
ಬೆಂಗಳೂರು/ರಾಯಚೂರು (ಮೇ 26): ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದ ಎಲ್ಲ ಸಾರಿಗೆ ಇಲಾಖೆಯ ಎಲ್ಲ ನಿಗಮಗಳ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಮಾಡಿಕೊಂಡ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಚಾಲಕ ಕಂ ನಿರ್ವಾಹಕ ಅವರ ಮಗ ಕೇಂದ್ರ ಸರ್ಕಾರದ ಐಎಫ್‌ಎಸ್ ಪರೀಕ್ಷೆಯಲ್ಲಿ 41ನೇ ರ‍್ಯಾಂಕ್ ಪಡೆದಿದ್ದಾರೆ. ಅವರನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗೌರವಿಸಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದ ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಸಪ್ಪ ಸಂಖ್ಯೆ 189 ಮತ್ತು ತಾಯಿ ನಾಗರತ್ನ ಅವರ ಮಗನಾದ ಆನಂದಕುಮಾರ ಭಾರತ ಸರ್ಕಾರದ ಕೇಂದ್ರ ಲೋಕಸೇವಾ ಆಯೋಗದ ಭಾರತೀಯ ಅರಣ್ಯ ಸೇವೆ (ಐ.ಎಫ್.ಎಸ್.,) ಪರೀಕ್ಷೆಯಲ್ಲಿ 41 ನೇ ರ‍್ಯಾಂಕ್ ಪಡೆದು ಭಾರತದ ಅರಣ್ಯ ಸೇವೆಗೆ ಆಯ್ಕೆಯಾಗಿರುತ್ತಾರೆ. ಅವರ ಈ ಸಾಧನೆಯು ಕುಟುಂಬಕ್ಕೂ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೂ ಕೀರ್ತಿ ತಂದಿರುತ್ತದೆ.
ಸಾರಿಗೆ ಹಾಗೂ ಮುಜರಾಯಿ ಸಚಿವ ಹಾಗೂ ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರೂ ಆಗಿರುವ ರಾಮಲಿಂಗಾ ರೆಡ್ಡಿ ಅವರು, ಐಎಫ್‌ಎಸ್ ಹುದ್ದೆಗೆ ಆಯ್ಕೆಯಾದ ಬಸ್ ಕಂಡಕ್ಟರ್ ಆನಂದಕುಮಾರ ಅವರಿಗೆ ರೂ. 1 ಲಕ್ಷ ಪ್ರೋತ್ಸಾಹ ಧನದೊಂದಿಗೆ ಅಭಿನಂದನಾ ಪತ್ರ ನೀಡಿದ್ದಾರೆ. ನಮ್ಮ ಸಾರಿಗೆ ಸಿಬ್ಬಂದಿ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್, ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರ ಮಕ್ಕಳಿಗಾಗಿ ಸಾರಿಗೆ ವಿದ್ಯಾ ಚೇತನ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು 10 ಪಟ್ಟು ಹೆಚ್ಚಳ ಮಾಡಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ಸು ಸಾಧಿಸುವಂತಾಗಲಿ. ಜೊತೆಗೆ, ಆನಂದ್ ಕುಮಾರ್ ಭಾರತೀಯ ಆಡಳಿತ ಸೇವೆ(IAS) ಅಥವಾ ಭಾರತೀಯ ವಿದೇಶಾಂಗ ಸೇವೆ ( IFS)ಗೆ ತಯಾರಿ ನಡೆಸಲಿ. ದೇಶಕ್ಕಾಗಿ ಒಳ್ಳೆಯ ಕೆಲಸವನ್ನು ಮಾಡಿ ರಾಜ್ಯಕ್ಕೆ ಕೀರ್ತಿ ಇರಲಿ ಎಂದು ಆಶಿಸಿದರು.
ಇನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ. ರಾಚಪ್ಪ ಕರ್ನಾಟಕ ಆಡಳಿತ ಸೇವೆ (ಹಿರಿಯ ಅಯ್ಕೆ ಶ್ರೇಣಿ), ರಾಯಚೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ ಎಂ.ಎಸ್. ಹಾಗೂ ಆನಂದ್ ಕುಮಾರ್ ಅವರ ಪರಿವಾರದವರು ಹಾಗೂ ಇನ್ನಿತರೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಆನಂದ ಕುಮಾರ್ ಅವರು, ಬಿ.ಎಸ್ಸಿ (ಅಗ್ರಿ) ಪದವಿಯನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದ್ದಾರೆ. ಯು.ಪಿ.ಎಸ್.ಸಿ - ಐ.ಎಫ್.ಎಸ್. ನಲ್ಲಿ 41 ನೇ ರ‍್ಯಾಂಕ್ ನೊಂದಿಗೆ ತಮ್ಮ03ನೇ ಪ್ರಯತ್ನದಲ್ಲಿ ಯಶಸ್ಸು ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ