ಮಾ. 26ರಿಂದ ಕೆ.ಆರ್‌.ಪುರ-ವೈಟ್‌ಫೀಲ್ಡ್ ಮೆಟ್ರೋ ಆರಂಭ: ನಮ್ಮ ಮೆಟ್ರೋಗೆ ಚಾಲನೆ ನೀಡುತ್ತಿರುವ ಮೊದಲ ಪ್ರಧಾನಿ ಮೋದಿ!

By Kannadaprabha NewsFirst Published Mar 21, 2023, 6:24 AM IST
Highlights

ಐಟಿ ಕಾರಿಡಾರ್‌ಗೆ ಪ್ರವೇಶಿಸುತ್ತಿರುವ ಮೆಟ್ರೋದ ಮೊದಲ ಮಾರ್ಗ ಎನ್ನಿಸಿಕೊಂಡಿರುವ ಕೆ.ಆರ್‌.ಪುರ-ವೈಟ್‌ಫೀಲ್ಡ್‌ ಮಧ್ಯೆ ಮಾ.26ರಿಂದಲೇ ಸಾರ್ವಜನಿಕರ ಸಂಚಾರಕ್ಕೆ ರೈಲು ಸೇವೆ ಲಭ್ಯವಾಗುವುದು ಬಹುತೇಕ ನಿಶ್ಚಿತವಾಗಿದೆ.

ಬೆಂಗಳೂರು (ಮಾ.21) : ಐಟಿ ಕಾರಿಡಾರ್‌ಗೆ ಪ್ರವೇಶಿಸುತ್ತಿರುವ ಮೆಟ್ರೋದ ಮೊದಲ ಮಾರ್ಗ ಎನ್ನಿಸಿಕೊಂಡಿರುವ ಕೆ.ಆರ್‌.ಪುರ-ವೈಟ್‌ಫೀಲ್ಡ್‌ ಮಧ್ಯೆ ಮಾ.26ರಿಂದಲೇ ಸಾರ್ವಜನಿಕರ ಸಂಚಾರಕ್ಕೆ ರೈಲು ಸೇವೆ ಲಭ್ಯವಾಗುವುದು ಬಹುತೇಕ ನಿಶ್ಚಿತವಾಗಿದೆ.

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಮಾ.25ರಂದು ಈ ಮಾರ್ಗದ ರೈಲ್ವೆ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು, ಮರುದಿನದಿಂದ ವಾಣಿಜ್ಯ ಸಂಚಾರ ಆರಂಭಿಸುವುದಾಗಿ ಬೆಂಗಳೂರು ಮೆಟ್ರೋ ರೈಲ್ವೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೂ 1-2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೆಟ್ರೋ ಸೌಲಭ್ಯ!

ನೇರಳೆ ಮಾರ್ಗದ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ಮಾರ್ಗ(Baiyappanahalli-Whitefield route)ದ (15 ಕಿ.ಮೀ.) ಭಾಗವಾದ ಕೆ.ಆರ್‌.ಪುರ-ವೈಟ್‌ಫೀಲ್ಡ್‌(KR Pura-Whitefield)ನ 13 ಕಿ.ಮೀ. ಒಟ್ಟಾರೆ .4500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದೀಗ ಮೊದಲ ಹಂತದಲ್ಲಿ ಈ ಭಾಗ ಜನಸಂಚಾರಕ್ಕೆ ಲಭ್ಯವಾಗುತ್ತಿದೆ. ಬೆನ್ನಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಮಾರ್ಗ ನಿರ್ಮಾಣ ಮತ್ತಿತರ ಕಾಮಗಾರಿ ವರ್ಷದ ಮಧ್ಯದಲ್ಲಿ ಮುಕ್ತಾಯವಾಗುವ ಸಾಧ್ಯತೆಯಿದೆ. ಬಳಿಕಷ್ಟೇ ಉಳಿದ 2 ಕಿ.ಮೀ. ಮಾರ್ಗದಲ್ಲಿ ರೈಲ್ವೆ ಸಂಚರಿಸಲಿದೆ. ಒಟ್ಟಾರೆ 2ನೇ ಹಂತದ ಯೋಜನೆ ಪೂರ್ಣಗೊಂಡ ಬಳಿಕ ಪ್ರತಿನಿತ್ಯ 2.5 ರಿಂದ 3 ಲಕ್ಷ ಜನರು ಸಂಚರಿಸುವ ಸಾಧ್ಯತೆಯಿದೆ.

ನಮ್ಮ ಮೆಟ್ರೋ ರೈಲಿಗೆ ಚಾಲನೆ ನೀಡುತ್ತಿರುವ ಮೊದಲ ಪ್ರಧಾನಿ

ನರೇಂದ್ರ ಮೋದಿ ಅವರೇ ‘ನಮ್ಮ ಮೆಟ್ರೋ(Namma Metro)’ದ ಮಾರ್ಗವೊಂದಕ್ಕೆ ಚಾಲನೆ ನೀಡುತ್ತಿರುವ ಮೊದಲ ಪ್ರಧಾನಿ ಎನ್ನಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2017ರಲ್ಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಹಸಿರು ಮಾರ್ಗವೊಂದನ್ನು ಉದ್ಘಾಟಿಸಿದ್ದರು. ಮಾಜಿ ಪ್ರಧಾನಿ ಮನ್‌ಮೋಹನ್‌ಸಿಂಗ್‌ ಅವರು ಹಂತ-1ರ ಎಂ.ಜಿ.ರೋಡ್‌-ಬೈಯಪ್ಪನಹಳ್ಳಿವರೆಗಿನ ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.

Namma Metro: ಕೆ.ಆರ್‌ಪುರ-ವೈಟ್‌ಫೀಲ್ಡ್‌ ಮೆಟ್ರೋಗೆ ಮೋದಿ ಚಾಲನೆ?

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್‌ ಚವ್ಹಾಣ್‌, ಹಿಂದೆಲ್ಲ ಮೆಟ್ರೋ ಮಾರ್ಗ ಉದ್ಘಾಟನೆಯಾದ ಮರುದಿನದಿಂದಲೇ ಜನಸಂಚಾರ ಕೂಡ ಪ್ರಾರಂಭವಾಗಿದೆ. ಕೆ.ಆರ್‌.ಪುರ ಹಾಗೂ ವೈಟ್‌ಫೀಲ್ಡ್‌ ನಡುವಿನ ಮಾರ್ಗದ ವಾಣಿಜ್ಯ ಸಂಚಾರದ ಕುರಿತು ಸಹ ಉನ್ನತಮಟ್ಟದ ಸಮಿತಿ ಸಭೆ ನಡೆದಿದೆ ಎಂದು ತಿಳಿಸಿದರು.

click me!