
ಶಿವಮೊಗ್ಗ (ಡಿ.8): ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನದ ಘನತೆ ಮತ್ತು ಗಾಂಭೀರ್ಯ ಕಳೆದುಕೊಳ್ಳುತ್ತಿದ್ದಾರೆ, ಮುಸ್ಲಿಂ ಓಲೈಕೆ ಮಾಡಲು ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದರು.
ಭಗವದ್ಗೀತೆ ಅಧ್ಯಯನ ಮಾಡುವವರು ಮನುವಾದಿಗಳು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಇಂದು ಶಿವಮೊಗ್ಗದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಮುಖ್ಯಮಂತ್ರಿಯಾಗಿ ಇಂಥ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಬೇಸರ ತಂದಿದೆ, ಕೂಡಲೇ ಈ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.
ಭಗವದ್ಗೀತೆ ಜಗತ್ತಿನ ಕೋಟಿ ಕೋಟಿ ಜನರ ಜ್ಞಾನ ಹೆಚ್ಚಿಸುವ ಗ್ರಂಥ. ಮಹಾತ್ಮ ಗಾಂಧಿಯವರ ಜೀವನದಲ್ಲೂ ಇದು ಮಹತ್ತರ ಪಾತ್ರ ವಹಿಸಿತ್ತು. ಇಂತಹ ಗ್ರಂಥದ ಕುರಿತು ಮಾತನಾಡಿ, ಅದನ್ನು ಓದುವವರನ್ನು 'ಮನುವಾದಿಗಳು' ಎನ್ನುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಸಿಎಂ ಸಿದ್ದರಾಮಯ್ಯ ಮೊದಲು ಒಮ್ಮೆ ಭಗವದ್ಗೀತೆ ಓದಲಿ. ಅವರಿಗೆ ತಾಕತ್ತು ಇದ್ದರೆ, ಕುರಾನ್ ಅಥವಾ ಬೈಬಲ್ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡಲಿ. ಒಂದು ವೇಳೆ ಮಾತನಾಡಿದರೆ, ಅವರು ಒಂದು ನಿಮಿಷ ಕೂಡ ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ. ಮುಸ್ಲಿಂ ಓಲೈಕೆಗಾಗಿ ಅವರು ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ. ಈ ವರ್ತನೆ ಮುಖ್ಯಮಂತ್ರಿ ಸ್ಥಾನಕ್ಕೆ ಕೊನೆಗಾಲ ಬಂದಿದೆ ಎಂಬುದನ್ನು ಸೂಚಿಸುತ್ತದೆ ಎಂದು ಈಶ್ವರಪ್ಪ ಟೀಕಿಸಿದರು.
ಬಾಬರ್‌ಗೂ ಮತ್ತು ದೇಶಕ್ಕೂ ಏನು ಸಂಬಂಧ? ಹಿಂದೆ ಹಿಂದೂ ಸಮಾಜವನ್ನು ದುರುಪಯೋಗ ಮಾಡಿಕೊಂಡು ಅಯೋಧ್ಯೆಯಲ್ಲಿ ಬಾಬರ್ ಮಸೀದಿ ಕಟ್ಟಲಾಗಿತ್ತು. ಮತ್ತೆ ಬಾಬರ್ ಮಸೀದಿ ಕಟ್ಟಿದರೆ ಹಿಂದೂ ಸಮಾಜ ಯಾವುದೇ ಕಾರಣಕ್ಕೂ ಬಿಡೋಲ್ಲ. ಅದನ್ನು ಮತ್ತೆ ಧ್ವಂಸ ಮಾಡುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ, ಮಥುರಾ ಮತ್ತು ಕಾಶಿಯನ್ನು ಹಿಂದೂಗಳಿಗೆ ಬಿಟ್ಟುಕೊಟ್ಟು, ಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಒತ್ತಾಯಿಸಿದರು.
ಇನ್ನು ಗೋಹತ್ಯಾ ಪ್ರತಿಬಂಧಕ ಕಾಯ್ದೆ ತಿದ್ದುಪಡಿ ಜಾರಿಗೆ ತರಲು ಕಾಂಗ್ರೆಸ್ ಮುಂದಾಗಿರುವುದು ಆ ಪಕ್ಷದ 'ಕೆಟ್ಟ ಪರಂಪರೆ'ಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನಾಯಕರ ಮನೆಯ ಹೆಣ್ಣು ಮಕ್ಕಳೇ ಇದನ್ನು ವಿರೋಧಿಸುತ್ತಾರೆ ಎಂದು ಹೇಳಿದರು.
ನಿರ್ಮಲಾ ಸೀತಾರಾಮನ್ ಬಗ್ಗೆ ಸಿಎಂ ಮಾತಿಗೆ ಈಶ್ವರಪ್ಪ ಕಿಡಿ:
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ಸಿದ್ದರಾಮಯ್ಯ ಅವರು 'ಅವಳು, ಇವಳು' ಎಂದು ಕೀಳಾಗಿ ಮಾತನಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಈಶ್ವರಪ್ಪ, 'ನಾನು ಸಿದ್ದರಾಮಯ್ಯ ಅವರ ಪತ್ನಿಗೆ ಕೇಸ್ ಬಿದ್ದಾಗಲೂ ನೋವು ಅನುಭವಿಸಿದ್ದೆ. ಭಾರತದಲ್ಲಿ ಹೆಣ್ಣನ್ನು ತಾಯಿಯ ಸ್ಥಾನದಲ್ಲಿ ಕಾಣಲಾಗುತ್ತದೆ. ಸಿಎಂ ಸ್ಥಾನದಲ್ಲಿದ್ದುಕೊಂಡು ಕೆಟ್ಟ ಪದಗಳನ್ನು ಬಳಸುವುದು ಸರಿಯಲ್ಲ. ನಿರ್ಮಲಾ ಸೀತಾರಾಮನ್ ಅವರ ಕ್ಷಮೆಯನ್ನು ಕೂಡಲೇ ಕೇಳಬೇಕು. ಇಲ್ಲದಿದ್ದರೆ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಇನ್ನು ಹೆಚ್‌ಡಿ ಕುಮಾರಸ್ವಾಮಿ ಅವರು ಹಿಂದೆ ಭಗವದ್ಗೀತೆ ಬಗ್ಗೆ ಮಾತನಾಡಿದ್ದರೆ ಅದು ಹುಚ್ಚಾಗಿತ್ತು, ಈಗ ಆ ಹುಚ್ಚು ಬಿಟ್ಟಿದೆ ಎಂದು ಟೀಕಿಸಿದರು.
ದ್ವೇಷ ಭಾಷಣದ ಬಿಲ್ ಜಾರಿಯಾದ್ರೆ ಮೊದಲು ಸಿದ್ದರಾಮಯ್ಯ, ಡಿಕೆಶಿ ಜೈಲಿಗೆ:
ಕಾಂಗ್ರೆಸ್ ಜಾರಿಗೆ ತರಲು ಹೊರಟಿರುವ ದ್ವೇಷ ಭಾಷಣ (Hate Speech) ಮಸೂದೆ ಕುರಿತು ಮಾತನಾಡಿದ ಈಶ್ವರಪ್ಪ, ದ್ವೇಷ ಭಾಷಣದ ಬಿಲ್ ಜಾರಿಯಾದರೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೇ ಜೈಲಿಗೆ ಹೋಗುತ್ತಾರೆ' ಎಂದು ಭವಿಷ್ಯ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ