
ಬೆಂಗಳೂರು (ಜು.28): ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅಕ್ರಮವಾಗಿ ನೇಮಕವಾಗಲು ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ಅವರ ಪುತ್ರಿ ಸುಮಾ ಎಸ್.ಸಾಹುಕಾರ ಅವರಿಗೆ ಹೈಕೋರ್ಟ್ ಸೋಮವಾರ ಛೀಮಾರಿ ಹಾಕಿತು.
ಹಿಂದುಳಿದ ವರ್ಗಗಳ 3ಬಿ ಕೆಟಗರಿ ಕೋಟಾದಡಿ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನೇಮಕಾತಿ ಬಯಸಿ ತಮ್ಮ ಕುಟುಂಬದ ವಾರ್ಷಿಕ ಆದಾಯ ₹40 ಸಾವಿರ ಎಂಬುದಾಗಿ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದ ಸುಮಾ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಕೆಪಿಎಸ್‌ಸಿ ಅಧ್ಯಕ್ಷರ ವಾರ್ಷಿಕ ಆದಾಯ ಕೇವಲ 40 ಸಾವಿರ ರುಪಾಯಿಗಳೇ? ಅವರ ಸಂಬಳವೇ ತಿಂಗಳಿಗೆ ₹2.70 ಲಕ್ಷ ಇದೆ. ವಾರ್ಷಿಕ ಆದಾಯ ₹30 ಲಕ್ಷ ಇರುತ್ತದೆ. ಎಲ್ಲರ ಕಣ್ಣಿಗೆ ರಾಚುವಂತಹ ಈ ಸತ್ಯವನ್ನು ಮರೆಮಾಚಿ ಹೇಗೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದಿರಿ? ಮೇಲ್ನೋಟಕ್ಕೇ ಇದು ವಂಚನೆ ಎಂಬುದು ನಿಚ್ಚಳವಾಗಿದೆ. ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿ ಮತ್ತೊಬ್ಬ ಬಡ ಹಾಗೂ ಅರ್ಹ ಅಭ್ಯರ್ಥಿಗೆ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ಕಿತ್ತುಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿತು.
ಪ್ರಕರಣ ಸಂಬಂಧ ತಮ್ಮ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿ ಸುಮಾ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಪ್ರತಿಬಾರಿಯೂ ಕೆಪಿಎಸ್‌ಸಿಯಲ್ಲಿ ನಡೆಯುವ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದಾದರೂ ಅಕ್ರಮ ನಡೆದೇ ಇರುತ್ತದೆ. ಅರ್ಜಿದಾರರು ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅರ್ಜಿಯ ಘೋಷಣಾ ಕಾಲಂನಲ್ಲಿ ತಪ್ಪು ಮತ್ತು ಸುಳ್ಳು ಹೇಳಿಕೆ ನೀಡಿ ವಾಸ್ತವಿಕ ಮಾಹಿತಿ ಮರೆಮಾಚಿರುವುದನ್ನು ಹೇಗೆ ಸಮರ್ಥಿಸಿಕೊಳ್ಳಲಾಗುತ್ತದೆ. ಹೀಗಿದ್ದರೂ ಎಫ್ಐಆರ್ ದಾಖಲೆಯಲ್ಲಿ ಕಾನೂನು ಲೋಪ ಉಂಟಾಗಿದೆ ಎಂದು ಅದರ ರದ್ದತಿಗೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಿರಿ. ತಪ್ಪು ಮಾಡಿಲ್ಲವಾದರೆ ತನಿಖೆ ನಡೆಯಲಿ ಬಿಡಿ. ತನಿಖೆ ನಂತರ ಖುಲಾಸೆಯಾಗಿ ಬನ್ನಿ ಎಂದು ಸುಮಾ ಅವರಿಗೆ ನ್ಯಾಯಪೀಠ ತಾಕೀತು ಮಾಡಿತು.
ನ್ಯಾಯಪೀಠದ ಕಟು ನುಡಿಗಳನ್ನು ಆಲಿಸಿದ ಸುಮಾ ಅವರ ಪರ ವಕೀಲರು, ಅರ್ಜಿಯನ್ನು ಹಿಂಪಡೆದರು.
ಇದಕ್ಕೂ ಮುನ್ನ ಸುಮಾ ಅವರ ವಕೀಲರು, ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸುವ ಮುನ್ನ ಕಾನೂನು ಪ್ರಕ್ರಿಯೆ ಪಾಲನೆಯಲ್ಲಿ ಮೂಲಭೂತ ಲೋಪಗಳಿವೆ. ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಕೆಯಾಗಿದ್ದರೆ, ಮೊದಲು ಆ ಕುರಿತು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪರಿಶೀಲನಾ ಸಮಿತಿಯಿಂದ ವಿಚಾರಣೆ ನಡೆಸಬೇಕಿತ್ತು. ಆ ನಿಯಮವನ್ನು ಅತಿಕ್ರಮಿಸಿ ಯಾವುದೇ ವಿಚಾರಣೆ ನಡೆಸದೇ ನೇರವಾಗಿ ಎಫ್ಐಆರ್ ಆರ್ ದಾಖಲಿಸಲಾಗಿದೆ. ಹಾಗಾಗಿ, ಎಫ್ಐಆರ್ ಊರ್ಜಿತವಾಗುವುದಿಲ್ಲ ಎಂದು ಪ್ರತಿಪಾದಿಸಿದರು.
ಪರೀಕ್ಷೆ ಬರೆದ ನಂತರ ದಾಖಲಾತಿಗಳ ಪರಿಶೀಲನೆ ವೇಳೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ತಕರಾರು ಗಮನಕ್ಕೆ ಬಂದಿದೆ. ಕುಟುಂಬದ ಆದಾಯ ಎಂದರೆ ವೈಯಕ್ತಿಕ ಆದಾಯ ಎಂಬ ತಿಳಿವಳಿಕೆಯಿಂದ ವಾರ್ಷಿಕ ಆದಾಯ ₹40 ಸಾವಿರ ಎಂದು ಅರ್ಜಿದಾರರು ತಿಳಿಸಿದ್ದರು. ನಂತರ ಅರ್ಜಿದಾರರು ತಮ್ಮ ಅಭ್ಯರ್ಥಿತನವನ್ನು ನೇಮಕಾತಿ ಪ್ರಕ್ರಿಯೆಯಿಂದ ಹಿಂಪಡೆದಿದ್ದಾರೆ. ಇದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ ಎಂದು ಸಮಜಾಯಿಷಿ ನೀಡಿದರು.
ಅದಕ್ಕೆ ಗರಂ ಆದ ಪೀಠ, ಅರ್ಜಿದಾರ ಆಯ್ಕೆಪಟ್ಟಿಯಲ್ಲಿ ಇದ್ದವರಲ್ಲವೇ? ಅಭ್ಯರ್ಥಿತನ ಹಿಂಪಡೆದಾಕ್ಷಣ ಎಲ್ಲ ಸರಿ ಹೋಗಿ ಬಿಡುತ್ತದೆಯೇ? ಮತ್ತೊಮ್ಮೆ ಪರೀಕ್ಷೆ ನಡೆಸಲಾಯಿತೇ? ಅರ್ಜಿದಾರರು 3ಬಿ ಮೀಸಲಾತಿ ಕೆಟಗರಿಯಲ್ಲಿ ಕುಟುಂಬದ ಒಟ್ಟು ವಾರ್ಷಿಕ ಆದಾಯ ತೋರಿಸುವ ಮೂಲಕ ಅರ್ಹ ಬಡ ಅಭ್ಯರ್ಥಿಯೊಬ್ಬರ ಭವಿಷ್ಯವನ್ನೇ ಕಿತ್ತುಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತು.
ಸುಮಾ ಎಸ್. ಸಾಹುಕಾರ ಅವರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿ ವೇಳೆ ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಬಿ.ಎನ್.ಶೋಭಾ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಸುಮಾ ವಿರುದ್ಧ ನಕಲಿ ದಾಖಲೆ ಸೃಷ್ಟಿ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ