ಸಾರಿಗೆ ನೌಕರರ ಬೇಡಿಕೆಗೆ ಮಣಿದ ಸರ್ಕಾರ: 26 ತಿಂಗಳ ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್!

Published : Feb 18, 2026, 09:09 PM IST
KSRTC Employee salary arrears hike

ಸಾರಾಂಶ

ರಾಜ್ಯದ ಸಾರಿಗೆ ನೌಕರರ 38 ತಿಂಗಳ ವೇತನ ಹಿಂಬಾಕಿ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಪ್ರಾಥಮಿಕ ಹಂತದಲ್ಲಿ 26 ತಿಂಗಳ ಅರಿಯರ್ಸ್ ಪಾವತಿಸಲು ಆದೇಶಿಸಿದೆ. ಏಪ್ರಿಲ್ 2025 ರಿಂದ ವೇತನ ಪರಿಷ್ಕರಣೆಗೂ ಒಪ್ಪಿಗೆ ಸೂಚಿಸಿದ್ದು, ನೌಕರರು ನಡೆಸಲುದ್ದೇಶಿಸಿದ್ದ ಬೃಹತ್ ಪ್ರತಿಭಟನೆಗೆ ತಡೆ ಬಿದ್ದಿದೆ.

ಬೆಂಗಳೂರು (ಫೆ.18): ರಾಜ್ಯದ ಲಕ್ಷಾಂತರ ಸಾರಿಗೆ ನೌಕರರ ಪಾಲಿಗೆ ಸರ್ಕಾರ ಮಹತ್ವದ ಸಿಹಿ ಸುದ್ದಿ ನೀಡಿದೆ. ಕಳೆದೆರಡು ವರ್ಷಗಳಿಂದ 38 ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದ ವೇತನ ಹಿಂಬಾಕಿ (ಅರಿಯರ್ಸ್) ಹಾಗೂ ವೇತನ ಪರಿಷ್ಕರಣೆಗಾಗಿ ಆಗ್ರಹಿಸಿ ಸಾರಿಗೆ ಸಿಬ್ಬಂದಿ ನಡೆಸಲುದ್ದೇಶಿಸಿದ್ದ ಪ್ರತಿಭಟನೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ನೌಕರರ ಪ್ರಮುಖ ಹಕ್ಕೊತ್ತಾಯಗಳಲ್ಲಿ ಒಂದಾದ 26 ತಿಂಗಳ ಹಿಂಬಾಕಿ ಪಾವತಿಸಲು ಸರ್ಕಾರ ಆದೇಶ ಹೊರಡಿಸಿದೆ.

ಹಕ್ಕೊತ್ತಾಯಕ್ಕೆ ಸಿಕ್ಕ ಜಯ:

ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ (KSRTC, BMTC, NWKRTC, KKRTC) ನೌಕರರು ಒಟ್ಟು 38 ತಿಂಗಳ ವೇತನ ಹಿಂಬಾಕಿಯನ್ನು ನೀಡುವಂತೆ ಒತ್ತಾಯಿಸುತ್ತಿದ್ದರು. ಈ ಬಗ್ಗೆ ಗಂಭೀರ ಚರ್ಚೆ ನಡೆಸಿದ ರಾಜ್ಯ ಸರ್ಕಾರ, ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ಪ್ರಾಥಮಿಕ ಹಂತದಲ್ಲಿ 26 ತಿಂಗಳ ಅರಿಯರ್ಸ್ ನೀಡಲು ಅಧಿಕೃತ ಒಪ್ಪಿಗೆ ಸೂಚಿಸಿದೆ. ಅಂದರೆ, 1-1-2021 ರಿಂದ 28-03-2023 ರವರೆಗೆ 26 ತಿಂಗಳ ಹಿಂಬಾಕಿ ನೀಡಲು ಒಪ್ಪಿಗೆಯನ್ನು ಸೂಚಿಸಿದೆ. ಇದು ಸಾರಿಗೆ ನೌಕರರ ಸಂಘಟನೆಗಳ ನಿರಂತರ ಶ್ರಮಕ್ಕೆ ಸಂದ ಜಯವೆಂದೇ ವಿಶ್ಲೇಷಿಸಲಾಗುತ್ತಿದೆ.

ವೇತನ ಪರಿಷ್ಕರಣೆಗೆ ದಿನಾಂಕ ನಿಗದಿ:

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ನಂತರ ಮತ್ತೊಂದು ಪ್ರಮುಖ ಘೋಷಣೆ ಮಾಡಿದ್ದಾರೆ. 1ನೇ ಏಪ್ರಿಲ್ 2025 ರಿಂದ ಜಾರಿಗೆ ಬರುವಂತೆ ಸಾರಿಗೆ ನೌಕರರ ವೇತನವನ್ನು ಪರಿಷ್ಕರಣೆ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ. ವೇತನದಲ್ಲಿ ಎಷ್ಟು ಪ್ರಮಾಣದ ಏರಿಕೆ ಮಾಡಬೇಕು ಎಂಬ ಬಗ್ಗೆ ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

ಪ್ರತಿಭಟನೆಯ ಬಿಸಿ ಮತ್ತು ಸರ್ಕಾರದ ಸ್ಪಂದನೆ:

ನಾಳೆಯಿಂದ (ಫೆಬ್ರವರಿ 19) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನೌಕರರು ಬೃಹತ್ 'ಬೆಂಗಳೂರು ಚಲೋ' ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಬನಶಂಕರಿ ಡಿಪೋ ಸೇರಿದಂತೆ ನಗರದಾದ್ಯಂತ ಕರಪತ್ರಗಳನ್ನು ಹಂಚಿ, ಸೇವೆಯಲ್ಲಿ ವ್ಯತ್ಯಯ ಉಂಟುಮಾಡುವ ಎಚ್ಚರಿಕೆ ನೀಡಲಾಗಿತ್ತು. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಧಕ್ಕೆಯಾಗಬಾರದು ಹಾಗೂ ನೌಕರರ ಹಿತರಕ್ಷಣೆ ಮಾಡಬೇಕು ಎಂಬ ದೃಷ್ಟಿಯಿಂದ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಈ ಐತಿಹಾಸಿಕ ತೀರ್ಮಾನ ಪ್ರಕಟಿಸಿದೆ.

ಸಚಿವ ರಾಮಲಿಂಗ ರೆಡ್ಡಿ ಸಂಧಾನ ಯಶಸ್ವಿ:

ಸಾರಿಗೆ ಸಚಿವರು ಇಂದು ತಡರಾತ್ರಿಯವರೆಗೂ ಸಂಘಟನೆಗಳೊಂದಿಗೆ ಸಭೆ ನಡೆಸಿ, ನೌಕರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಿರ್ಧಾರದಿಂದಾಗಿ ನಾಳೆ ನಡೆಯಬೇಕಿದ್ದ ಸೇವೆಯ ವ್ಯತ್ಯಯದ ಆತಂಕ ದೂರವಾದಂತಾಗಿದೆ. ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ನೌಕರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಾರೆಯಾಗಿ, ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೌಕರರ ಬೇಡಿಕೆಗಳನ್ನು ಈಡೇರಿಸುವತ್ತ ಸರ್ಕಾರ ದಾಪುಗಾಲು ಹಾಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೆಡಿಎಸ್ ಎಂಎಲ್‌ಸಿ ಸೂರಜ್ ರೇವಣ್ಣಗೆ ಮತ್ತೆ ಹಿನ್ನಡೆ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ಕೈಬಿಡಲು ಕೋರ್ಟ್‌ ನಕಾರ
ಭಾರತೀಯ ನೌಕಾಪಡೆ ರಹಸ್ಯ ಸೋರಿಕೆ, ಪಾಕಿಸ್ತಾನಕ್ಕೆ ಮಾಹಿತಿ ರವಾನಿಸುತ್ತಿದ್ದ ದೇಶದ್ರೋಹಿ ಉಡುಪಿಯಲ್ಲಿ ಅರೆಸ್ಟ್!