
ಮಡಿಕೇರಿ (ಆ.10): ಹತಾಶನಾಗಿ ಹುಚ್ಚು ಹಿಡಿದಿರುವ ಒಬ್ಬ ಮಾಜಿ ಸಂಸದ ಹುಚ್ಚು ನಾಯಿಯಂತೆ ರಾಜ್ಯದ ಎಲ್ಲ ನಾಯಕರಿಗೆ ಕಚ್ಚುತ್ತಿದ್ದಾನೆ ಎಂದು ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಮಡಿಕೇರಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಎಂ ಲಕ್ಷ್ಮಣ್, ಇವನು ಮಾತ್ರ ರಾಜ್ಯದ ಎಲ್ಲ ನಾಯಕರನ್ನ ಬೈಯಬಹುದಂತೆ, ಇವನನ್ನು ಮಾತ್ರ ಯಾರೂ ಬೈಯುವಂತೆ ಇಲ್ಲವಂತೆ. ಇವನ ವಿರುದ್ಧ ಮಾತಾಡುತ್ತೇವೆ ಅಂತಾ ಕೋರ್ಟ್‌ಗೆ ಹೋಗಿ ತಡೆ ತಂದಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಾಪ್ ಸಿಂಹರನ್ನ ಪ್ರಜ್ವಲ್ ರೇವಣ್ಣಗೆ ಹೋಲಿಸಿದ ಲಕ್ಷಣ್:
ಇವನ ಕರ್ಮಕಾಂಡ ಎಲ್ಲವೂ ಮೊಬೈಲ್ ನಲ್ಲಿ ಇದೆ. ಈ ಕರ್ಮಕಾಂಡ ಬಿಚ್ಚಿದರೆ ಪ್ರಜ್ವಲ್ ರೇವಣ್ಣನಂತೆ ಇವನೂ ಒಳಗೆ ಹೋಗುತ್ತಾನೆ. ಈತನ ಹಿನ್ನೆಲೆ ಅಷ್ಟೊಂದು ಕೆಟ್ಟದಾಗಿದೆ. ಇಂತಹ ಕಜ್ಜಿನಾಯಿಯನ್ನು ಹುಚ್ಚುನಾಯಿ ರೀತಿ ಕಚ್ಚಲು ಬಿಜೆಪಿಯವರು ಬಿಟ್ಟಿದ್ದಾರೆ. ಕೋರ್ಟ್‌ನಿಂದ ತಡೆ ತೆರವು ಮಾಡಿದರೆ ಆತನ ಯೋಗ್ಯತೆ ಏನು ಅಂತ ಹೇಳುತ್ತೇವೆ. ಕೋರ್ಟ್‌ನಿಂದ ತಡೆ ತಂದು ಮೊಬೈಲ್‌ನಲ್ಲಿ ಬಿಡುಗಡೆ ಮಾಡಲಿ ಎಂದರೆ ಏನರ್ಥ ಎಂದು ಕಿಡಿಕಾರಿದರು.
ನನ್ನ ಕುಟುಂಬದ ಬಗ್ಗೆ ಮಾತಾಡುವ ಯೋಗ್ಯತೆ ಅವನಿಗಿಲ್ಲ:
ನನ್ನ ಕುಟುಂಬದ ವಿರುದ್ಧ ಮಾತನಾಡುತ್ತಾನೆ. ನನ್ನ ಕುಟುಂಬದ ಮಾತನಾಡುವ ಯೋಗ್ಯತೆ ಅವನಿಗಿಲ್ಲ. ನನಗೆ ಮಾತನಾಡುವ ಸ್ವಾತಂತ್ರ್ಯವಿದೆ ಮೊದಲು ಕಂಟೆಮ್ಟ್ ತೆರವು ಮಾಡಲಿ ನಾನು ಅವನ ಜಾತಕ ಬಿಡುಗಡೆ ಮಾಡುತ್ತೇನೆ. ನಾನು ಕೋರ್ಟ್‌ನಲ್ಲೇ ಉತ್ತರ ಕೊಡುತ್ತೇನೆ. ಕಂಟೆಮ್ಟ್ ಆಫ್ ಕೋರ್ಟ್ ಇದ್ದರೆ ನನ್ನ ಬಗ್ಗೆ ಯಾಕೆ ಮಾತನಾಡುತ್ತಾನೆ? ನಾನು ಕಾಂಗ್ರೆಸ್ ವಕ್ತಾರ ಇದ್ದೇನೆ. ನನಗೂ ನಿರ್ದೇಶನವಿರುತ್ತದೆ. ನಾನೂ ಮಾತನಾಡಬೇಕಲ್ಲವೇ? ಅವನು ಮುಂದಿನ ಯಾವುದೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತರೂ ನಾನು ಅವನ ವಿರುದ್ಧ ನಿಲ್ಲುತ್ತೇನೆ ಎಂದು ಸವಾಲು ಹಾಕಿದರು.
ಧರ್ಮಸ್ಥಳ ಪ್ರಕರಣ ತನಿಖೆ ಮಾಡಬಾರದು ಎಂದರೆ ಹೇಗೆ?
ಧರ್ಮಸ್ಥಳದಲ್ಲಿ ಎಸ್ಐಟಿ ತನಿಖೆ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಂ ಲಕ್ಶ್ಮಣ್, ದೂರುದಾರ ಕೋರ್ಟ್ ಮುಂದೆ 164 ಹೇಳಿಕೆ ನೀಗಿದ್ದಾನೆ. ಅದನ್ನು ಆಧರಿಸಿ ಎಸ್ಐಟಿ ರಚಿಸಲಾಗಿದೆ. ತನಿಖೆಯನ್ನೇ ಮಾಡಬಾರದು ಅನ್ನುವುದು ಎಷ್ಟು ಸರಿ? ಇದು ಧರ್ಮಸ್ಥಳ ದೇವಸ್ಥಾನ ಅಥವಾ ವೀರೇಂದ್ರ ಹೆಗ್ಗಡೆ ವಿರುದ್ಧ ತನಿಖೆ ಅಲ್ಲ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಮಾಧ್ಯಮಗಳು ಹೋಗಿ ಅದನ್ನು ವರದಿ ಮಾಡುತ್ತಿವೆ. ರಾಷ್ಟ್ರೀಯ ಸುದ್ಧಿ ವಾಹಿನಿಗಳಲ್ಲಿ ಗಂಟೆಗಟ್ಟಲೆ ಸುದ್ದಿ ಆಗುತ್ತಿದೆ. ಆದರೆ ಅಲ್ಲಿ ಮಾಧ್ಯಮ ಮತ್ತು ಯೂಟ್ಯೂಬರ್ ಗಳ ಮೇಲೆ ಹಲ್ಲೆ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಪಾದನೆ ಮಾಡುವುದಕ್ಕೆ ಅವಕಾಶವಿದೆ. ಆ ರೀತಿ ಇಲ್ಲ ಎನ್ನುವುದನ್ನು ಸಾಬೀತು ಮಾಡುವುದಕ್ಕೂ ಅವಕಾಶವಿದೆ. ತನಿಖೆ ನಡೆಯುತ್ತಿದ್ದು ವರದಿ ಬಳಿಕ ಕ್ರಮ ಆಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗುತ್ತದೆ. ಅಲ್ಲಿಯವರೆಗೆ ಎಲ್ಲರೂ ಸಮಾಧಾನ ಇರಬೇಕು ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ:
ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಯಾವುದೇ ವಿಷಯ ಬಂದರೂ ಬಿಜೆಪಿಯವರು ಕೋಮು ವಿಷಯವಾಗಿ ಬಳಸುತ್ತಾರೆ. ಅಲ್ಲಿ ಸತ್ತಿರುವ ಸೌಜನ್ಯ ಹಿಂದೂ ಅಲ್ಲವೆ? ಎಂದು ಪ್ರಶ್ನಿಸಿದ ಎಂ ಲಕ್ಷ್ಮಣ್, ಸೌಜನ್ಯ ಕುಟುಂಬಸ್ಥರಿಗೆ ನ್ಯಾಯ ಸಿಗಬೇಕು. ಸಿದ್ದರಾಮಯ್ಯ ಸರ್ಕಾರ ಯಾರ ವಿರುದ್ಧವೂ ಅಲ್ಲ. ನ್ಯಾಯಾಂಗದ ಆದೇಶದ ಮೇರೆಗೆ ಎಸ್‌ಐಟಿ ರಚನೆಯಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ