
ಬೆಂಗಳೂರು (ಸೆ.01): ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ (KPSC) ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ಅಧಿಕಾರಿಗಳ ಮುಂದೆ ವಿಚಾರಣೆ ವೇಳೆ 6 ಜನ ಅಭ್ಯರ್ಥಿಗಳು ತಾವು ಹಣ ನೀಡಿ ಹುದ್ದೆ ಗಿಳಿಸಿಕೊಳ್ಳಲು ಯತ್ನಿಸಿದ್ದಾಗಿ ಸ್ಪೋಟಕ ತಪ್ಪೊಪ್ಪಿಗೆ ನೀಡಿದ್ದಾರೆ.
ಸುಮಾರು 400 ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿರುವುದು ತನಿಖೆಯಿಂದ ಬಯಲಾಗಿದೆ. ಸಿಐಡಿ ತನಿಖೆಯು ಮಹತ್ವದ ಘಟ್ಟ ತಲುಪಿದ್ದು, ಅಕ್ರಮದ ಕರಾಳ ಮುಖಗಳು ಒಂದೊಂದಾಗಿ ಹೊರಬರುತ್ತಿವೆ.
ಸಿಐಡಿ ವಶದಲ್ಲಿರುವ ಅಥವಾ ವಿಚಾರಣೆಗೊಳಪಟ್ಟ 6 ಮಂದಿ ಅಭ್ಯರ್ಥಿಗಳು ಅಕ್ರಮ ನೇಮಕಾತಿ ಜಾಲದ ಕುರಿತು ಸಂಪೂರ್ಣ ಬಾಯ್ಬಿಟ್ಟಿದ್ದಾರೆ. ಯಾರಿಗೆ ಹಣ ಮುಟ್ಟಿಸಲಾಗಿದೆ, ಎಲ್ಲಿ ಪರೀಕ್ಷೆ ಬರೆಯಲಾಗಿದೆ ಮತ್ತು ಎಷ್ಟು ಲಕ್ಷ ರೂಪಾಯಿಗೆ ಡೀಲ್ ಕುದುರಿತ್ತು ಎಂಬ ಮಾಹಿತಿಯನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬಸವರಾಜ್ ಕನ್ನಾಳಿ ಭಾಗಿ: ಈ ಅಕ್ರಮ ಜಾಲದಲ್ಲಿ ಬಸವರಾಜ್ ಕನ್ನಾಳಿ ಸೇರಿದಂತೆ ಪ್ರಮುಖರು ಭಾಗಿಯಾಗಿರುವ ಬಗ್ಗೆ ಅಭ್ಯರ್ಥಿಗಳು ಸಿಐಡಿಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ: ಪರೀಕ್ಷೆ ಬರೆಯುವುದಕ್ಕೂ ಮುಂಚಿತವಾಗಿ ನಮಗೆ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿತ್ತು ಎಂದು ಅಭ್ಯರ್ಥಿಗಳು ಒಪ್ಪಿಕೊಂಡಿದ್ದಾರೆ.
ಅಕ್ರಮವಾಗಿ ಆಯ್ಕೆ ಬಯಸಿದ್ದ ಅಭ್ಯರ್ಥಿಗಳಿಗೆ ಬೆಂಗಳೂರು ಹಾಗೂ ಇತರೆ ರಾಜ್ಯಗಳಲ್ಲಿ ರಹಸ್ಯವಾಗಿ ಪರೀಕ್ಷೆ ಬರೆಸಲಾಗಿದೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಬೆಂಗಳೂರಿನ ರೆಸಾರ್ಟ್‌ನಲ್ಲಿ, ತುಮಕೂರಿನ ದೇವರಾಯನದುರ್ಗದ ಪ್ರಶಾಂತ ವಾತಾವರಣದಲ್ಲಿ, ಆಂಧ್ರಪ್ರದೇಶದ ರೆಸಾರ್ಟ್ ಒಂದರಲ್ಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಸಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ರಾಜಾಜಿನಗರದ ನಿರ್ದಿಷ್ಟ ಕಚೇರಿಯೊಂದರಲ್ಲಿ ಹುದ್ದೆಗಳಿಗಾಗಿ ಹಣಕಾಸಿನ ಡೀಲ್ (Deal) ಕುದುರಿದೆ. ಎಷ್ಟು ಲಕ್ಷಗಳಿಗೆ ಡೀಲ್ ಆಯಿತು ಮತ್ತು ಮಧ್ಯವರ್ತಿಗಳು ಯಾರು ಎಂಬ ಬಗ್ಗೆಯೂ ಅಭ್ಯರ್ಥಿಗಳು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸರಿಸುಮಾರು 400 ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಈ ಬೃಹತ್ ಹಗರಣದ ಜಾಡನ್ನು ಹಿಡಿದಿರುವ ಸಿಐಡಿ ಅಧಿಕಾರಿಗಳು, ಅಭ್ಯರ್ಥಿಗಳು ನೀಡಿರುವ ಈ ಎಲ್ಲಾ ಪ್ರಮುಖ ಮಾಹಿತಿಯ ಆಧಾರದ ಮೇಲೆ ತನಿಖೆಯನ್ನು ಚುರುಕುಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಮುಖ ವ್ಯಕ್ತಿಗಳು ಬಂಧನಕ್ಕೊಳಗಾಗುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ