
ಗಂಗಾವತಿ (ಸೆ.10): ಕೊಪ್ಪಳ ಜಿಲ್ಲೆಯ ಗಂಗಾವತಿಯ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಒಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಲೇಜು ಶುಲ್ಕದ ಬಾಕಿ ಪಾವತಿಗಾಗಿ ವಿದ್ಯಾರ್ಥಿನಿಯ ತಾಯಿಯ ತಾಳಿಯನ್ನೇ ಒತ್ತೆಯಾಗಿಟ್ಟುಕೊಂಡ ಆರೋಪ ಕಾಲೇಜಿನ ಚೇರಮನ್ ಡಾ ಸಿಬಿ ಚಿನಿವಾಲ ವಿರುದ್ಧ ಕೇಳಿಬಂದಿದೆ.
ಘಟನೆಯ ವಿವರ:
ಕನಕಗಿರಿ ತಾಲೂಕಿನ ಮುಸ್ಲಾಪೂರ ಗ್ರಾಮದ ಕಾವೇರಿ ವಾಲಿಕಾರ್ ಎಂಬ ವಿದ್ಯಾರ್ಥಿನಿ ಗಂಗಾವತಿಯ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್‌ಗೆ ಅಡ್ಮಿಶನ್ ಪಡೆದಿದ್ದಳು. ಅಡ್ಮಿಶನ್ ಸಮಯದಲ್ಲಿ ಕಾವೇರಿಯ ಪಾಲಕರು 10,000 ರೂ. ಪಾವತಿಸಿದ್ದರು ಮತ್ತು ಉಳಿದ 90,000 ರೂ. ಬಾಕಿಯನ್ನು ನಂತರ ಪಾವತಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇತ್ತೀಚೆಗೆ ಕಾವೇರಿಗೆ ಗದಗಿನ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೀಟು ದೊರೆತ ಕಾರಣ, ಅವರು ಬಿಬಿಸಿ ಕಾಲೇಜಿನಿಂದ ಟಿಸಿ (ಟ್ರಾನ್ಸ್‌ಫರ್ ಸರ್ಟಿಫಿಕೇಟ್) ಕೇಳಿದ್ದಾರೆ.
ಕಾವೇರಿಯ ಪಾಲಕರು ಟಿಸಿ ಕೇಳಿದಾಗ, ಕಾಲೇಜು ಚೇರಮನ್ ಡಾ ಚಿನಿವಾಲ ಉಳಿದ 90,000 ರೂ. ಪಾವತಿಸಿದರೆ ಮಾತ್ರ ಟಿಸಿ ನೀಡುವುದಾಗಿ ಹೇಳಿದ್ದಾರೆ. ಆದರೆ ಸದ್ಯ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಕಾವೇರಿಯ ಪಾಲಕರು ತಿಳಿಸಿದ್ದಾರೆ. ಇದಕ್ಕೆ ಚೇರಮನ್ ಡಾ. ಚಿನಿವಾಲ, 'ಹಣ ಇಲ್ಲದಿದ್ದರೆ ನಿಮ್ಮ ಮೈಮೇಲಿನ ಬಂಗಾರವನ್ನಾದರೂ ಕೊಡಿ ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಈ ಒತ್ತಡದಿಂದಾಗಿ ಕಾವೇರಿಯ ತಾಯಿ ತಮ್ಮ ತಾಳಿಯನ್ನೇ ಬಿಚ್ಚಿಕೊಟ್ಟು ಟಿಸಿ ಪಡೆದಿದ್ದಾರೆ.
ಕಾವೇರಿ ತಾಯಿ ಕಣ್ಣೀರು:
ಕಾವೇರಿಯ ತಾಯಿ ಘಟನೆ ಬಗ್ಗೆ ಮಾತನಾಡಿದ್ದು, 'ಮಗಳ ಶುಲ್ಕಕ್ಕಾಗಿ ತಾಳಿ ಕೇಳಿದಾಗ, ಬೇರೆ ದಾರಿಯಿಲ್ಲದೇ ನನ್ನ ತಾಳಿಯನ್ನೇ ಕೊಟ್ಟೆ, ಕೊರಳಲ್ಲಿನ ತಾಳಿ ಕೇಳುವ ಅವರು… ಎನ್ನುತ್ತಾ ದುಃಖ ಕಣ್ಣೀರು ಹಾಕಿದ್ದಾರೆ. ಈ ಘಟನೆಯಿಂದ ಕಾವೇರಿಯ ಕುಟುಂಬ ಮತ್ತು ಸ್ಥಳೀಯರು ಡಾ ಚಿನಿವಾಲ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಳಿಯಂತಹ ಪವಿತ್ರವಾದ ಆಭರಣವನ್ನು ಶುಲ್ಕಕ್ಕಾಗಿ ಒತ್ತೆಯಾಗಿ ಕೇಳುವ ಚೇರಮನ್‌ರ ನಡವಳಿಕೆ, ಮನಸ್ಥಿತಿ ಬಗ್ಗೆ ಸಾರ್ವಜನಿಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಿಂದ ಕಾಲೇಜಿನ ಆಡಳಿತದ ವಿರುದ್ಧ ಸ್ಥಳೀಯರಲ್ಲಿ ಆಕ್ರೋಶ ಹೆಚ್ಚಾಗಿದ್ದು, ಶಿಕ್ಷಣ ಸಂಸ್ಥೆಯೊಂದು ಇಂತಹ ಅಮಾನವೀಯ ಕೃತ್ಯದಲ್ಲಿ ತೊಡಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ