
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಬೆದರಿಕೆ ಹಿನ್ನೆಲೆಯಲ್ಲಿ ಸರ್ಕಾರವು ನೌಕರರ ಬಾಕಿಯಿದ್ದ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಯಲ್ಲಿ 26 ತಿಂಗಳ ಹಿಂಬಾಕಿ ಪಾವತಿ ಹಾಗೂ 2025ರ ಏ.1ರಿಂದ ಅನ್ವಯವಾಗುವಂತೆ ಹೊಸದಾಗಿ ವೇತನ ಹೆಚ್ಚಳ ಮಾಡುವ ಕುರಿತು ಸರ್ಕಾರ ಆದೇಶಿಸಿದೆ. ಆದರೂ ತೃಪ್ತರಾಗದ ಸಾರಿಗೆ ನೌಕರ ಸಂಘಟನೆಗಳು, ಗುರುವಾರ ಬೆಂಗಳೂರು ಚಲೋ ನಡೆಸುವುದಾಗಿ ಪ್ರಕಟಿಸಿದ್ದು, ಮುಂದಿನ ಹೋರಾಟ ಕುರಿತು ಅನಂತರ ಪ್ರಕಟಿಸುವುದಾಗಿ ತಿಳಿಸಿವೆ.
ಆ ಮೂಲಕ ಗುರುವಾರ ಸಾರಿಗೆ ನೌಕರರ ಪ್ರತಿಭಟನೆ ನಡೆಯುವುದು ಖಚಿತವಾಗಿದ್ದು, ರಾಜ್ಯದಲ್ಲಿ ಕೆಲವೆಡೆ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.
38 ತಿಂಗಳ ವೇತನ ಹೆಚ್ಚಳ ಹಾಗೂ 2024ರ ಜ.1ರಿಂದ ಅನ್ವಯವಾಗುವಂತೆ ಹೊಸದಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕೆಎಸ್ಸಾರ್ಟಿಸಿ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಗುರುವಾರ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಂಡಿದೆ. ರಾಜ್ಯದ ವಿವಿಧೆಡೆಯಿಂದ ಬರುವ ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶಗೊಂಡು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಇದರ ನಡುವೆಯೇ ಬುಧವಾರ ರಾತ್ರಿ ಸರ್ಕಾರ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಯಲ್ಲಿ 26 ತಿಂಗಳ ಹಿಂಬಾಕಿ ಪಾವತಿಗೆ 1,271.92 ಕೋಟಿ ರು. ಪಾವತಿಗೆ ಆದೇಶಿಸಿದೆ. ಜತೆಗೆ 2025ರ ಏ.1ರಿಂದ ಅನ್ವಯವಾಗುವಂತೆ ಹೊಸ ವೇತನ ಹೆಚ್ಚಳ ಮಾಡಲಾಗುವುದು. ಎಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡಬೇಕು ಎಂಬ ಕುರಿತು ಸಾರಿಗೆ ನೌಕರರ ಸಂಘಟನೆಯ ಪ್ರಮುಖರೊಂದಿಗೆ ಚರ್ಚಿಸುವಂತೆಯೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಆದೇಶಿಸಿದೆ.
ಸರ್ಕಾರದ ಈ ಆದೇಶದ ವಿರುದ್ಧ ಅಸಮಾಧಾನಗೊಂಡಿರುವ ಕೆಎಸ್ಸಾರ್ಟಿಸಿ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ನಮ್ಮ ಬೇಡಿಕೆ ಇರುವುದು 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿಸಬೇಕು ಹಾಗೂ 2024ರ ಜ. 1ರಿಂದ ಅನ್ವಯವಾಗುವಂತೆ ಹೊಸದಾಗಿ ವೇತನ ಹೆಚ್ಚಳ ಮಾಡಬೇಕು ಎಂಬುದಾಗಿದೆ. ಆದರೆ, ಸರ್ಕಾರ 26 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಆದೇಶಿಸಿದೆ. ಅಲ್ಲದೆ, 2025ರ ಏ. 1ರಿಂದ ಅನ್ವಯವಾಗುವಂತೆ ಮೂಲ ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದೆ.
ಈ ಎರಡೂ ಆದೇಶದಿಂದಾಗಿ ಸಾರಿಗೆ ನೌಕರರಿಗೆ ನಷ್ಟವುಂಟಾಗುತ್ತದೆ. 12 ತಿಂಗಳ ವೇತನ ಹೆಚ್ಚಳ ಹಿಂಬಾಕಿ ದೊರಕದಂತಾಗಲಿದೆ. ಅದರ ಜತೆಗೆ 2025ರ ಏ. 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಿದರೆ 15 ತಿಂಗಳ ವೇತನ ಹೆಚ್ಚಳ ಇಲ್ಲದಂತಾಗಲಿದೆ. ಅಲ್ಲದೆ, ಈ ಕ್ರಮವು ಪ್ರತಿ ನೌಕರರ ಮುಂಬರುವ ವೇತನ ಹೆಚ್ಚಳ, ಸೇವಾ ದಾಖಲೆ, ಗ್ರ್ಯಾಚ್ಯುಟಿ ಸೇರಿ ಮತ್ತಿತರ ವಿಚಾರದ ಮೇಲೆ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಸರ್ಕಾರದ ಆದೇಶ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿವೆ.
ಸರ್ಕಾರವು ನಮ್ಮನ್ನು ಸಂಪರ್ಕಿಸದೇ ಈ ಆದೇಶ ಮಾಡಿದೆ. ಹೀಗಾಗಿ ಗುರುವಾರದ ಬೆಂಗಳೂರು ಚಲೋ ಪ್ರತಿಭಟನೆಯನ್ನು ಕಡ್ಡಾಯವಾಗಿ ನಡೆಸಲಾಗುವುದು. ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಗುವುದು. ಅದಾದ ನಂತರ ಜಂಟಿ ಕ್ರಿಯಾ ಸಮಿತಿ ಪ್ರಮುಖರು ಸಭೆ ನಡೆಸಿ, ಸರ್ಕಾರದ ಆದೇಶದ ಕುರಿತು ಪರಾಮರ್ಶಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಂಟಿ ಕ್ರಿಯಾ ಸಮಿತಿ ಪ್ರಮುಖರು ತಿಳಿಸಿದ್ದಾರೆ.
ವೇತನ ಹೆಚ್ಚಳ ವಿಳಂಬ ಸೇರಿ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಕುರಿತು ವಿವರಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹಿಂದಿನ ಬಿಜೆಪಿ ಸರ್ಕಾರ 2023ರಲ್ಲಿ 2020ರ ಜ. 1ರಿಂದ ಪೂರ್ವಾನ್ವಯವಾಗುವಂತೆ ವೇತನ ಹೆಚ್ಚಳದ ಆದೇಶ ಮಾಡಿತ್ತು. ಆದರೆ, ಅದಕ್ಕೆ ಬೇಕಾದ ಅನುದಾನ ಮೀಸಲಿಟ್ಟಿರಲಿಲ್ಲ. ಆದರೂ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶ್ರೀನಿವಾಸ ಮೂರ್ತಿ ಏಕಸದಸ್ಯ ಸಮಿತಿ ರಚಿಸಿ, ಆ ಸಮಿತಿ ಶಿಫಾರಸಿನಂತೆ ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ನಿರ್ಧರಿಸಿ 1271.92 ಕೋಟಿ ರು. ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು, ನಿವೃತ್ತ ನೌಕರರ ವೇತನ ಪರಿಷ್ಕರಣೆ ಸಂಬಂಧ ಉಪಧನ ಬಾಕಿ ಮೊತ್ತ 224 ಕೋಟಿ ರು.ಗಳನ್ನೂ ಹಿಂದಿನ ಸರ್ಕಾರ ಮೀಸಲಿಟ್ಟಿರಲಿಲ್ಲ. ಆದರೂ, ಅದನ್ನು ಬಿಡುಗಡೆ ಮಾಡಿದೆ. ನಮ್ಮ ಸರ್ಕಾರ 3,510 ಕೋಟಿ ರು. ವೆಚ್ಚದಲ್ಲಿ ಹೊಸದಾಗಿ 7,800 ಬಸ್‌ಗಳನ್ನು ನಿಗಮಗಳಿಗೆ ಸೇರ್ಪಡೆ ಮಾಡಿ, 10 ಸಾವಿರ ಹೊಸ ನೇಮಕಾತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
2019-2023ರ ಅವಧಿಯಲ್ಲಿ 4,900 ಕೋಟಿ ರು. ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಪಾವತಿಸಬೇಕಿತ್ತು. ಅದಕ್ಕಾಗಿ 2 ಸಾವಿರ ಕೋಟಿ ರು. ಸಾಲ ಪಡೆಯಲು ಸಾರಿಗೆ ನಿಗಮಗಳಿಗೆ ಅನುಮತಿಸಿದೆ ಮತ್ತು ಆ ಸಾಲವನ್ನು ಸರ್ಕಾರವೇ ಪಾವತಿಸುತ್ತಿದೆ. ಇನ್ನು, ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನರಿತು ಕಳೆದೆರಡು ವರ್ಷಗಳಲ್ಲಿ 1,219.23 ಕೋಟಿ ರು. ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದೆ. ಇಷ್ಟೆಲ್ಲ ಆರ್ಥಿಕ ಸಂಕಷ್ಟಗಳ ನಡುವೆಯೂ ಸರ್ಕಾರ ನೌಕರರ ಹಿತ ರಕ್ಷಣೆ ಮಾಡುವ ಕೆಲಸ ಮಾಡಿದ್ದು, ನೌಕರರು ಯಾವುದೇ ಪ್ರತಿಭಟನೆಯಲ್ಲೂ ಪಾಲ್ಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಸರ್ಕಾರದ ಆದೇಶ ಮತ್ತು ಸಂಘಟನೆಗಳ ನಿರ್ಧಾರ ತದ್ವಿರುದ್ಧವಾಗಿರುವ ಕಾರಣದಿಂದಾಗಿ ಬೆಂಗಳೂರು ಚಲೋದಲ್ಲಿ ಭಾಗವಹಿಸಬೇಕೆ? ಅಥವಾ ಬೇಡವೇ? ಎಂದು ನೌಕರರು ಗೊಂದಲಕ್ಕೀಡಾಗಿದ್ದಾರೆ. ಪ್ರತಿಭಟನೆಯ ಹಿಂದಿನ ದಿನ ರಾತ್ರಿ ಸರ್ಕಾರ ಭಾಗಶಃ ಬೇಡಿಕೆ ಒಪ್ಪಿದ್ದರಿಂದಾಗಿ ಬಹುತೇಕ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿರುವ ಕುರಿತು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೂ, ಈ ಕುರಿತು ಮಾಹಿತಿಯಿಲ್ಲದ ನೌಕರರು ಬೆಂಗಳೂರು ಚಲೋದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ ಸರ್ಕಾರದ ನಿರ್ಧಾರದಿಂದಾಗಿ ಸಂಘಟನೆಗಳು ನಿರೀಕ್ಷಿಸಿರುವಷ್ಟು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಆದರೂ, ನೌಕರರ ಗೈರಿನಿಂದಾಗಿ ಕೆಲವೆಡೆ ಬಸ್ ವ್ಯತ್ಯಯವಾಗುವ ಸಾಧ್ಯತೆಯಿದ್ದು, ಅದನ್ನು ನಿವಾರಿಸಲು ನಿಗಮಗಳು ಹೆಚ್ಚಿನ ಪ್ರಯಾಣಿಕರಿರುವ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆ ಬಸ್ ಸೇವೆ ನೀಡಲು ಸೂಚನೆ ನೀಡಿವೆ.
ಸಾರಿಗೆ ನೌಕರರು ಬೆಂಗಳೂರು ಚಲೋದಲ್ಲಿ ನೌಕರರು ಪಾಲ್ಗೊಳ್ಳದಂತೆ ನಿಗಮಗಳು ಈಗಾಗಲೇ ತನ್ನ ನೌಕರರಿಗೆ ಸೂಚನೆ ನೀಡಿವೆ. ಒಂದು ವೇಳೆ ಅನುಮತಿಯಿಲ್ಲದೆ ಕರ್ತವ್ಯಕ್ಕೆ ಗೈರಾದರೆ ಅವರ ವೇತನ ಕಡಿತಗೊಳಿಸುವುದಾಗಿಯೂ ತಿಳಿಸಿವೆ. ಅದರೊಂದಿಗೆ ನಿಗಮದ ಆದೇಶ ಮೀರಿ ಗೈರಾಗುವವರಿಗೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಿವೆ. ಜತೆಗೆ ರಜೆಯಲ್ಲಿರುವ ನೌಕರರು ಅನಿವಾರ್ಯವಲ್ಲದ ಕಾರಣವಿದ್ದರೆ ಕರ್ತವ್ಯಕ್ಕೆ ಹಾಜರಾಗುವಂತೆಯೂ ಸೂಚಿಸಿವೆ.
- 2021 ಜ.1ರಿಂದ ಡಿ. 31ರವರೆಗಿನ 12 ತಿಂಗಳ 552.99 ಕೋಟಿ ರು. ಹಿಂಬಾಕಿ ಪಾವತಿ
- 2022ರ ಜ.1ರಿಂದ 2023ರ ಫೆ.28ರವರೆಗಿನ 14 ತಿಂಗಳ 718.93 ಕೋಟಿ ರು. ಹಿಂಬಾಕಿ ಪಾವತಿ
- 2025 ಏ. 1ರಿಂದ ಅನ್ವಯವಾಗುವಂತೆ ಮೂಲವೇತನ ಹೆಚ್ಚಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ