ಡಿಕೆಶಿ ದಿಢೀರ್‌ ದೆಹಲಿಗೆ: ಸೋನಿಯಾ, ರಾಹುಲ್‌ ಭೇಟಿಗೆ ಕೆಪಿಸಿಸಿ ಅಧ್ಯಕ್ಷ ಯತ್ನ!

By Kannadaprabha News  |  First Published Sep 27, 2021, 7:26 AM IST

* ಪದಾಧಿಕಾರಿಗಳ ನೇಮಕ: ಡಿಕೆಶಿ ದಿಢೀರ್‌ ದೆಹಲಿಗೆ

* ಸೋನಿಯಾ, ರಾಹುಲ್‌ ಭೇಟಿಗೆ ಕೆಪಿಸಿಸಿ ಅಧ್ಯಕ್ಷ ಯತ್ನ

* ಒಂದು ವಾರದೊಳಗೆ ರಾಜ್ಯ ಕಾಂಗ್ರೆಸ್‌ಗೆ ಹೊಸ ತಂಡ?


ಬೆಂಗಳೂರು(ಸೆ.27): ಹೈಕಮಾಂಡ್‌ ಬುಲಾವ್‌ ನೀಡಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(KPCC President DK Shivakumar) ಅವರು ಭಾನುವಾರ ಹಠಾತ್‌ ದೆಹಲಿಗೆ ತೆರಳಿದ್ದಾರೆ. ಇದರೊಂದಿಗೆ ನೆನೆಗುದಿಗೆ ಬಿದ್ದಿದ್ದ ಕೆಪಿಸಿಸಿ ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್‌, ಓಬಿಸಿ, ಅಲ್ಪಸಂಖ್ಯಾತ ಘಟಕದಂತಹ ಮುಂಚೂಣಿ ಘಟಕಗಳ ಅಧ್ಯಕ್ಷರ ನೇಮಕ ಹಾಗೂ ಸುಮಾರು 15 ಜಿಲ್ಲಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಮತ್ತೆ ಜೀವ ಬಂದಿದೆ.

ಶಿವಕುಮಾರ್‌ ಅವರ ಆಪ್ತರ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ಅಧ್ಯಕ್ಷರು ದೆಹಲಿಯಲ್ಲೇ/(Delhi) ಬೀಡು ಬಿಡಲಿದ್ದು, ಹೈಕಮಾಂಡ್‌ನ ವರಿಷ್ಠರಾದ ಕೆ.ಸಿ. ವೇಣುಗೋಪಾಲ್‌(KC Venugopal) ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ(Randeep Surjewala) ಅವರೊಂದಿಗೆ ಪದಾಧಿಕಾರಿಗಳ ಪಟ್ಟಿಬಗ್ಗೆ ಚರ್ಚಿಸಲಿದ್ದಾರೆ. ಯಾವುದೇ ಸಮಸ್ಯೆ ಎದುರಾಗದಿದ್ದರೆ ಮುಂದಿನ ಒಂದು ವಾರದೊಳಗೆ ಕೆಪಿಸಿಸಿಗೆ ನೂತನ ಪದಾಧಿಕಾರಿಗಳ ನೇಮಕವಾಗಲಿದೆ. ಇದೇ ವೇಳೆ ಶಿವಕುಮಾರ್‌ ಅವರು ಯಡಿಯೂರಪ್ಪ(BS Yediyurappa) ಅವರು ಅಧಿಕಾರದಿಂದ ಕೆಳಗಿಳಿದ ನಂತರ ರಾಜ್ಯ ರಾಜಕೀಯದಲ್ಲಿ ಉಂಟಾಗಿರುವ ಬೆಳವಣಿಗೆ, ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ವೈಖರಿ ಹಾಗೂ ಇದರಿಂದಾಗಿ ಕಾಂಗ್ರೆಸ್‌ ಮುಂದಿರುವ ಸವಾಲುಗಳು ಮತ್ತು ಮುಂಬರುವ ಚುನಾವಣೆಗಳಿಗಾಗಿ ಪಕ್ಷದ ಯೋಜನೆಗಳೇನಾಗಬೇಕು ಎಂಬ ವಿಚಾರದ ಬಗ್ಗೆಯೂ ಹೈಕಮಾಂಡ್‌ನೊಂದಿಗೆ ಚರ್ಚಿಸಲಿದ್ದಾರೆ.

Tap to resize

Latest Videos

ಈ ಎಲ್ಲಾ ಬೆಳವಣಿಗೆ ಬಗ್ಗೆ ಮಾತನಾಡಲು ಶಿವಕುಮಾರ್‌ ಅವರು ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ಸಮಯವನ್ನು ಕೋರಿದ್ದು, ಪ್ರವಾಸದಲ್ಲಿರುವ ಈ ನಾಯಕರು ಲಭ್ಯರಾದರೆ ಅವರೊಂದಿಗೆ ಮಾತುಕತೆ ನಡೆಸಿ ನಂತರ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

ಮೂರು ಪಟ್ಟಿಪರಾಮರ್ಶೆ:

ಕೆಪಿಸಿಸಿ ಅಧ್ಯಕ್ಷರ ಆಪ್ತರೇನೋ ಪದಾಧಿಕಾರಿಗಳ ಪಟ್ಟಿಇನ್ನೊಂದು ವಾರದೊಳಗೆ ಪ್ರಕಟವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಆದರೆ, ಬಣ ರಾಜಕಾರಣ ತೀವ್ರವಾಗಿರುವ ಕಾಂಗ್ರೆಸ್‌ನಲ್ಲಿ ಇದು ಅಷ್ಟುಸರಳವಾಗಿ ನಡೆಯುವುದಿಲ್ಲ ಎಂದೇ ಹೇಳಲಾಗುತ್ತಿದೆ. ವಾಸ್ತವವಾಗಿ ರಾಜ್ಯದ ಇತರ ನಾಯಕರೊಂದಿಗೆ ಚರ್ಚೆ ಮಾಡದೆಯೇ ಕೆಪಿಸಿಸಿ ಅಧ್ಯಕ್ಷರು ಪದಾಧಿಕಾರಿಗಳ ಪಟ್ಟಿಯೊಂದನ್ನು ಕೆಲ ತಿಂಗಳ ಹಿಂದೆಯೇ ಹೈಕಮಾಂಡ್‌ಗೆ ನೀಡಿದ್ದರು. ಆ ಸಂದರ್ಭದಲ್ಲಿ ಅಧ್ಯಕ್ಷರು ಸುಮಾರು 200 ಮಂದಿ ಅರ್ಹರ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಆದರೆ, ಕೆಪಿಸಿಸಿ ಅಧ್ಯಕ್ಷರ ಈ ನಡೆ (ಇತರ ನಾಯಕರೊಂದಿಗೆ ಚರ್ಚಿಸದೆ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ಗೆ ಸಲ್ಲಿಸಿದ) ಬಗ್ಗೆ ಇತರ ನಾಯಕರು ಹೈಕಮಾಂಡ್‌ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು 175 ಮಂದಿಯ ಹೆಸರನ್ನು ಒಳಗೊಂಡ ಪ್ರತ್ಯೇಕ ಪಟ್ಟಿಯೊಂದನ್ನು ಸಿದ್ಧಪಡಿಸಿ ಹೈಕಮಾಂಡ್‌ಗೆ ರವಾನಿಸಿದ್ದರು. ಇದರ ನಡುವೆ ಮತ್ತೊಬ್ಬ ಪ್ರಮುಖ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್‌ಗೆ ತಮ್ಮ ಆಯ್ಕೆಯ ಕೆಲ ನಾಯಕರ ಪಟ್ಟಿಯನ್ನು ನೀಡಿ ಅದನ್ನು ಪದಾಧಿಕಾರಿಗಳ ಅಂತಿಮ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಹೈಕಮಾಂಡ್‌ಗೆ ವಿನಂತಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯೇ ಮುಂದೂಡಿಕೆ ಕಂಡಿತ್ತು.

ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಪಟ್ಟಿಅಂತಿಮಗೊಳಿಸುವ ಹೊಣೆಯನ್ನು ಹೈಕಮಾಂಡ್‌ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಹಾಗೂ ಕೆ.ಸಿ. ವೇಣಗೋಪಾಲ್‌ ಅವರಿಗೆ ನೀಡಿತ್ತು.

ಇದೀಗ ಹೈಕಮಾಂಡ್‌ ಬುಲಾವ್‌ ಮೇರೆಗೆ ಡಿ.ಕೆ. ಶಿವಕುಮಾರ್‌ ದೆಹಲಿಗೆ ತೆರಳಿದ್ದಾರೆ. ಪಟ್ಟಿಅಂತಿಮವಾಗಬೇಕು ಎಂದರೆ ಸಿದ್ದರಾಮಯ್ಯ ಅವರೊಂದಿಗೂ ಹೈಕಮಾಂಡ್‌ ಸಮಾಲೋಚಿಸಬೇಕು. ಆದರೆ, ಸಿದ್ದರಾಮಯ್ಯ ಅವರ ಆಪ್ತರ ಪ್ರಕಾರ ಅವರಿಗೆ ಹೈಕಮಾಂಡ್‌ನಿಂದ ಇಂತಹ ಯಾವುದೇ ಬುಲಾವ್‌ ಈ ಕ್ಷಣದವರೆಗೂ ಬಂದಿಲ್ಲ. ಮುಂದಿನ ದಿನಗಳಲ್ಲಿ ಹೈಕಮಾಂಡ್‌ನಿಂದ ಬುಲಾವ್‌ ಬಂದರೆ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಬಹುದು ಅಥವಾ ಸಿದ್ದರಾಮಯ್ಯ ಅವರನ್ನು ದೂರವಾಣಿ ಮೂಲಕವೇ ಸಂಪರ್ಕಿಸಿ ಪಟ್ಟಿಇತ್ಯರ್ಥಗೊಳಿಸಬೇಕು ಎನ್ನುತ್ತವೆ ಮೂಲಗಳು.

click me!