KPSC ಪರೀಕ್ಷಾ ಅಕ್ರಮದಲ್ಲಿ ಮಾಜಿ ಸದಸ್ಯ ಎಸಿಪಿ ದುಗ್ಗಪ್ಪ ಹೆಸರು: ವಾಟ್ಸ್‌ಆ್ಯಪ್ ಚಾಟ್‌ ಜಾಲ ಬಯಲಿಗೆಳೆದ ED!

Published : Oct 09, 2026, 12:34 PM IST
KPSC Scam Duggappa Shivashankar Chat

ಸಾರಾಂಶ

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಇಡಿಗೆ ಮಾಜಿ ಅಧ್ಯಕ್ಷರ ಪಿಎ ಮೊಬೈಲ್‌ನಲ್ಲಿ ಮಹತ್ವದ ವಾಟ್ಸ್‌ಆ್ಯಪ್ ಚಾಟ್‌ಗಳು ಲಭ್ಯವಾಗಿವೆ. ಮಾಜಿ ಸದಸ್ಯ ದುಗ್ಗಪ್ಪ ಅವರು ಅಭ್ಯರ್ಥಿಗಳ ಹಾಲ್ ಟಿಕೆಟ್ ಕಳುಹಿಸಿರುವ ಮಾಹಿತಿ ಪತ್ತೆಯಾಗಿದ್ದು, ಡೀಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಶೀಘ್ರದಲ್ಲೇ ದುಗ್ಗಪ್ಪಗೆ ಇಡಿ ನೋಟಿಸ್ ನೀಡುವ ಸಾಧ್ಯತೆಯಿದೆ.

ಬೆಂಗಳೂರು (ಅ.09): ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರು ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯಕ್ಕೆ (ED) ಅತ್ಯಂತ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಆಪ್ತ ಸಹಾಯಕ (PA) ಮೋಹನ್‌ಕುಮಾರ್ ಅವರ ಮೊಬೈಲ್‌ನಲ್ಲಿ ಕೆಪಿಎಸ್‌ಸಿ ಮಾಜಿ ಸದಸ್ಯ ಹಾಗೂ ನಿವೃತ್ತ ಎಸಿಪಿ ದುಗ್ಗಪ್ಪ ಜೊತೆಗಿನ ವಾಟ್ಸ್‌ಆ್ಯಪ್ ಚಾಟ್‌ಗಳು ಪತ್ತೆಯಾಗಿದ್ದು, ನೇಮಕಾತಿ ಅಕ್ರಮದಲ್ಲಿ ಇಬ್ಬರ ಪಾತ್ರದ ಕುರಿತು ಬಲವಾದ ಶಂಕೆ ವ್ಯಕ್ತವಾಗಿದೆ.

ಪಿಎ ಮೊಬೈಲ್‌ನಲ್ಲಿ ಅಭ್ಯರ್ಥಿಗಳ ಹಾಲ್ ಟಿಕೆಟ್, ರಿಜಿಸ್ಟರ್ ನಂಬರ್ ಪತ್ತೆ:

ಇತ್ತೀಚೆಗಷ್ಟೇ ಸಾಹುಕಾರ್ ಅವರ ಪಿಎ ಮೋಹನ್‌ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಮೋಹನ್‌ಕುಮಾರ್ ಅವರ ಮೊಬೈಲ್ ಡಾಟಾ ಮತ್ತು ವಾಟ್ಸ್‌ಆ್ಯಪ್ ಮೆಸೇಜ್‌ಗಳನ್ನು ಜಾಲಾಡಿದಾಗ ಬೆಚ್ಚಿಬೀಳಿಸುವ ಸಂಗತಿಗಳು ಬಯಲಾಗಿವೆ. ದಾವಣಗೆರೆ ಮೂಲದ ದುಗ್ಗಪ್ಪ ಅವರು ಪರೀಕ್ಷೆ ಬರೆದಿದ್ದ ಹಲವು ಅಭ್ಯರ್ಥಿಗಳ ವಿವರ, ನೋಂದಣಿ ಸಂಖ್ಯೆ (Registration Numbers) ಹಾಗೂ ಹಾಲ್ ಟಿಕೆಟ್‌ಗಳ ಫೋಟೋಗಳನ್ನು ಪದೇಪದೆ ಪಿಎ ಮೋಹನ್‌ಕುಮಾರ್‌ಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಸಾಹುಕಾರ್-ದುಗ್ಗಪ್ಪ ನಡುವೆ ನಡೀತಾ ಅಭ್ಯರ್ಥಿಗಳ ‘ಡೀಲ್’?:

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸು ಮಾಡಿಸಲು ಅಥವಾ ಹುದ್ದೆ ಕೊಡಿಸಲು ಅಭ್ಯರ್ಥಿಗಳಿಂದ ಹಣ ಪಡೆದು, ಪಿಎ ಮೂಲಕ ಅಧ್ಯಕ್ಷರ ಮಟ್ಟದಲ್ಲಿ ಡೀಲ್ ಕುದುರಿಸಲಾಗುತ್ತಿತ್ತೇ? ಎಂಬ ಗಂಭೀರ ಅನುಮಾನವನ್ನು ಇಡಿ ವ್ಯಕ್ತಪಡಿಸಿದೆ. ಕೇವಲ ಅಭ್ಯರ್ಥಿಗಳ ವಿವರ ನೀಡುವುದಷ್ಟೇ ಅಲ್ಲದೆ, ಚಾಟ್‌ನಲ್ಲಿ ನಡೆದಿರುವ ಸಂಭಾಷಣೆಗಳು ಹಣಕಾಸಿನ ವಹಿವಾಟಿನತ್ತ ಬೊಟ್ಟು ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.

ಯಾರು ಈ ದುಗ್ಗಪ್ಪ? ಸಾಹುಕಾರ್ ಜತೆಗಿನ ನಂಟೇನು?

ಪೊಲೀಸ್ ಇಲಾಖೆಯಲ್ಲಿ ನಿವೃತ್ತ ಎಸಿಪಿ ಆಗಿರುವ ದುಗ್ಗಪ್ಪ ಅವರು ಈ ಹಿಂದೆ ಕೆಪಿಎಸ್‌ಸಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ದಾವಣಗೆರೆ ಮೂಲದವರಾದ ಇವರು, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ತಮ್ಮ ಅಧಿಕಾರ ಹಾಗೂ ನಿಕಟ ಸಂಪರ್ಕವನ್ನು ಬಳಸಿಕೊಂಡು ಈ ಪರೀಕ್ಷಾ ದಂಧೆ ನಡೆಸುತ್ತಿದ್ದರೇ ಎಂಬ ಬಗ್ಗೆ ಜಾರಿ ನಿರ್ದೇಶನಾಲಯ ತೀವ್ರ ಪರಿಶೀಲನೆ ನಡೆಸುತ್ತಿದೆ.

ಶೀಘ್ರದಲ್ಲೇ ದುಗ್ಗಪ್ಪಗೆ ಇಡಿ ನೋಟಿಸ್ ಜಾರಿ?

ಲಭ್ಯವಾಗಿರುವ ವಾಟ್ಸ್‌ಆ್ಯಪ್ ಚಾಟ್‌ಗಳು, ಅಭ್ಯರ್ಥಿಗಳ ವಿವರಗಳು ಮತ್ತು ಹಣಕಾಸಿನ ಲಿಂಕ್ ಆಧರಿಸಿ ದುಗ್ಗಪ್ಪ ಅವರಿಗೆ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ (ನೋಟಿಸ್) ಜಾರಿ ಮಾಡಲು ಇಡಿ ಸಿದ್ಧತೆ ನಡೆಸಿದೆ. ಈ ವಿಚಾರಣೆ ವೇಳೆ ಕೆಪಿಎಸ್‌ಸಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಮತ್ತಷ್ಟು ಬೃಹತ್ ತಿಮಿಂಗಿಲಗಳ ಹೆಸರುಗಳು ಹೊರಬರುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದಲ್ಲಿ 700ರ ಗಡಿ ದಾಟಿದ ಹುಲಿಗಳ ಸಂತತಿ: ಕಾಡುತ್ತಿದೆ ಮಾನವ-ವನ್ಯಜೀವಿ ಸಂಘರ್ಷದ ಆತಂಕ!
ಎಸ್.ಎಲ್. ಭೈರಪ್ಪ ಅಂತ್ಯಕ್ರಿಯೆ, ವಿಲ್ ವಿವಾದ: ಕೊನೆಗೂ ಮೌನ ಮುರಿದ ಸಾಹಿತಿ ಸಹನಾ ವಿಜಯಕುಮಾರ್!