
ಬೆಂಗಳೂರು (ಅ.06): ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಕೆಪಿಎಸ್‌ಸಿ ಸದಸ್ಯೆ ಡಾ. ಶಾಂತಾ ಹೊಸಮನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ.
ಡಾ. ಶಾಂತಾ ಹೊಸಮನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ (SPP) ಬಿ.ಎನ್. ಜಗದೀಶ್, "ಪ್ರಕರಣದಲ್ಲಿ ಶಾಂತಾ ಹೊಸಮನಿ ಅವರು 2ನೇ ಆರೋಪಿಯಾಗಿದ್ದು (A2), ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ನಿಯಮಬಾಹಿರವಾಗಿ ಅಂಕಗಳನ್ನು ನೀಡಿರುವ ಗಂಭೀರ ಆರೋಪ ಇವರ ಮೇಲಿದೆ. ನಿರ್ದಿಷ್ಟ ದಿನದಂದು ಸಂದರ್ಶನಕ್ಕೆ ಹಾಜರಾಗಿದ್ದ ಅಭ್ಯರ್ಥಿಗಳಿಗೆ ನೀಡಿರುವ ಅಂಕಗಳನ್ನು ನ್ಯಾಯಪೀಠ ಪರಿಶೀಲನೆ ನಡೆಸಬೇಕು" ಎಂದು ಕೋರಿದರು.
ಕೆಪಿಎಸ್‌ಸಿ ಪರವಾಗಿ ಹಾಜರಿದ್ದ ವಕೀಲೆ ಎಂ.ಆರ್. ಸಿಂಚನಾ ಅವರು ಸಹಾಯಕ ಕಾರ್ಯದರ್ಶಿ ನೀಡಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ವೇಳೆ ಪೀಠವು, "ಈ ವರದಿಯನ್ನು ತನಿಖಾಧಿಕಾರಿಗೆ ನೀಡಿಲ್ಲವೇ?" ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸಿಂಚನಾ, 'ಇಲ್ಲ, ಅಂತಿಮ ಆಯ್ಕೆ ಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಅಂದು ನಿಯಮದ ಪ್ರಕಾರ ಒಟ್ಟು 9 ಅಭ್ಯರ್ಥಿಗಳಿಗೆ (ಬೆಳಗ್ಗೆ ಐದು, ಸಂಜೆ ನಾಲ್ಕು ಮಂದಿ) ಕೆಪಿಎಸ್‌ಸಿಯ ಮೂವರು ಸದಸ್ಯರು ಸಂದರ್ಶನ ನಡೆಸಿದ್ದರು' ಎಂದು ಮಾಹಿತಿ ನೀಡಿದರು.
ಶಾಂತಾ ಹೊಸಮನಿ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ, '2025ರ ಜುಲೈನಲ್ಲಿ ನೇಮಕಾತಿಗೆ ತಡೆ ನೀಡಲಾಗಿತ್ತು. ಬಳಿಕ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅನುಮತಿಸಲಾಗಿದ್ದರೂ, ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಅಂತಿಮ ಆಯ್ಕೆ ಪಟ್ಟಿ ಅಥವಾ ಫಲಿತಾಂಶ ಪ್ರಕಟಿಸದಂತೆ ಆದೇಶವಿದೆ. ಆದ್ದರಿಂದ ಅರ್ಜಿದಾರರ ವಿರುದ್ಧ ಯಾವುದೇ ಆತುರದ ಅಥವಾ ಬಲವಂತದ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡಬೇಕು' ಎಂದು ಮಧ್ಯಂತರ ಪರಿಹಾರಕ್ಕೆ ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರ ಮನವಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ನ್ಯಾಯಮೂರ್ತಿಗಳು, 'ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ. ಆರೋಪ ಬೇರೆ ಇರಬಹುದು, ಆದರೆ ಈ ಮಹಿಳೆ ಎಲ್ಲದಕ್ಕೂ ಸಂಬಂಧಪಟ್ಟಿದ್ದಾರೆ' ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟು, ಅರ್ಜಿಯ ಮುಂದಿನ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ