ಹಬ್ಬಕ್ಕೆ ವೇತನ ಇಲ್ಲದೆ ಸಾರಿಗೆ ನೌಕರರ ಪರದಾಟ

By Kannadaprabha NewsFirst Published Aug 19, 2021, 7:14 AM IST
Highlights

*   ಆ.18 ಕಳೆದರೂ ಜುಲೈ ಸಂಬಳ ಇಲ್ಲ
*  ಹಬ್ಬಕ್ಕೆ ಬಿಡಿಗಾಸೂ ಇಲ್ಲ, ಜೀವನ ನಿರ್ವಹಣೆ ಕಷ್ಟ: ಚಾಲಕರು
*  ವೇತನ ಪಾವತಿಗೆ ಮಾಸಿಕ ಒಟ್ಟು 326 ಕೋಟಿ ರು. ಹಣದ ಅಗತ್ಯವಿದೆ
 

ಬೆಂಗಳೂರು(ಆ.19):  ಕೊರೋನಾದಿಂದ ಆದಾಯ ಕುಸಿತವಾಗಿ ತೀವ್ರ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆಗಸ್ಟ್‌ ಅರ್ಧ ತಿಂಗಳು ಮುಗಿದರೂ ನೌಕರರಿಗೆ ಜುಲೈ ತಿಂಗಳ ವೇತನ ಬಿಡುಗಡೆ ಮಾಡಿಲ್ಲ. ವರ ಮಹಾಲಕ್ಷ್ಮಿ ಹಬ್ಬ ಆಚರಣೆಗೆ ಜನ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ಸಾರಿಗೆ ನಿಗಮಗಳ ನೌಕರರು ವೇತನ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಅನ್‌ಲಾಕ್‌ ಬಳಿಕ ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗದ ಪರಿಣಾಮ ಸಾರಿಗೆ ಆದಾಯ ಕುಸಿತವಾಗಿದೆ. ಸದ್ಯ ಸಂಗ್ರಹವಾಗುತ್ತಿರುವ ಆದಾಯ ಡೀಸೆಲ್‌ ವೆಚ್ಚ ಹಾಗೂ ನಿರ್ವಹಣಾ ವೆಚ್ಚ ಭರಿಸಲು ಕಷ್ಟವಾಗುತ್ತಿದೆ. ಹೀಗಾಗಿ ಸಾರಿಗೆ ನಿಗಮಗಳು ನೌಕರರ ಜುಲೈ ತಿಂಗಳ ವೇತನ ಪಾವತಿಗಾಗಿ ಸರ್ಕಾರಕ್ಕೆ ಮನವಿ ಮಾಡಿವೆ. ಆದರೆ, ಕಳೆದ ಒಂದೂವರೆ ವರ್ಷದಿಂದ ಪ್ರತಿ ತಿಂಗಳು ನೌಕರರ ವೇತನಕ್ಕಾಗಿ ಅನುದಾನ ನೀಡುತ್ತಾ ಬಂದಿರುವ ರಾಜ್ಯ ಸರ್ಕಾರ, ಈ ಬಾರಿ ಅನುದಾನ ನೀಡುವ ಸಂಬಂಧ ಪರಿಶೀಲಿಸುತ್ತಿದೆ. ಸಾರಿಗೆ ನಿಗಮಗಳಿಗೆ ನೌಕರರ ವೇತನ ಪಾವತಿಗೆ ಹಣ ಹೊಂದಿಸಲು ಅನ್ಯ ಮಾರ್ಗಗಳಿಲ್ಲದೆ ಸರ್ಕಾರದ ನೆರವು ಎದುರು ನೋಡುತ್ತಿವೆ. ಆದರೆ, ನೌಕರರು ಆಗಸ್ಟ್‌ ನಲ್ಲಿ 18 ದಿನ ಕಳೆದರೂ ಜುಲೈ ತಿಂಗಳ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಸಾರಿಗೆ ಸಚಿವ ಶ್ರೀರಾಮುಲು

ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಒಟ್ಟು ಸುಮಾರು 1.25 ಲಕ್ಷ ನೌಕರರು ಇದ್ದಾರೆ. ಈ ನಾಲ್ಕು ನಿಗಮಗಳ ನೌಕರರ ವೇತನ ಪಾವತಿಗೆ ಮಾಸಿಕ ಒಟ್ಟು ಸುಮಾರು 326 ಕೋಟಿ ರು. ಹಣದ ಅಗತ್ಯವಿದೆ.

ಹಗಲು-ರಾತ್ರಿ ಎನ್ನದೇ ಬಸ್‌ ಕಾರ್ಯಾಚರಣೆ ಮಾಡುತ್ತೇವೆ. ಆದರೆ, ನಿಗದಿತ ಅವಧಿಯಲ್ಲಿ ವೇತನ ಸಿಗುತ್ತಿಲ್ಲ. ಇದೀಗ ವರಮಹಾಲಕ್ಷ್ಮಿ ಹಬ್ಬ ಬರುತ್ತಿದ್ದು, ಹಬ್ಬ ಮಾಡಲು ಬಿಡಿಗಾಸು ಇಲ್ಲದಾಗಿದೆ. ಈ ಹಿಂದೆ ಪ್ರತಿ ತಿಂಗಳ 10ರೊಳಗೆ ವೇತನ ಖಾತೆಗೆ ಜಮಾ ಆಗುತ್ತಿತ್ತು. ಇತ್ತೀಚೆಗೆ ಎರಡು ಕಂತುಗಳಲ್ಲಿ ವೇತನ ಹಾಕುತ್ತಿದ್ದರು. ಈ ಬಾರಿ ಆಗಸ್ಟ್‌ ತಿಂಗಳು ಮುಗಿಯುತ್ತಾ ಬಂದರೂ ಒಂದು ರು. ವೇತನ ನೀಡಿಲ್ಲ. ಹೀಗಾಗಿ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂದು ಬಿಎಂಟಿಸಿಯ ಚಾಲಕರೊಬ್ಬರು ಅಳಲು ತೋಡಿಕೊಂಡರು.
 

click me!