಿಂದ ನಾವು ಸಾರ್ವಜನಿಕರನ್ನ ಮಹಿಳೆಯರನ್ನ ಯುವಕರನ್ನ ಭಾರತ ದೇಶದ ಇತಿಹಾಸದತ್ತ ತಿರುಗಿಸಬೇಕಿದೆ. ಮುಂದೊಂದು ದಿವಸ ನಮ್ಮ ಕಾಲ ಮುಗಿಯುತ್ತ ಬಂದಿದೆ ನಮ್ಮ ಹಿಂದೆ ಬರುವಂತಹ ಹೊಸ ಹೊಸ ಪೀಳಿಗೆಗೆ ಅನಾಹುತ ಕಾದಿದೆ ಆದ್ದರಿಂದ ಸಂವಿಧಾನದ ಪ್ರಜ್ಞೆ ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ದೇಶದ ಸಂವಿಧಾನ ಬಹಳ ಮುಖ್ಯ ಬಹು:ಶ ಎಲ್ಲಾ ಗ್ರಂಥಗಳಿಗಿಂತಲೂ ಶ್ರೇಷ್ಠವಾಗಿದೆ ಎಂದು ಪ್ರಜ್ಞಾವಂತರು ಹೇಳಿದ್ದಾರೆ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಪ್ರತಿಯೊಬ್ಬ ನಾಗರಿಕರಿಗೂ ಶಕ್ತಿ ತುಂಬುವ ಗ್ರಂಥ ಸಂವಿಧಾನವಾಗಿದೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ ನಂತರ ಸಂವಿಧಾನ ದಲಿತರಿಗೆ ಮಾತ್ರ ಸಂಬಂಧಪಟ್ಟದ್ದು ಎಂದು ತಿಳಿದುಕೊಳ್ಳುವುದು ತಪ್ಪಾಗುತ್ತದೆ ಎಂದರು.
ಅಂದಿನ ಕಾಲದಲ್ಲಿ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಭಾರತವಾಯಿತು, ಸುಗಮ ಆಡಳಿತ ವ್ಯವಸ್ಥೆಗೆ ಅನುಕೂಲವಾಗುವ ರೀತಿಯ ಸಂವಿಧಾನ ರಚನೆಗಾಗಿ ಜ್ಞಾನಿಗಳು ಬುದ್ಧಿವಂತರು ಮತ್ತು ದೇಶದ ಸಮಸ್ಯೆಗಳನ್ನು ಅರಿತ ಅಂಬೇಡ್ಕರ್ ಅವರ ನೇತೃತ್ವದಲ್ಲಿ ತಂಡ ರಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನವನ್ನು ರಚಿಸಿ ದೇಶಕ್ಕೆ ಸಮರ್ಪಿಸಲು ಪ್ರಧಾನ ಮಂತ್ರಿ ನೆಹರು ಮತ್ತು ರಾಜೇಂದ್ರ ಪ್ರಸಾದ್ ಅವರಿಗೆ ಅರ್ಪಿಸಿದರು ಎಂದು ಸ್ಮರಿಸಿದರು.
ಇದನ್ನೂ ಓದಿ: ಘಾಟಿ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಗೆ ನೆರವು: ಸಚಿವ ಮುನಿಯಪ್ಪ
ಸಾರ್ವಜನಿಕರು ಮತ್ತು ಅತ್ಯಂತ ಕಡು ಬಡವರು ಯಾವುದೇ ಹಣಬಲ ಜನ ಬಲ ಅಧಿಕಾರ ಬಲ ಇಲ್ಲದಿದ್ದರೂ ತೊಡೆತಟ್ಟಲು ಶಕ್ತಿ ತುಂಬುವುದು ಸಂವಿಧಾನ. ಏನೂ ಇಲ್ಲದಂತಹ ಒಬ್ಬ ಸಾಮಾನ್ಯ ವ್ಯಕ್ತಿಯು ತನ್ನ ಘನತೆ ವಿಶ್ವಾಸ ಗೌರವ ಸ್ವಾಭಿಮಾನಕ್ಕೆ ಧಕ್ಕೆ ಆದರೆ ಗಟ್ಟಿಯಾಗಿ ಧ್ವನಿ ಎತ್ತಲು ಶಕ್ತಿ ತುಂಬುವುದು ಸಂವಿಧಾನವಾಗಿದೆ ಇಂತಹ ಸಂವಿಧಾನವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಸಮರ್ಪಿಸುವುದು ಅವಶ್ಯವಿದೆ. ಇದೇ ಸಂದರ್ಭದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಚಿವರು ಮತ್ತು ಶಾಸಕರಾದ ರವಿಕುಮಾರ್ ಗೌಡ ಮತ್ತು ದಿನೇಶ್ ಗೂಳಿಗೌಡ ಹಾಗೂ ಕಾಂಗ್ರೆಸ್ ನಾಯಕ ಸ್ಟಾರ್ ಚಂದ್ರು ಸೇರಿದಂತೆ ಹಲವರು ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಬೆಂಬಲಿಗರ ಸಮಾವೇಶ ನಡೆಸುತ್ತೇವೆ: ಸಚಿವ ಕೆ.ಎನ್. ರಾಜಣ್ಣ
ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗ ಪೆದ್ದಿ ಮಠ ಪೀಠ್ಯಾಧ್ಯಕ್ಷ ಜ್ಞಾನ ಪ್ರಕಾಶ್ ಸ್ವಾಮೀಜಿ, ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ರಾಜ್ಯಾಧ್ಯಕ್ಷ ಎಚ್ ಎನ್. ನರಸಿಂಹಮೂರ್ತಿ, ಸಂಸ್ಥಾಪಕ ಅಧ್ಯಕ್ಷ ಡಾ. ಕುಮಾರಸ್ವಾಮಿ ಸಾಕ್ಯ, ಶಾಸಕ ರವಿಕುಮಾರ್ ಗೌಡ ಗಣಿಗ, ಶಾಸಕ ದಿನೇಶ್ ಗೂಳಿಗೌಡ ,ಕಾಂಗ್ರೆಸ್ ನಾಯಕ ಸ್ಟಾರ್ ಚಂದ್ರು, ಮೂಡ ಅಧ್ಯಕ್ಷ ನಹಿಮ್, ಮಾಜಿ ಶಾಸಕ ಡಾಕ್ಟರ್ ಕೆ ಅನ್ನದಾನಿ, ನಾವು ದ್ರಾವಿಡ ಕನ್ನಡಿಗರು ಚಳುವಳಿಯ ಅಭಿ ಒಕ್ಕಲಿಗ, ಖ್ಯಾತ ಲೇಖಕ ಎಸ್ ಸಿದ್ದಯ್ಯ, ಅಬಕಾರಿ ಅಧಿಕ ತಿರುಮಲಾಪುರ ನಾರಾಯಣ, ಎಲ್ ಸಂದೇಶ್, ಲಕ್ಷ್ಮಣ ಚೀರನಹಳ್ಳಿ ಸೇರಿದಂತೆ ಹಲವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ