ಚುನಾವಣೆ ಸಂದರ್ಭದಲ್ಲಿ ನನ್ನ ಮೇಲೆ ಇಡಿ ದಾಳಿ ನಡೆಯುತ್ತಿದೆ. ಫೆ.24ಕ್ಕೆ ನನಗೆ ಇಡಿ ಅವರು ವಿಚಾರಣೆಗೆ ಕರೆದಿದ್ದಾರೆ. ನಾನು ಪ್ರಜಾಧ್ವನಿ ಮಾಡಲೋ, ಅಥವಾ ಇಡಿ ಅವರ ಬಳಿ ಹೋಗಲೋ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಶಿವಮೊಗ್ಗ (ಫೆ.08): ಚುನಾವಣೆ ಸಂದರ್ಭದಲ್ಲಿ ನನ್ನ ಮೇಲೆ ಇಡಿ ದಾಳಿ ನಡೆಯುತ್ತಿದೆ. ಫೆ.24ಕ್ಕೆ ನನಗೆ ಇಡಿ ಅವರು ವಿಚಾರಣೆಗೆ ಕರೆದಿದ್ದಾರೆ. ನಾನು ಪ್ರಜಾಧ್ವನಿ ಮಾಡಲೋ, ಅಥವಾ ಇಡಿ ಅವರ ಬಳಿ ಹೋಗಲೋ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಭದ್ರಾವತಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಆಸ್ತಿ ಚಾರ್ಜ್ ಶೀಟ್ ಸಲ್ಲಿಕೆ ವಿಚಾರವಾಗಿ ನನ್ನ ಮಗಳಿಗೆ ಸಿಬಿಐಯವರು ನೋಟಿಸ್ ಕಳಿಸಿದ್ದಾರೆ. ಕಾಲೇಜು ಫೀಸ್ ಕಟ್ಟಿದ್ದೆಲ್ಲಾ ಕೇಳುತ್ತಿದ್ದಾರೆ. ಇದು ಕೇವಲ ನಮಗೆ ಮಾತ್ರ ಇಡಿ ಅವರು ಇರೋದು. ಆಡಳಿತ ಪಕ್ಷದವರಿಗೆ ಇಡಿ, ಸಿಬಿಐನವರು ಯಾರೂ ಇಲ್ಲ. ಈ ಸಂದರ್ಭದಲ್ಲಿ ಇವೆಲ್ಲಾ ನಡೆಯುತ್ತಿದೆ. ಏನ್ ಮಾಡ್ಲಿ ನಾನು, ಇರಲಿ ನೋಡೋಣ ಏನಾಗುತ್ತೋ ಅಂತಾ ಬೇಸರದಿಂದಲೇ ಉತ್ತರ ನೀಡಿದರು.
ವಿಐಎಸ್‌ಎಲ್-ಎಂಪಿಎಂ ರಕ್ಷಣೆ ನನ್ನ ಜವಾಬ್ದಾರಿ: ಈ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಕಾಂಗ್ರೆಸ್ ಸರ್ಕಾರ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಪುನಃ ಕೇಂದ್ರ ಸರ್ಕಾರದಿಂದ ಹಿಂಪಡೆದು ಅಭಿವೃದ್ಧಿಪಡಿಸುವುದಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಮಿಕರಿಗೆ ಭರವಸೆ ನೀಡಿದರು. ಬುಧವಾರ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ದಿಷ್ಟಾವಧಿ 21ನೇ ದಿನದ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಹೆಸರು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಿಎಂ ಬೊಮ್ಮಾಯಿ
ಜವಾಹರ್‌ಲಾಲ್ ನೆಹರು ಅವರು ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳ ಸ್ಥಾಪನೆಗೆ ಹೆಚ್ಚಿನ ಮಹತ್ಮ ನೀಡುವ ಮೂಲಕ ನಮಗೆ ಅಗತ್ಯವಿರುವ ವಸ್ತುಗಳನ್ನು ನಾವೇ ಉತ್ಪಾದಿಸಿಕೊಳ್ಳುವ ಜೊತೆಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದರು. ದೇಶಾದ್ಯಂತ ಕೈಕಾರಿಕಾ ಕ್ರಾಂತಿ ನಿರ್ಮಾಣವಾಗಿತ್ತು. ಆದರೆ, ಇಂದಿನ ಬಿಜೆಪಿ ಸರ್ಕಾರ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು ಮುಚ್ಚುವ ಮೂಲಕ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾರ್ಖಾನೆಗೆ ಅಗತ್ಯವಿರುವ ಗಣಿ ಮಂಜೂರಾತಿ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಈ ಗಣಿಯನ್ನು ಕಾರ್ಖಾನೆ ಹೆಸರಿಗೆ ನೋಂದಾಯಿಸಿಕೊಳ್ಳಲು ಇವರಿಗೆ ಸಾಧ್ಯವಾಗಿಲ್ಲ. ಉಳಿದಂತೆ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವ ವಿಚಾರದಲ್ಲೂ ಸುಳ್ಳು ಆಶ್ವಾಸನೆಗಳನ್ನು ನೀಡಲಾಗಿದೆ. ಕೇಂದ್ರದಿಂದ ಒಬ್ಬ ಸಚಿವರನ್ನು ಕರೆತಂದು .6 ಸಾವಿರ ಕೋಟಿ ಹಾಗೂ ಮತ್ತೊಬ್ಬ ಸಚಿವರಿಂದ 1 ಸಾವಿರ ಕೋಟಿ ಬಂಡವಾಳ ತೊಡಗಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಬಂಡವಾಳ ಹೂಡದೆ ನಿರ್ಲಕ್ಷ ್ಯತನ ವಹಿಸಲಾಗಿದೆ ಎಂದು ಆರೋಪಿಸಿದರು.
ಕಾರ್ಖಾನೆ ಉಳಿಸಿಕೊಳ್ಳುವುದು ದೊಡ್ಡ ವಿಷಯವಲ್ಲ. ಸುಮಾರು 1600 ಎಕರೆ ಭೂಮಿ, ರಸ್ತೆ, ನೀರು ಸೇರಿದಂತೆ ಮೂಲ ಸೌಲಭ್ಯಗಳು ಈ ವ್ಯಾಪ್ತಿಯಲ್ಲಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ಎಂದಿಗೂ ನಿಮ್ಮ ಪರವಾಗಿ ಇರುತ್ತೇವೆ. ನೀವು ಸಹ ನಮ್ಮ ಪರವಾಗಿರಿ. ಇದೊಂದು ರೀತಿಯ ಒಪ್ಪಂದವಾಗಿದೆ. ಕಾರ್ಮಿಕರು ಯಾರು ಸಹ ಧೈರ್ಯ ಕಳೆದುಕೊಳ್ಳಬಾರದು. ನಿವೃತ್ತ ಕಾರ್ಮಿಕರು ಮನೆಗಳನ್ನು ಖಾಲಿ ಮಾಡುವ ಅಗತ್ಯವಿಲ್ಲ. ಒಂದುವೇಳೆ ಹೋರಾಟ ಮಾಡುವ ಅನಿವಾರ್ಯತೆ ನಿರ್ಮಾಣವಾದಲ್ಲಿ ನಿಮ್ಮ ಪರ ಹೋರಾಟಕ್ಕೂ ಸಹ ಸಿದ್ದವಾಗಿದ್ದೇನೆ ಎಂದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮಾತನಾಡಿ, ನಾನು ಇದೇ ಊರಿನಲ್ಲಿ ಹುಟ್ಟಿಬೆಳೆದಿದ್ದೇನೆ. ಈ ಕಾರ್ಖಾನೆಯನ್ನು ಅವಲಂಬಿಸಿರುವ ಕುಟುಂಬಗಳಲ್ಲಿ ನಾನು ಸಹ ಒಬ್ಬನಾಗಿದ್ದೇನೆ. ಭವ್ಯ ಪರಂಪರೆ ಹೊಂದಿರುವ, ಸಮೃದ್ಧಿಯಿಂದ ಕೂಡಿರುವ ಈ ಕಾರ್ಖಾನೆಯನ್ನು ಮುಚ್ಚಲು ಸ್ಪಷ್ಟವಾದ ಕಾರಣಗಳಿಲ್ಲ. ವಾಸ್ತವಾಗಿ ಈ ಕಾರ್ಖಾನೆಯಲ್ಲಿ 250ಕ್ಕೂ ಹೆಚ್ಚು ಕಾಯಂ ಕಾರ್ಮಿಕರು, ಸುಮಾರು 1500 ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾರ್ಷಿಕ .450 ಕೋಟಿ ಲಾಭದಲ್ಲಿ ಮುನ್ನಡೆಯುತ್ತಿದೆ.
ಆದರೆ ಕೇಂದ್ರ ಸರ್ಕಾರಕ್ಕೆ ಕೇವಲ 100 ಜನ ಮಾತ್ರ ಕಾರ್ಮಿಕರಿದ್ದು, ನಷ್ಟದಲ್ಲಿ ಸಾಗುತ್ತಿದೆ ಎಂದು ಸುಳ್ಳು ವರದಿಗಳನ್ನು ನೀಡಲಾಗಿದೆ. ಈ ಕಾರ್ಖಾನೆಯನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಿ ಹಣ ಲೂಟಿ ಮಾಡುವ ಕುತಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಈ ಹಿನ್ನಲೆಯಲ್ಲಿ ನಾನು ಈ ಊರಿನ ಒಬ್ಬ ಕಾರ್ಮಿಕನಾಗಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಕಾರ್ಖಾನೆ ಉಳಿಸಿ ಅಭಿವೃದ್ಧಿಗೊಳಿಸುವಂತೆ ಮನವಿ ಮಾಡುತ್ತಿದ್ದೇನೆ. ಅವರು ನನ್ನ ಮನವಿಗೆ ಪೂರಕವಾಗಿ ಸ್ಪಂದಿಸಲಿದ್ದಾರೆಂಬ ವಿಶ್ವಾಸವಿದೆ ಎಂದರು.
ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ
ವೇದಿಕೆಯಲ್ಲಿ ಪ್ರಮುಖರಾದ ಶಾಸಕ ಬಿ.ಕೆ. ಸಂಗಮೇಶ್ವರ್, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ, ಉಗ್ರಪ್ಪ, ಮಾಜಿ ಸಚಿವ ರೇವಣ್ಣ, ವಿಧಾನ ಪರಿಷತ್ತು ಸದಸ್ಯ ಸಲೀಂ ಅಹಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ. ನಾಗರಾಜ್, ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಚಂದ್ರೇಗೌಡ, ಗ್ರಾಮಾಂತರ ಘಟಕ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಜಿ.ಪಲ್ಲವಿ ಹಾಗೂ ಗುತ್ತಿಗೆ ಕಾರ್ಮಿಕ ಸಂಘಟನೆಗಳ ಪ್ರಮುಖರು ಇನ್ನಿತರರು ಉಪಸ್ಥಿತರಿದ್ದರು.