ನಾಳೆ KSRTC ನೌಕರರ ಬೃಹತ್‌ ಸಮಾವೇಶ: ಬಸ್‌ ಸೇವೆ ಇರುತ್ತಾ?

By Kannadaprabha NewsFirst Published Mar 1, 2021, 7:54 AM IST
Highlights

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶ| ಸರ್ಕಾರ ಶೀಘ್ರದಲ್ಲೇ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿ ತೀರ್ಮಾನ| ಬಸ್‌ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ| 

ಬೆಂಗಳೂರು(ಮಾ.01): ರಾಜ್ಯ ಸರ್ಕಾರ ಲಿಖಿತ ಭರವಸೆ ನೀಡಿರುವಂತೆ ಆರನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ವೇತನ ಪರಿಷ್ಕರಣೆ ಸೇರಿದಂತೆ 9 ಬೇಡಿಕೆಗಳ ಶೀಘ್ರ ಈಡೇರಿಕೆಗೆ ಆಗ್ರಹಿಸಿ ಮಾರ್ಚ್‌ 2ರಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಗ್ಗೆ 11ಕ್ಕೆ ಈ ಸಮಾವೇಶ ಜರುಗಲಿದ್ದು, ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಈ ಸಮಾವೇಶದ ನೇತೃತ್ವ ವಹಿಸಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಾಲ್ಕು ದಿನ ಬಸ್‌ ಕಾರ್ಯಾಚರಣೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗಿತ್ತು. ಈ ವೇಳೆ ಸರ್ಕಾರ ನೌಕರರ ಬೇಡಿಕೆ ಈಡೇರಿಸುವ ಲಿಖಿತ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೇಡಿಕೆಗಳ ಈಡೇರಿಕೆಗೆ ಸಂಬಂಧ ಈವರೆಗೆ ಸಾರಿಗೆ ನಿಗಮಗಳು ಹಾಗೂ ರಾಜ್ಯ ಸರ್ಕಾರ ಮಟ್ಟದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಸಮಾವೇಶದಲ್ಲಿ ಸಮಾಲೋಚಿಸಲಾಗುತ್ತದೆ. ಅಂತೆಯೆ ಬೇಡಿಕೆ ಈಡೇರಿಕೆಗೆ ನೀಡಲಾಗಿದ್ದ ಮೂರು ತಿಂಗಳ ಗಡುವು ಮುಗಿಯುತ್ತಾ ಬರುತ್ತಿರುವುದರಿಂದ ಶೀಘ್ರದಲ್ಲೇ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತದೆ.

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಸಾರಿಗೆ ಸಚಿವರಿಂದ ಮತ್ತೊಂದು ಶಾಕ್

ಸಮಾವೇಶದಲ್ಲಿ ನಾಲ್ಕು ಸಾರಿಗೆ ನಿಗಮಗಳ ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ನೌಕರರು ಪಾಲ್ಗೊಳ್ಳುವ ಸಾಧ್ಯತೆಯಿದೆ. ಆದರೆ, ಬಸ್‌ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ರಜೆ, ವಾರದ ರಜೆ ಹಾಗೂ ಪಾಳಿ ಕರ್ತವ್ಯ ಮುಗಿಸಿ ಬರುವ ನೌಕರರು ಮಾತ್ರ ಸಮಾವೇಶಕ್ಕೆ ಬರುವಂತೆ ಸೂಚಿಸಲಾಗಿದೆ. ಹೀಗಾಗಿ ಬಸ್‌ ಸೇವೆ ಎಂದಿನಂತೆ ಇರಲಿದೆ. ಸರ್ಕಾರ ಶೀಘ್ರದಲ್ಲೇ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಕಾರ್ಯದರ್ಶಿ ಆನಂದ್‌ ಹೇಳಿದರು.
 

click me!