
ಬೆಂಗಳೂರು (ಆ.22): ಉದ್ಯೋಗಕ್ಕೆ ತೆರಳುವ ವೇಳೆ ಕಾರ್ಮಿಕ ಮೃತಪಟ್ಟರೂ, ಅದನ್ನು ಕೆಲಸದ ಅವಧಿಯಲ್ಲಿ ಸಂಭವಿಸಿದ ಸಾವು ಎಂಬುದಾಗಿ ಪರಿಗಣಿಸಿ ಆತನ ವಾರಸುದಾರರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಕೆಲಸಕ್ಕೆ ಕಾಫಿ ಎಸ್ಟೇಟ್‌ಗೆ ತೆರಳುತ್ತಿದ್ದ ವೇಳೆ ಕಾಲುಜಾರಿ ಬಿದ್ದು ಸಾವಿಗೀಡಾಗಿದ್ದ ಕೂಲಿ ಕಾರ್ಮಿಕನೊಬ್ಬನ ಕುಟುಂಬಕ್ಕೆ ಪರಿಹಾರ ಪಾವತಿಸುವಂತೆ ಚಿಕ್ಕಮಗಳೂರಿನ ಕಾರ್ಮಿಕ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಎಸ್ಟೇಟ್ ಮಾಲೀಕ ಎನ್.ಎಲ್. ಪುಣ್ಯಮೂರ್ತಿ ಹಾಗೂ ನ್ಯಾಷನಲ್ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
'ಕಟ್ಟಡ ಕಾರ್ಮಿಕರಿಗೆ ಮನೆ, ಸರ್ಕಾರಿ ಸವಲತ್ತು'
ಅದನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಏಕಸದಸ್ಯ ನ್ಯಾಯಪೀಠ, ಪ್ರಕರಣದಲ್ಲಿ ಮೃತಪಟ್ಟಿರುವ ಸ್ವಾಮಿಗೌಡ ಅವರದ್ದು ಉದ್ಯೋಗ ಅವಧಿಯಲ್ಲಿ ಸಂಭವಿಸಿದ ಸಾವು ಅಲ್ಲ ಎಂಬ ವಿಮಾ ಕಂಪನಿ ಮತ್ತು ಎಸ್ಟೇಟ್ ಮಾಲೀಕನ ವಾದವನ್ನು ಒಪ್ಪಲಾಗದು. ಈ ಪ್ರಕರಣದಲ್ಲಿ ಬೆಳಗ್ಗೆ 8 ಗಂಟೆಯಿಂದ ಉದ್ಯೋಗದ ಅವಧಿ ಆರಂಭವಾಗುತ್ತದೆ. ಮೃತನ ಸಾವು ಬೆಳಗ್ಗೆ 7 ಗಂಟೆಗೆ ಸಂಭವಿಸಿದೆ. ಸಾವು ಕೂಡ ಆತನ ಮನೆಯಲ್ಲಿ ನಡೆದಿಲ್ಲ. ಒಂದೊಮ್ಮೆ ಮನೆಯಲ್ಲಿ ಸಾವು ಸಂಭವಿಸಿದ್ದರೆ ಎಸ್ಟೇಟ್ ಮಾಲೀಕನ ಮತ್ತು ವಿಮಾ ಕಂಪನಿಯ ವಾದವನ್ನು ಒಪ್ಪಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಉದ್ಯೋಗಕ್ಕೆ ಆಗಮಿಸುವ ಮತ್ತು ಕೆಲಸ ಮುಗಿಸಿ ನಿರ್ಗಮಿಸುವ ಸಮಯವನ್ನು ಉದ್ಯೋಗದ ಅವಧಿಯಂದೇ ಪರಿಗಣಿಸಬೇಕಾಗುತ್ತದೆ. ವಾಸ್ತವದಲ್ಲಿ ಉದ್ಯೋಗಕ್ಕೆ ಹಾಜರಾಗಲೆಂದೇ ಸ್ವಾಮಿಗೌಡ ಮನೆ ಬಿಟ್ಟು ತೆರಳಿದ್ದಾನೆ. ಉದ್ಯೋಗದ ಜಾಗಕ್ಕೆ ತೆರಳುವಾಗ, ಅದೂ ಮಾಲೀಕನಿಗೆ ಸೇರಿದ ಜಾಗದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಸಾವು ಸಂಭವಿಸಿದೆ. ಹೀಗಾಗಿ, ಮಾಲೀಕರು ಮತ್ತು ವಿಮಾ ಕಂಪನಿಯೇ ಪರಿಹಾರ ಪಾವತಿಸಬೇಕು. ಪರಿಹಾರ ಪಡೆಯಲು ಮೃತನ ವಾರಸುದಾರರು ಅರ್ಹರಾಗಿದ್ದಾರೆ. ಆ ಸಂಬಂಧ ಕಾರ್ಮಿಕ ಆಯುಕ್ತರು ಹೊರಡಿಸಿರುವ ಆದೇಶ ನ್ಯಾಯಸಮ್ಮತವಾಗಿದೆ. ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಆದೇಶಿಸಿದ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿದೆ.
ಪ್ರಕರಣದ ವಿವರ: ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ನಿವಾಸಿ ಸ್ವಾಮಿಗೌಡ, 2006ರ ಜ.12ರಂದು ಕೊಳ್ಳಿಬೈಯಲಿನ ಪುಣ್ಯಮೂರ್ತಿಯ ಕಾಫಿ ಎಸ್ಟೇಟ್‌ಗೆ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದ. ಕಾಫಿ ಎಸ್ಟೇಟ್‌ನಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಸಾವನ್ನಪ್ಪಿದ್ದ. ಪರಿಹಾರಕ್ಕಾಗಿ ಮೃತನ ಕುಟುಂಬ ಕಾರ್ಮಿಕ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಿತ್ತು. ಮೃತನ ಕುಟುಂಬಕ್ಕೆ 1,76,328 ರು. ಪರಿಹಾರ ಘೋಷಣೆ ಮಾಡಿದ ಆಯುಕ್ತರು, ಆ ಮೊತ್ತಕ್ಕೆ 2006ರ ಆ.13ರಿಂದ ವಾರ್ಷಿಕ ಶೇ.7.5ರಷ್ಟುಬಡ್ಡಿದರ ಪಾವತಿಸಬೇಕು. ಈ ಹಣದಲ್ಲಿ 75,032 ರು. ಎಸ್ಟೇಟ್ ಮಾಲೀಕ ಮತ್ತು ಉಳಿದ 1,01,296ರ ರು. ವಿಮಾ ಕಂಪನಿ ಪಾವತಿಸಬೇಕು ಎಂದು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಮತ್ತು ಎಸ್ಟೇಟ್ ಮಾಲೀಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಎಸ್ಟೇಟ್ ಮಾಲೀಕ ಪರ ವಕೀಲರು, ಎಸ್ಟೇಟ್‌ನಲ್ಲಿ ಉದ್ಯೋಗ ಅವಧಿಯು ಬೆಳಗ್ಗೆ 8ರಿಂದ ಸಂಜೆ 4.30ರವರೆಗೆ ಆಗಿರುತ್ತದೆ. ಆದರೆ, ಸ್ವಾಮಿಗೌಡ ಬೆಳಗ್ಗೆ 7 ಗಂಟೆಗೆ ಎಸ್ಟೇಟ್‌ನಲ್ಲಿ ಕಾಲು ಜಾರಿ ಬಿದ್ದಿದ್ದಾನೆ. ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಹೃದಯಘಾತದಿಂದ ಎಸ್ಟೇಟ್‌ನಿಂದ ಹೊರಗಡೆ ಸಾವನ್ನಪ್ಪಿದ್ದಾನೆ. ಎಸ್ಟೇಟ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಎಲ್ಲ ಕಾರ್ಮಿಕರಿಗೂ ವಿಮೆ ಮಾಡಿಸಲಾಗಿತ್ತು. ಘಟನೆ ನಡೆದ ದಿನದಂದು ವಿಮೆ ಚಾಲ್ತಿಯಲ್ಲಿತ್ತು. ಹಾಗಾಗಿ, ಮೃತನಿಗೆ ವಿಮಾ ಕಂಪನಿಯೇ ಪರಿಹಾರ ಪಾವತಿಸಬೇಕು ಎಂದು ವಾದಿಸಿದ್ದರು.
ವಿಮಾ ಕಂಪನಿ ಪರ ವಕೀಲರು, ಘಟನೆಯು ಉದ್ಯೋಗದ ಅವಧಿಯಲ್ಲಿ ನಡೆದ ಅಪಘಾತವಲ್ಲ. ಘಟನೆ ನಡೆದ ದಿನದಂದು ಮುಂಜಾನೆ ಮಳೆ ಬಂದಿತ್ತು. ಕೆಸರಿನ ಮೇಲೆ ಕಾಲಿಟ್ಟಾಗ ಜಾರಿದ ಪರಿಣಾಮ ಸ್ವಾಮಿಗೌಡಗೆ ಹೃದಯಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ. ಘಟನೆಗೂ ಮತ್ತು ಆತನ ಉದ್ಯೋಗಕ್ಕೆ ಯಾವುದೇ ಸಂಬಂಧ ಇಲ್ಲ. ಸಾವನ್ನಪ್ಪಿದ ವೇಳೆ ಉದ್ಯೋಗ ಮಾಡುತ್ತಿರಲಿಲ್ಲ. ಹಾಗಾಗಿ, ಇದನ್ನು ಉದ್ಯೋಗ ಅವಧಿಯಲ್ಲಿ ಸಂಭವಿಸಿದ ಸಾವು ಎಂಬುದಾಗಿ ಪರಿಗಣಿಸಿ ಮೃತನ ಕುಟುಂಬಕ್ಕೆ ಪರಿಹಾರ ನೀಡಲಾಗದು ಎಂದು ವಾದಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ