
ಬೆಂಗಳೂರು (ಜು.28) ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಮಾತನಾಡುವಾಗ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಕುರಿತಂತೆ ದಾಖಲಾಗಿರುವ ಪ್ರಕರಣ ಸಂಬಂಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಾಗೂ ಎಫ್‌ಐಆರ್ ರದ್ದು ಕೋರಿ ಸಿ.ಟಿ.ರವಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿತು. ಇದೇ ವೇಳೆ ಚಿಕ್ಕಮಗಳೂರು ಟೌನ್ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜು.31ಕ್ಕೆ ಮುಂದೂಡಿತು.
ಜು.23ರಂದು ಚಿಕ್ಕಮಗಳೂರು ಆಜಾದ್ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿ.ಟಿ. ರವಿ ಅವರು, ‘ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ? ಮುಲ್ಲಾಗಳ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಆತ ಬಂದು ನೀಟ್ ವಿರುದ್ಧ ಹೋರಾಟ ಅಂತೆ? ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕಂತೆ, ಮೋದಿ ಹಠಾವೋ ಅಂತೆ, ಭಾರತ್ ತೇರೇ ತುಕ್ಡೆ ಹೊಂಗೆ, ಇನ್ಶಾ ಅಲ್ಲಾಃ ಇನ್ಶಾ ಅಲ್ಲಾಃ ಘೋಷಣೆ ಕೂಗಿದಂತೆ ತುಕ್ಡೆ ಗ್ಯಾಂಗ್‌ಗಳು ಆ ಒಂದು ಹೋರಾಟದಲ್ಲಿ ಭಾಗವಹಿಸುತ್ತಾರೆ’ ಎಂದು ಹೇಳಿದ್ದು, ಈ ಕುರಿತ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಈ ಬಗ್ಗೆ ಮುದಾಸಿರ್ ಪಾಷಾ ಎಂಬುವರು 2026ರ ಜುಲೈ 24ರ ರಾತ್ರಿ ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ, ಸಿ.ಟಿ. ರವಿ ಅವರು ತಮ್ಮ ಭಾಷಣದ ವೇಳೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಎಂದು ಆರೋಪಿಸಿದ್ದರು.
ಈ ದೂರು ಆಧರಿಸಿ, ಪೊಲೀಸರು ಸಿ.ಟಿ.ರವಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 353(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಎಫ್ಐಆರ್ ರದ್ದು ಕೋರಿ ಸಿ.ಟಿ.ರವಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ವೇಳೆ ಎಫ್‌ಐಆರ್ ಗಮನಿಸಿದ ನ್ಯಾಯಪೀಠ, ‘ಯಾಕೆ ಈ ರೀತಿ ಹೇಳಿದಿರಿ? ಎದೆ ಸೀಳಿದರೆ ಎರಡಕ್ಷರ ಇಲ್ಲ? ಇದೆಲ್ಲ ಏಕೆ ಬೇಕು?’ ಎಂದು ಸಿ.ಟಿ. ರವಿ ಪರ ವಕೀಲರನ್ನು ಪ್ರಶ್ನಿಸಿತು.
ಸಿ.ಟಿ.ರವಿ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು, ಯಾರ ಭಾವನೆಗೂ ಧಕ್ಕೆ ತರುವ ಕೆಲಸವಾಗಿಲ್ಲ. ಮೂರನೇ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಸರ್ಕಾರಿ ಅಭಿಯೋಜಕರಾದ ಬಿ.ಎನ್.ಜಗದೀಶ್ ಅವರು, ಪೊಲೀಸರು ನೋಟಿಸ್ ನೀಡಲು ತೆರಳಿದ್ದಾಗ ಅರ್ಜಿದಾರರು ಸರಿಯಾಗಿ ಸ್ಪಂದಿಸಿಲ್ಲ. ತಮ್ಮ ಬೆಂಬಲಿಗರ ಜತೆ ನೋಟಿಸ್ ನೀಡಲು ತೆರಳಿದ್ದ ಅಧಿಕಾರಿಗಳನ್ನೇ ನಿಂದಿಸಿ, ಬೆದರಿಸಿದ್ದಾರೆ ಎಂದು ಆರೋಪಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು. ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ನಿರ್ದೇಶಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ