ರೇಷ್ಮೆ ಗೂಡು ಬೆಲೆ ಕುಸಿತ: ಸಾಲದ ಸುಳಿಗೆ ಸಿಲುಕಿದ ರೈತ

By Sathish Kumar KH  |  First Published Jun 3, 2023, 10:18 PM IST

ಕೋಲಾರದಲ್ಲಿ ರೇಷ್ಮೆ ಗೂಡಿನ ಬೆಲೆ ಕಡಿಮೆಯಾಗಿದ್ದು, ರೈತರು ರೇಷ್ಮೆಗಾಗಿ ಮಾಡಿದ ಖರ್ಚಿಗಿಂತಲೂ ಆದಾಯ ಕಡಿಮೆ ಬರುತ್ತಿದ್ದು, ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ.


ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೋಲಾರ (ಜೂ.03): ಕೋಲಾರದ ಭಾಗದ ಬಹುತೇಕ ರೈತರು ರೇಷ್ಮೆ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಅವರಿಗಾದ ಭಾರಿ ನಷ್ಟದಿಂದ ಕೆಲವರು ಬೇರೆ ಬೆಳೆಗಳತ್ತ ಮುಖ ಮಾಡಿದ್ದರು. ಇನ್ನು ಕೆಲವರು ರೇಷ್ಮೆ ಬೆಳೆಯನ್ನೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಮತ್ತೆ ನಷ್ಟು ಉಂಟಾಗಿದ್ದು, ಹಾಕಿರೋ ಬಂಡವಾಳ ಬರುತ್ತಿಲ್ಲ ಅಂತ ಕೊರಗುತ್ತಿದ್ದಾರೆ.

Latest Videos

undefined

ಚಿನ್ನದನಾಡು ಕೋಲಾರ ಜಿಲ್ಲೆಯ ಬಹುತೇಕ ರೈತರು ರೇಷ್ಮೆ ಹಾಗೂ ಹೈನುಗಾರಿಕೆ ಅಳವಡಿಸಿಕೊಂಡು ಒಂದೂ ಸುಸ್ಥಿರವಾದ ಜೀವನ ನಡೆಸುತ್ತಿದ್ದಾರೆ. ಆದ್ರೇ ಇದೀಗ ರೇಷ್ಮೆ ಗೂಡಿನ ಬೆಲೆ ಕುಸಿಯುತ್ತಿರುವ ಕಾರಣ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೋಲಾರ ಸೇರಿದಂತೆ ಹಲವೂ ಮಾರುಕಟ್ಟೆಗಳಲ್ಲಿ ರೇಷ್ಮೆ ಬೆಲೆ ಕುಸಿತಗೊಂಡಿರುವ ಕಾರಣ ರೈತರಲ್ಲಿ ನಿರಾಸೆ ಉಂಟು ಮಾಡಿದೆ. ಸಧ್ಯ ಪ್ರತಿ ಕೆಜಿಗೆ 300 ರಿಂದ 450 ರುಪಾಯಿವರೆಗೂ ಮಾರಾಟವಾಗ್ತಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ ಬರೋಬರಿ 550 ರಿಂದ 750 ರುಪಾಯಿವರೆಗೂ ಮಾರಾಟವಾಗ್ತಿತ್ತು. 

ಮದ್ಯದ ದರ ತಗ್ಗಿಸುವುದೇ ಕಾಂಗ್ರೆಸ್‌ ಸರ್ಕಾರ: ಹೊಸ ಅಬಕಾರಿ ನೀತಿ ಸುಳಿವು ಕೊಟ್ಟ ಸಚಿವ ತಿಮ್ಮಾಪುರ

ಇತ್ತೀಚಿಗೆ ರೇಷ್ಮೆ ನೂಲಿಗೆ ಬೇಡಿಕೆ ಇಲ್ಲದೆ ರೈತರಿಂದ ಖರೀದಿ ಕಡಿಮೆಯಾಗಿದೆ. ಆದ್ದರಿಂದ ನೂಲಿನ ಬೆಲೆ ಕುಂಠಿತವಾಗಿದೆ. ಇದರ ಜೊತೆ ಪಕ್ಕದ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯದ ರೈತರು ಸಹ ಕೋಲಾರ ಜಿಲ್ಲೆಯ ಮಾರುಕಟ್ಟೆಗೆ ಬಂದು ಮಾರಾಟ ಮಾಡ್ತಿರೋದ್ರಿಂದ ಆವಕ ಹೆಚ್ಚಾಗಿದೆ. ಇದು ಸಹ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ರೈತರಿಂದ ರೇಷ್ಮೆ ಖರೀದಿ ಮಾಡುವ ರೀಲರ್ಸ್‌ ಗಳು ಹೇಳ್ತಿದ್ದಾರೆ. ಇದರ ನಡುವೆ ರೈತರಿಗೆ ಹಾಕಿರೋ ಬಂಡವಾಳ ಸಹ ಸಿಗದೇ ಕಂಗಾಲಾಗಿದ್ದು, ರೇಷ್ಮೆ ಬೆಳೆ ಸಾಕಪ್ಪ ಸಾಕು ಅಂತಿದ್ದಾರೆ.

ರೇಷ್ಮೆ ಬೆಲೆ ಇಳಿಕೆ -ಬೆಳೆಯುವ ವಸ್ತುಗಳ ದರ ಏರಿಕೆ: ಇನ್ನು ಪ್ರತಿ ವರ್ಷ ಮಾರುಕಟ್ಟೆಗೆ 115 ಕ್ವಿಂಟಾಲ್‌ ನಷ್ಟು ರೇಷ್ಮೆ ಬರುತ್ತಿತ್ತು. ಈ ವರ್ಷ 175 ಕ್ವಿಂಟಾಲ್‌ ಬಂದಿರೋದ್ರಿಂದ ಅವಶ್ಯಕತೆಗಿಂತಲೂ ಹೆಚ್ಚಿಗೆ ರೇಷ್ಮೆ ಬಂದಿರೋದ್ರಿಂದ ಸಂಗ್ರಹಣೆ ಮಾಡಿಕೊಳ್ಳಲು ರೀಲರ್ಸ್‌ ಗಳಿಗೆ ಜಾಗದ ಕೊರತೆ ಉಂಟಾಗಿ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರ ನಡುವೆ ರೇಷ್ಮೆ ಗೂಡಿನ ಬೆಲೆ ಕುಸಿತದಿಂದ ರೈತರು ಕಂಗಾಲಾಗಿರುವ ಸಮಯದಲ್ಲಿ 100 ಮೊಟ್ಟೆಯ ಸುಮಾರು 600 ರಿಂದ 1,200 ರೂಗೆ ಮಾರಾಟವಾಗುತ್ತಿದೆ. ರೇಷ್ಮೆ ಚಾಕಿ ಹುಳದ 100 ಮೊಟ್ಟೆಗೆ 4,500 ಯಿಂದ 5,000ರ ರೂ.ವರೆಗೂ ಮಾರಾಟವಾಗುತ್ತಿದ್ದು, ಬೆಲೆ ಏರಿಕೆಯಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಹಿಪ್ಪು ನೇರಳೆ ಬೆಳೆಯಿಂದಲೂ ವಿಮುಕ್ತಿ: ಒಂದು ಎಕರೆ ಹಿಪ್ಪನೇರಳೆ ಸೊಪ್ಪು ಈ ಹಿಂದೆ 10 ರಿಂದ 15 ಸಾವಿರಕ್ಕೆ ಮಾರಾಟವಾಗುತ್ತಿದ್ದು, ಕಳೆದ ಕೆಲವು ವಾರಗಳಿಂದ ರೇಷ್ಮೆ ಗೂಡಿನ ಬೆಲೆಯ ಸತತ ಕುಸಿತದಿಂದ ಕೇವಲ 4 ರಿಂದ 5 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದನ್ನು ಗಮನಿಸಿದ ಹಲವು ರೈತರು ಹಿಪ್ಪು ನೇರಳೆಯನ್ನು ತೆಗೆದು ಬೇರೊಂದು ಬೆಳೆಯನ್ನು ಬೆಳೆಯುವ ಆಲೋಚನೆಯಲ್ಲಿದ್ದಾರೆ. ರೀಲರ್‌ಗಳ ಖಾತೆಯಲ್ಲಿ ಹಣವಿದ್ದರೆ ಮಾತ್ರ ಗೂಡು ಖರೀದಿಗೆ ಅವಕಾಶವಿರುತ್ತದೆ. ಚುನಾವಣೆಯ ಸಂದರ್ಭದಲ್ಲಿ ರೀಲರ್‌ಗಳಿಗೆ ಹಣಕಾಸಿನ ಸಮಸ್ಯೆ ಉಂಟಾಗಿ ರೇಷ್ಮೆ ವಹಿವಾಟು ನಡೆಯಲಿಲ್ಲ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಕಾಣುವ ಸಾಧ್ಯತೆ ಇದೆ. ರೈತರು ಧೃತಿಗೆಡಬೇಡಿ ಅಂತಿದ್ದಾರೆ ಅಧಿಕಾರಿಗಳು.

ಸರ್ಕಾರದ ಯುವನಿಧಿ ಯೋಜನೆ ಮಾನದಂಡ ಪ್ರಕಟ: ಯಾರಿಗೆಲ್ಲ 3 ಸಾವಿರ ರೂ. ಸಿಗುತ್ತೆ

ಒಟ್ಟಾರೆ ರೇಷ್ಮೆ ಬೆಳೆಗಾರರಿಗೆ ಕೊರೊನಾ ಸಮಯದಲ್ಲಿ ಹಿಂದೆಂದೂ ಕಾಣದಷ್ಟೂ ನಷ್ಟ ಉಂಟಾಗಿ ಪಡಬಾರದ ಕಷ್ಟುಪಟ್ಟು ರೇಷ್ಮೆ ಬಿಟ್ಟು ಬೇರೆ ಬೆಳೆಗಳತ್ತ ಮುಖ ಮಾಡಿದ್ರು,ಇನ್ನು ಕೆಲವರು ರೇಷ್ಮೆ ಬೆಳೆಯನ್ನು ನಂಬಿ ಸಾಕಾಣಿಕೆ ಮುಂದುವರೆಸಿದ್ದಾರೆ,ಇದೀಗ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಾಂತಾಗಿದೆ.ಇನ್ನಾದ್ರೂ ಸರಕಾರ ಕೂಡಲೇ ಮಧ್ಯ ಪ್ರವೇಶ ಮಾಡುವ ಮೂಲಕ ರೈತರ ಬದುಕು ಹಸನುಮಾಡಲಿ ಅನ್ನೋದು ನಮ್ಮ ಮನವಿ ಕೂಡ.

click me!