
ಪಶುಸಂಗೋಪನಾ ಇಲಾಖೆಯ ವೈದ್ಯ ಹುದ್ದೆ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷರ ಮೇಲೆ ಎಫ್ಐಆರ್ ದಾಖಲಾಗಿದೆ. ಇದಾಗುತ್ತಿದ್ದಂತೆ ಭಾನುವಾರ ಎಂಬುದನ್ನೂ ಮರೆತು ತುರ್ತು ಸಭೆ ಸೇರಿದ ಕೆಪಿಎಸ್ಸಿಯು, ನೇಮಕಾತಿ ಪಟ್ಟಿ ತಡೆ ಹಿಡಿಯುವ ಜೊತೆಗೆ ತನಿಖೆಗೆ ಇಬ್ಬರು ಸದಸ್ಯರ ಒಳಗೊಂಡ ಉಪ ಸಮಿತಿ ರಚಿಸಿದೆ. ಆದರೆ, ಇದು ಕೇವಲ ಕಣ್ಣೊರೆಸುವ ಶಾಸ್ತ್ರ ಎಂದು ಈ ಹಿಂದಿನ ಕರ್ಮಕಾಂಡ ಬಲ್ಲವರ ಮಾತಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ(KPSC)ದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ‘ಕನ್ನಡಪ್ರಭ’ ಜು.1ರಂದು ಸ್ಫೋಟಕ ವರದಿ ಮೂಲಕ ಬಯಲಿಗೆ ಎಳೆದ ಮೇಲೆ ಕೆಪಿಎಸ್‌ಸಿಯಲ್ಲಿನ ಮತ್ತಷ್ಟು ಸಾಲು ಸಾಲು ಅಕ್ರಮ ಅನಾವರಣಗೊಳ್ಳುತ್ತಿವೆ. ಒಂದೂವರೆ ವರ್ಷದ ಹಿಂದೆ ನಡೆಸಿದ್ದ ಎಇಇ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ. ಈ ಬಗ್ಗೆ ಸಿಸಿಟೀವಿ, ವಿಡಿಯೋ ಸಾಕ್ಷ್ಯಗಳಿದ್ದು ಸಿಐಡಿ ತನಿಖೆ ಸೂಕ್ತ ಎಂದು ತನಿಖಾ ಸಮಿತಿ ಶಿಫಾರಸು ಮಾಡಿದ್ದರೂ ಕೆಪಿಎಸ್‌ಸಿ ಅದನ್ನು ಮೂಲೆಗೆ ತಳ್ಳಿತ್ತು. ಅಕ್ರಮ ಎಸಗಿದ 10 ಅಭ್ಯರ್ಥಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ವರದಿ ಆಧರಿಸಿ ಈವರೆಗೆ ಎಫ್ಐಆರ್ ಕೂಡ ದಾಖಲು ಮಾಡಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಕೆಪಿಎಸ್‌ಸಿಯಲ್ಲಿ ಓಎಂಆರ್ ಶೀಟ್ ತಿದ್ದುವುದು, ಕದ್ದು ಪರೀಕ್ಷೆ ಬರೆಸುವುದು ಸಾಮಾನ್ಯ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ.
ಹೀಗಾಗಿ ಇದೀಗ ಪಶುಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಹುದ್ದೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನೇಮಕಾತಿ ಪಟ್ಟಿ ತಡೆ ಹಿಡಿಯುವ ಜೊತೆಗೆ ತನಿಖೆಗಾಗಿ ಇಬ್ಬರು ಸದಸ್ಯರನ್ನು ಒಳಗೊಂಡ ಉಪ ಸಮಿತಿ ರಚಿಸಿರುವುದು ಕೇವಲ ಕಣ್ಣೊರೆಸುವ ಶಾಸ್ತ್ರ ಆಗಿರಬಹುದು ಎಂಬ ಗುಮಾನಿಯೂ ವ್ಯಕ್ತವಾಗಿದೆ.
ಏನಿದು ಹಗರಣ?:
ಹೌದು, ಈಗ ನಾವು ನಿಮ್ಮ ಮುಂದೆ ಹೇಳಲು ಹೊರಟಿರುವುದು ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆಯ 24 ಎಇಇ (ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್) ನೇಮಕಾತಿಯಲ್ಲಿ ನಡೆದ ಅಕ್ರಮದ ಕುರಿತು. ಈ ಅಕ್ರಮದ 498 ಪುಟಗಳ ತನಿಖಾ ವರದಿಯ ಸಂಪೂರ್ಣ ಮಾಹಿತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.
ಗ್ರಾಮೀಣ ಕುಡಿಯವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗೆ 24 ಎಇಇ (ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್)ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಹೈದ್ರಾಬಾದ್ ಕರ್ನಾಟಕ ಹಾಗೂ ಆರ್‌ಪಿಸಿ ಕೋಟಾದಡಿ ಆಯ್ಕೆ ಆಗಿರುವ ಅಭ್ಯರ್ಥಿಗಳ ಪೈಕಿ 10 ಅಭ್ಯರ್ಥಿಗಳು ಅಕ್ರಮ ನಡೆಸಿರುವುದು ಪತ್ತೆಯಾಗಿದೆ. ಇದನ್ನು ಸಿಐಡಿ ತನಿಖೆಗೆ ವಹಿಸಿ ಎಂದು ಸಿಸಿಟೀವಿ ವಿಡಿಯೋ ಸೇರಿದಂತೆ ಅನೇಕ ದಾಖಲೆ ಸಹಿತ ವಿಜಯಕುಮಾರ್ ಕುಚನೂರೆ ಅಧ್ಯಕ್ಷತೆಯ ಐವರನ್ನು ಒಳಗೊಂಡ ತನಿಖಾ ಸಮಿತಿಯು 2025 ಜ.23ರಂದು ವರದಿ ಸಲ್ಲಿಸಿತ್ತು.
ಇಂಥದ್ದೊಂದು ತನಿಖೆ ನಡೆದು ಆ ವರದಿ ಸಲ್ಲಿಕೆಗೆ ಮುನ್ನವೇ ಕೆಪಿಎಸ್ಸಿಯು ಪಟ್ಟಿ ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸಿತ್ತು. ಸರ್ಕಾರವು ಆ ಪಟ್ಟಿ ಆಧರಿಸಿ ನೇಮಕಾತಿ ಆದೇಶವನ್ನೂ ನೀಡಿತ್ತು. ತನಿಖಾ ವರದಿಯ ಶಿಫಾರಸ್ಸು ಹೈಕೋರ್ಟ್‌ನಲ್ಲೂ ಗಂಭೀರ ಚರ್ಚೆಗೆ ಕಾರಣವಾಗಿತ್ತು. ಆದರೆ, ಇದನ್ನೇ ನೆಪವಾಗಿಸಿಕೊಂಡು ಈವರೆಗೆ ಆ ತನಿಖಾ ವರದಿಯ ಶಿಫಾರಸ್ಸುಗಳು ಜಾರಿಯಾಗಿಲ್ಲ. ಈಗ ಬಯಲಿಗೆ ಬಂದಿರುವ ಪಶುಸಂಗೋಪನಾ ಇಲಾಖೆ ವೈದ್ಯಾಧಿಕಾರಿಗಳ ನೇಮಕಾತಿಯಲ್ಲೂ ಇದೇ ಬಗೆಯ ಅಕ್ರಮ ಬಯಲಾಗಿದೆ. ಹಳೆಯ ಅಪರಾಧಕ್ಕೆ ಶಿಕ್ಷೆಯಾಗಿದ್ದರೆ ಈ ಅಪರಾಧ ನಡೆಯುತ್ತಿರಲಿಲ್ಲ.
ಈ ಕುರಿತು ಕೆಪಿಎಸ್ಸಿ ಹಂಗಾಮಿ ಅಧ್ಯಕ್ಷರಾದ ಡಾ। ಬಿ.ಪ್ರಭುದೇವ ಅವರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ಆ ಹಳೇ ಪ್ರಕರಣದ ಕುರಿತು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಆಗ ಪಟ್ಟಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ಈಗ ಬಯಲಾಗಿರುವ ಪ್ರಕರಣದಲ್ಲಿ ಮಧ್ಯವರ್ತಿಗಳು ಸಿಕ್ಕಿಬಿದ್ದಿದ್ದಾರೆ. ಪಟ್ಟಿಯನ್ನು ತಡೆಹಿಡಿದಿದ್ದೇವೆ. ಗ್ರಾಮೀಣ ಕುಡಿಯುವ ನೀರಿನ ಎಇಇಗಳ ಅಕ್ರಮದ ಮಾದರಿಯೇ ಇಲ್ಲೂ ಅನುಸರಿಸಿದಂತೆ ಕಾಣುತ್ತಿದೆ. ಇದಕ್ಕೊಂದು ತಾರ್ತಿಕ ಅಂತ್ಯ ಕಾಣಿಸುತ್ತೇವೆ. ಜೊತೆಗೆ ಹಳೇ ಪ್ರಕರಣವನ್ನೂ ಬಿಡುವುದಿಲ್ಲ ಎಂದರು.
ಆ ಹಳೇ ಪ್ರಕರಣದ ಕುರಿತು ನಿನ್ನೆಯ ತುರ್ತು ಸಭೆಯಲ್ಲಿ ಚರ್ಚೆಗೆ ಬಂತು. ಆ ಕುರಿತು ಏನೇನು ಮಾಡಲು ಅವಕಾಶವಿದೆ ಎಂದು ಪರಿಶೀಲಿಸಿ ವರದಿ ನೀಡಲು ಕಾನೂನು ವಿಭಾಗಕ್ಕೆ ತಿಳಿಸಿದ್ದೇನೆ. ಆ ಪ್ರಕರಣದ ವಿರುದ್ಧ ಕೈಗೊಳ್ಳಬಹುದಾದ ಎಲ್ಲ ಕ್ರಮ ಕೈಗೊಳ್ಳಲು ಕೆಪಿಎಸ್ಸಿ ಸಿದ್ಧವಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜ್ಯೋತಿ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ