Kundapura Kannada Habba 2025: ಬೆಂಗಳೂರಲ್ಲಿ ಕುಂದಾಪ್ರ ಕನ್ನಡ ಹಬ್ಬ, ದಿನಾಂಕ, ಸ್ಥಳ, ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ

Published : Jul 24, 2025, 08:08 PM ISTUpdated : Jul 24, 2025, 08:11 PM IST
Kundapura Kannada Habba 2025 CM Siddaramaiah Inaugurates Honors Dr Sudarshan Ballal Yogaraj Bhat in Bengaluru

ಸಾರಾಂಶ

ಜುಲೈ 26 ಮತ್ತು 27 ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಕುಂದಾಪ್ರ ಕನ್ನಡ ಹಬ್ಬವು ಅದ್ದೂರಿಯಾಗಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಕುಂದಾಪ್ರ ಕನ್ನಡ ಅಧ್ಯಯನ ಪೀಠವನ್ನು ಲೋಕಾರ್ಪಣೆ ಮಾಡಲಾಗುವುದು.

ಬೆಂಗಳೂರು (ಜುಲೈ.24): ರಾಜಧಾನಿ ಬೆಂಗಳೂರಿನ ʼಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)ʼ ವರ್ಷಂಪ್ರತಿ ಆಯೋಜಿಸುವ ʼಕುಂದಾಪ್ರ ಕನ್ನಡ ಹಬ್ಬʼ ಈ ಸಲ ಜುಲೈ 26 ಮತ್ತು 27ರಂದು ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ ಬಳಿ ಇರುವ ನಂದಿ ಲಿಂಕ್ ಗ್ರೌಂಡ್ನಲ್ಲಿ ನಡೆಯಲಿದೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದ್ದಾರೆ.

ʼಕುಂದಾಪ್ರ ಕನ್ನಡ ಹಬ್ಬ-2025ʼರ ಕುರಿತು ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಆರನೇ ಕುಂದಾಪ್ರ ಕನ್ನಡ ಹಬ್ಬವಾಗಿದ್ದು, ಈ ಸಲ ಇದನ್ನು ಶನಿವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಕುಂದಾಪ್ರ ಕನ್ನಡ ಅಧ್ಯಯನ ಪೀಠವನ್ನು ಸಿಎಂ, ಸಭಾಪತಿ ಯು.ಟಿ.ಖಾದರ್, ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ ಮುಂತಾದವರು ಜೊತೆಯಾಗಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು. ನಾಲ್ಕು ವರ್ಷಗಳ ಹಿಂದೆ ಕುಂದಾಪ್ರ ಕನ್ನಡ ಹಬ್ಬದ ಸಂದರ್ಭದಲ್ಲೇ ಈ ಪೀಠಕ್ಕಾಗಿ ಮನವಿ ಮಾಡಲಾಗಿತ್ತು. ಅದರಂತೆ ಸರ್ಕಾರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಂದಾಪ್ರ ಕನ್ನಡ ಪೀಠ ಸ್ಥಾಪಿಸಿ ಅನುದಾನ ಕೂಡ ಬಿಡುಗಡೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

ಊರ ಗೌರವ ಪುರಸ್ಕಾರ: ಈ ಸಲದ ಕುಂದಾಪ್ರ ಕನ್ನಡ ಹಬ್ಬದಲ್ಲಿ ಕುಂದಾಪುರ ಮೂಲದ ಸಾಧಕರಾದ ಮಣಿಪಾಲ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ.ಎಚ್. ಸುದರ್ಶನ ಬಲ್ಲಾಳ್ ಅವರಿಗೆ ಶನಿವಾರ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಹಾಗೂ ಖ್ಯಾತ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಭಾನುವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ʼಊರ ಗೌರವʼ ಎನ್ನುವ ವಿಶೇಷ ಪುರಸ್ಕಾರ ನೆರವೇರಲಿದೆ ಎಂದು ದೀಪಕ್ ಶೆಟ್ಟಿ ಮಾಹಿತಿ ನೀಡಿದರು.

ಪ್ರವೇಶ ಉಚಿತ, ಸರ್ವರಿಗೂ ಸ್ವಾಗತ: ಎರಡು ದಿನಗಳ ಈ ಸಮಾರಂಭದಲ್ಲಿ ನಟರಾದ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ನಟಿ ರಕ್ಷಿತಾ ಪ್ರೇಮ್ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರೂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದು ಕುಂದಾಪ್ರ ಕನ್ನಡ ಹಬ್ಬವಾದರೂ ಸಮಸ್ತ ಕನ್ನಡಿಗರ ಸಂಭ್ರಮ, ಇದು ಪ್ರವೇಶ ಉಚಿತವಾಗಿರುವ ಸಮಾರಂಭವಾಗಿದ್ದು, ಎಲ್ಲರಿಗೂ ಮುಕ್ತ ಆಹ್ವಾನ ಇರಲಿದೆ ಎಂದು ಅವರು ಮಾಹಿತಿ ನೀಡಿದರು.

ಕಲೆ-ತಿನಿಸುಗಳ ಮೇಳ: ಎರಡು ದಿನಗಳಲ್ಲಿ400ಕ್ಕೂ ಹೆಚ್ಚು ಕಲಾವಿದರು ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಅಟ್ಟಣಿಗೆ ಆಟ ಎನ್ನುವ ವಿಶೇಷ ಯಕ್ಷಗಾನ ಪ್ರದರ್ಶನ ಇರಲಿದ್ದು, ಕುಂದಾಪುರದ ಅಪರೂಪದ ವಿಶೇಷದ ಖಾದ್ಯಗಳ ಆಹಾರ ಮೇಳ, ಕುಂದಾಪುರದ್ದೇ ಆದ ವಿಶೇಷ ವಸ್ತುಗಳು ಸಿಗುವ ಕುಂದಾಪುರ ಸಂತೆ ಕೂಡ ಇರಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಹಾಗೂ ಎಚ್. ಅಮರನಾಥ್ ಶೆಟ್ಟಿ, ಸಿಎ ವಿಜಯ್ ಶೆಟ್ಟಿ, ಪ್ರಸಾದ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಏನಿದು ವಿಶ್ವ ಕುಂದಾಪ್ರ ಕನ್ನಡ ದಿನ?

ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಆರು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ʼವಿಶ್ವ ಕುಂದಾಪ್ರ ಕನ್ನಡ ದಿನʼ ಎಂದು ಹಬ್ಬದ ರೀತಿ ಆಚರಿಸಲಾಗುತ್ತಿದ್ದು, ಈ ಸಲ ಜುಲೈ 24ರಂದು ಆಷಾಢ ಅಮಾವಾಸ್ಯೆ ಬಂದಿದೆ. ಇದು ವಾರದ ದಿನವಾದ್ದರಿಂದ, ಆಯೋಜನೆ ಹಾಗೂ ಆಗಮಿಸುವ ಅತಿಥಿ ಗಣ್ಯರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಜುಲೈ 26-27ರಂದು ವಿಶ್ವ ಕುಂದಾಪುರ ಕನ್ನಡ ದಿನವನ್ನು ಕುಂದಾಪ್ರ ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದೆ.

ಶನಿವಾರ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳು

ಸಿಎಂ ಸಿದ್ದರಾಮಯ್ಯ, ಸಭಾಪತಿ ಯು.ಟಿ.ಖಾದರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಕುಂದಾಪುರ ಶಾಸಕ ಕಿರಣ್ಕುಮಾರ್ ಕೊಡ್ಗಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ಹಾಗೂ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಮಂಗಳೂರು ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ರಾಜು ಮೊಗವೀರ, ಕೋಟ ಗೀತಾನಂದ ಪ್ರತಿಷ್ಠಾನದ ಪ್ರವರ್ತಕ ಆನಂದ ಸಿ. ಕುಂದರ್, ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಗೋಪಾಲ್ ಶೆಟ್ಟಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ಚಿತ್ರ ನಟಿ ರಕ್ಷಿತಾ ಪ್ರೇಮ್, ಲೈಫ್ಲೈನ್ ಟೆಂಡರ್ ಚಿಕನ್ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಹೆಗ್ಡೆ, ವಿಎಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಂಜಲಿ ವಿಜಯ್, ಎಎಸ್ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಶೆಟ್ಟಿ.

ಭಾನುವಾರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳು

ಡಿಸಿಎಂ ಡಿ.ಕೆ.ಶಿವಕುಮಾರ್, ಎಂಆರ್ಜಿ ಗ್ರೂಪ್ ಸಿಎಂಡಿ ಪ್ರಕಾಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ನಟ-ನಿರ್ದೇಶಕ ರಿಷಬ್ ಶೆಟ್ಟಿ, ಪತ್ರಕರ್ತ ಜೋಗಿ (ಗಿರೀಶ್ ರಾವ್), ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನ ಉಪೇಂದ್ರ ಶೆಟ್ಟಿ, ಚಿತ್ರನಟರಾದ ಪ್ರಮೋದ್ ಶೆಟ್ಟಿ, ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ, ಲೈಫ್ಲೈನ್ ಟೆಂಡರ್ ಚಿಕನ್ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಹೆಗ್ಡೆ, ವಿಎಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಂಜಲಿ ವಿಜಯ್, ಎಎಸ್ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಶೆಟ್ಟಿ.

ಕುಂದಾಪ್ರ ಕನ್ನಡ ಹಬ್ಬ-2025ರ ವಿಶೇಷ ಕಾರ್ಯಕ್ರಮಗಳು

  1. ಜುಲೈ 26ರ ಶನಿವಾರ, ಬೆಳಗ್ಗೆ 9.30ರಿಂದ
  2.  ಸಾವ್ರ್ ಹಣ್ಣಿನ ವಸಂತ
  3. ಹೌಂದರಾಯನ ವಾಲ್ಗ
  4. ಕುಂದಾಪ್ರದಡುಗೆ: ವಿಶೇಷ ತಿಂಡಿ-ತಿನಿಸು, ಭಕ್ಷ್ಯ ಭೋಜನ ಒಳಗೊಂಡ ಆಹಾರ ಮೇಳ.
  5.  ಮೂಕಜ್ಜಿಯ ಕನಸುಗಳು: ಪುಸ್ತಕ ಮೇಳ.
  6. ಸ್ವರ ಕುಂದಾಪ್ರ: ಸಂಗೀತ ಕಾರ್ಯಕ್ರಮ
  7. . ಪಟ್ಟಾಂಗ: ಕುಂದಾಪುರ ನೆಲಮೂಲದ ಆಚರಣೆ-ಆರಾಧನೆ, ಕಟ್ಟು-ಕಟ್ಟಳೆ ಕುರಿತ ಚರ್ಚೆ
  8.  ಬಾರ್ಕೂರಿನ್ ಹಡ್ಗ್: ವಿಶೇಷ ನೃತ್ಯರೂಪಕ
  9. . ನೂಪುರ ಸಂಚಾರ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಸ್ತುತಿ ಪಡಿಸುವ ಸಾಂಸ್ಕೃತಿ ಕಾರ್ಯಕ್ರಮ.
  10.  ಅಟ್ಟಣಿಗೆ ಆಟ: ಎರಡು ವೇದಿಕೆಯಲ್ಲಿ ನಡೆಯುವ ವಿಶೇಷ ಯಕ್ಷಗಾನ, ಪ್ರಸಂಗ-ದಕ್ಷಯಜ್ಱ.
  11.  ವಿಶೇಷ ಅಭಿನಂದನೆ: ಆರೈಕೆ ನಿರಾಶ್ರಿತರ ಆಶ್ರಮ, ಬೆಂಗಳೂರು

ಜುಲೈ 27ರ ಭಾನುವಾರ, ಬೆಳಗ್ಗೆ 9.30ರಿಂದ ಆರಂಭ.

1. ಪಿಳ್ಳಂಗೋವಿಯ ಚೆಲುವ ಕೃಷ್ಣನಾ: ಡಾ.ವಿದ್ಯಾಭೂಷಣರ ಗಾನಯಾನದ ಸುವರ್ಣ ಸಂಭ್ರಮ.

2. ಬಾಲಗೋಪಾಲ: ಮಕ್ಕಳ ಮಹಾಸಂಗಮದ ಯಕ್ಷನೃತ್ಯ

3. ಹಂದಾಡಿ ಕ್ವಿಜ್: ಮನು ಹಂದಾಡಿ ನಡೆಸಿಕೊಡುವ ಕುಂದಾಪ್ರ ಕನ್ನಡದ ರಸಪ್ರಶ್ನೆ ಕಾರ್ಯಕ್ರಮ.

4. ಚಂದಾಮುಡಿ: ಕುಂದಾಪ್ರದ ಸುಂದರ-ಸುಂದರಿಯರ ಫ್ಯಾಷನ್ ಶೋ.

5. ಕಾಳಿಂಗ-ಕಾಳಿಂಗ: ಕಾಳಿಂಗ ನಾವಡ ಮತ್ತು ಪಿ.ಕಾಳಿಂಗರಾಯರ ಪದ-ಪದ್ಯಗಳ ಅನುರಣನ.

6. ರಘು ದೀಕ್ಷಿತ್ ಲೈವ್ ಕನ್ಸರ್ಟ್.

7. ವಿಶೇಷ ಅಭಿನಂದನೆ: ಕ್ಲೀನ್ ಕುಂದಾಪುರ, ಸೇವ್ ಅವರ್ ಓಷನ್.

ಹೊರಾಂಗಣ ಕಾರ್ಯಕ್ರಮಗಳು

ಎರಡೂ ದಿವಸ ದಿನವಿಡೀ ಹೊರಾಂಗಣದ ಕಾರ್ಯಕ್ರಮಗಳು ಇರುತ್ತವೆ. ಹುಲಿ ಕುಣಿತ, ಕೊರಗರ ಡೋಲುವಾದನ, ಹೋಳಿ ಕುಣಿತ, ಬ್ಯಾಂಡ್ ಸೆಟ್, ಬಿಡಿ ಪಟಾಕಿ, ಕುಂದಾಪುರದ ವಿಶೇಷ ವಸ್ತುಗಳು ಸಿಗುವ ಕುಂದಾಪ್ರ ಸಂತೆ ಹಾಗೂ ಕುಂದಾಪುರದ ಡಿಜಿಟಲ್ ಟೂರ್ 'ಇಲ್ಕಾಣಿ ಕುಂದಾಪ್ರ' ಇರಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ