ಸಾರಿಗೆ ನೌಕರರಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ..!

By Kannadaprabha NewsFirst Published Oct 28, 2021, 6:32 AM IST
Highlights

*  ಸಾರಿಗೆ ನೌಕರರ ವಜಾ ರದ್ದತಿಗಾಗಿ ಅನಿರ್ದಿಷ್ಟಾವಧಿ ಮುಷ್ಕರ
*  ಬೆಂಗಳೂರಲ್ಲಿ ನೌಕರರ ಒಕ್ಕೂಟದಿಂದ ಮುಷ್ಕರ ಆರಂಭ
*  ಭರವಸೆ ನೀಡಿದರೂ ವಜಾ ರದ್ದುಗೊಳಿಸದ ಸರ್ಕಾರ: ಆಕ್ರೋಶ
 

ಬೆಂಗಳೂರು(ಅ. 28): ಕಳೆದ ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದ ಸಾರಿಗೆ ನೌಕರರನ್ನು ವಜಾ ಮಾಡಿರುವ ಆದೇಶ ವಾಪಸ್‌ ಪಡೆಯುವಂತೆ ಒತ್ತಾಯಿಸಿ ಸಿಐಟಿಯು(CITU) ಸಂಯೋಜಿತ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ನೇತೃತ್ವದಲ್ಲಿ ಸಿಬ್ಬಂದಿಗಳು ಬುಧವಾರದಿಂದ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿವೆ.

ಬಿಎಂಟಿಸಿ(BMTC) ಕೇಂದ್ರ ಕಚೇರಿ ಮುಂದೆ ಬುಧವಾರ ಬೆಳಿಗ್ಗೆ ಪ್ರತಿಭಟನೆ ನಡೆಸಲು ಸಂಘಟನೆಗಳು ನಿರ್ಧರಿದ್ದರೂ, ಅನುಮತಿ ಸಿಗದ ಕಾರಣ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸಲು ಮುಂದಾಗಿವೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಣ್ಣ, ಕಳೆದ ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದ್ದರಿಂದ 2200ಕ್ಕೂ ಅಧಿಕ ನೌಕರರನ್ನು ವರ್ಗಾವಣೆ, ಅಮಾನತು, ವಜಾ ಮಾಡಲಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಸೆಪ್ಟೆಂಬರ್‌ 21 ರಂದು ಸಾರಿಗೆ ಸಚಿವರಾದ ಬಿ. ಶ್ರೀರಾಮುಲು(B Sriramulu) ಅವರು ನೌಕರರು(Employees) ಮತ್ತು ಅಧಿಕಾರಿಗಳ ಸಭೆ ನಡೆಸಿ ವಜಾಗೊಳಿಸಿರುವ ನೌಕರರನ್ನು ವಾಪಸ್‌ ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಯಾಣಿಕರಿಗೆ ಗುಡ್ ನ್ಯೂಸ್ : ದೀಪಾವಳಿ ಹೆಚ್ಚುವರಿ ಬಸ್‌ ಸಂಚಾರ

ತಿಂಗಳಾದರೂ ಈಡೇರದ ಭರವಸೆ:

ವಿಧಾನ ಮಂಡಲ ಅಧಿವೇಶನದ(Session) ಸಂದರ್ಭದಲ್ಲೂ ನೌಕರರನ್ನು ಪುನಃ ಕೆಲಸಕ್ಕೆ ವಾಪಸ್‌ ತೆಗೆದುಕೊಳ್ಳುವುದಾಗಿ ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಭರವಸೆ ನೀಡಿದ್ದರು. ಆದರೆ ತಿಂಗಳಾದರೂ ಭರವಸೆ ಈಡೇರಿಸಿಲ್ಲ. ಇದೀಗ ಹಲವು ನೆಪವೊಡ್ಡಿ ಮತ್ತೆ 57 ನೌಕರರನ್ನು ವಜಾ ಮಾಡಲಾಗಿದೆ. ಸಾರಿಗೆ ನೌಕರರ ಮೇಲೆ ಸರ್ಕಾರ ಸೇಡಿನ ಕ್ರಮ ಅನುಸರಿಸುತ್ತಿದೆ ಎಂದು ಟೀಕಿಸಿದರು.

ನೀರು ಕುಡಿದಷ್ಟೇ ಸಲೀಸಾಗಿ ಸಾರಿಗೆ(KSRTC) ನೌಕರರನ್ನು ಆಡಳಿತ ಮಂಡಳಿಗಳು ವಜಾ ಮಾಡುತ್ತಿವೆ. ಇಲಾಖೆ ಸಚಿವರ ಇಚ್ಛಾಶಕ್ತಿಯ ಕೊರತೆಯಿಂದ ನೌಕರರು ಬೀದಿಪಾಲಾಗಿದ್ದಾರೆ. ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ(Government of Karnataka0 ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ತಕ್ಷಣ ಕೈಬಿಟ್ಟು ಕಾರ್ಮಿಕರ ವಜಾ (Dismissed) ಆದೇಶ ರದ್ದು ಮಾಡಬೇಕು. ಅಲ್ಲಿಯವರೆಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಾರಿಗೆ ನೌಕರರ ವಜಾ(Order) ಆದೇಶ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ಸಾರಿಗೆ ಸಿಬ್ಬಂದಿಗಳು ಬುಧವಾರದಿಂದ ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಸಿಐಟಿಯು ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
 

click me!