ಋತ್ವಿಕ್ ಕಂಠಕ್ಕೆ ಮನಸೋತು ಕಣ್ಣುಗಳನ್ನು ದಾನ ಮಾಡಲು ಮುಂದಾದಾ ಅಜ್ಜ| ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದ ಅನಾಥ ವೃದ್ಧ ಸಿದ್ಧಲಿಂಗನಗೌಡ| ಈಗಾಗಲೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಣ್ಣುಗಳನ್ನು ದಾನ ಮಾಡಿರುವ ಅಜ್ಜ| ತಮ್ಮ ಕಣ್ಣುಗಳನ್ನು ಋತ್ವಿಕ್ ಅವರಿಗೆ ಅಳವಡಿಸಲು ಅಜ್ಜನ ಹಠ
ಕೊಟ್ಟೂರು(ಡಿ.08): ಸಂಗೀತವೇ ಹಾಗೆ. ಎಲ್ಲರನ್ನೂ ಸೆಳೆಯುವ ಶಕ್ತಿ ಸಂಗೀತಕ್ಕಿದೆ. ಎಂತಹ ಕಠೋರ ಹೃದಯವನ್ನೂ ಅದು ಹೂವಿನಂತೆ ಕರಗಿಸಬಲ್ಲದು. ಅದರಲ್ಲೂ ಸಂಗೀತಪ್ರೀಯ ಕರ್ನಾಟಕದಲ್ಲಿ ನಿಷ್ಕಲ್ಮಶ ಸಂಗೀತಕ್ಕೆ ತಲೆದೂಗದವರೇ ಇಲ್ಲ.
ಅಂತಹ ನಿಷ್ಕಲ್ಮಶ ಹಾಡುಗಾರರಲ್ಲಿ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಂಗೀತ ಕಾರ್ಯಕ್ರಮದ ಅಂಧ ಗಾಯಕ ಋತ್ವಿಕ್ ಕೂಡ ಒಬ್ಬರು.
ಕೊಟ್ಟೂರಿನ 74 ವಯಸ್ಸಿನ ಅನಾಥ ವೃದ್ಧರೊಬ್ಬರು ಜೀ ವಾಹಿನಿಯ ಸರಿಗಮಪ ಸಂಗೀತ ಕಾರ್ಯಕ್ರಮದ ಅಂಧ ಗಾಯಕ ಋತ್ವಿಕ್ ವರಿಗೆ ತಮ್ಮ ಎರಡು ಕಣ್ಣುಗಳನ್ನು ಅವರಿಗೆ ದಾನ ಮಾಡಲು ಮುಂದಾಗಿದ್ದಾರೆ.
ಹೌದು, ತಮ್ಮ ಕಣ್ಣುಗಳನ್ನು ಋತ್ವಿಕ್ ವರಿಗೆ ಹಾಕಲೇಬೇಕು ಎಂದು ಕೊಟ್ಟೂರು ಪಟ್ಟಣದ ಸಿದ್ಧಲಿಂಗನಗೌಡ ಆಗ್ರಹಿಸಿದ್ದಾರೆ.
ಒಂದು ತಿಂಗಳ ಹಿಂದೆಯಷ್ಟೇ ತಮ್ಮ ಎರಡೂ ಕಣ್ಣುಗಳು ಹಾಗೂ ದೇಹವನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾನ ಮಾಡಿರುವ ಸಿದ್ಧಲಿಂಗನಗೌಡ, ತಮ್ಮ ಜೀವನ ಸಾರ್ಥಕಗೊಳಿಸಿಕೊಳ್ಳಲು ಋತ್ವಿಕ್ ಅವರಿಗೆ ಕಣ್ಣು ದಾನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿ ವಾರ ಋತ್ವಿಕ್ ಅವರ ಹಾಡುಗಳನ್ನು ಸರಿಗಮಪ ಕಾರ್ಯಕ್ರಮದಲ್ಲಿ ವೀಕ್ಷಿಸುತ್ತೇನೆ, ಅವರ ಹಾಡಿಗೆ ಮನಸೋತು ನಾನು ಅವರ ಅಭಿಮಾನಿಯಾಗಿದ್ದೇನೆ ಎನ್ನುತ್ತಾರೆ ಸಿದ್ಧಲಿಂಗನಗೌಡ.
ವಿಮ್ಸ್ ಆಸ್ಪತ್ರೆಯವರು ತಮ್ಮ ಕಣ್ಣುಗಳನ್ನು ಋತ್ವಿಕ್ ಅವರಿಗೆ ಅಳವಡಿಸಬೇಕು ಎಂದು ಸಿದ್ಧಲಿಂಗನಗೌಡ ಮನವಿ ಮಾಡಿಕೊಂಡಿದ್ದಾರೆ.