ರಾಕೇಶ್‌ ಟಿಕಾಯತ್‌ಗೆ ಮಸಿ ಬಳಿದ ಭರತ್‌ ಶೆಟ್ಟಿ: ವಶಕ್ಕೆ ಪಡೆದ ಪೊಲೀಸರು

By Suvarna News  |  First Published May 30, 2022, 1:50 PM IST

Rakesh Tikait Inked: ರೈತ ಮುಖಂಡ ರಾಕೇಶ್‌ ಟಿಕಾಯತ್‌ ಮೇಲೆ ಭಾರತ ರಕ್ಷಣಾ ಸೇನೆಯ ಭರತ್‌ ಶೆಟ್ಟಿ ಮಸಿ ಬಳಿದ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಪ್ರೆಸ್‌ಮೀಟ್‌ ಮಾಡುತ್ತಿದ್ದ ವೇಳೆ ಮಸಿ ಬಳಿಯಲಾಗಿದ್ದು, ನಂತರ ಕೆಲ ನಿಮಿಷಗಳ ಕಾಲ ಎರಡೂ ಬಣಗಳ ಕಡೆಯವರು ಕುರ್ಚಿಯಿಂದ ಬಡಿದಾಡಿದ ಘಟನೆ ನಡೆದಿದೆ.


ಬೆಂಗಳೂರು: ಭಾರತ ಕಿಸಾನ್‌ ಯೂನಿಯನ್‌ನ ರಾಕೇಶ್‌ ಟಿಕಾಯತ್‌ ಮೇಲೆ ಮಸಿ ಬಳಿದಿರುವ ಘಟನೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದಿದೆ. ರಾಕೇಶ್‌ ಟಿಕಾಯತ್‌ಗೆ ಮಸಿ ಬಳಿದಿದ್ದು ನಾವೇ ಎಂದು ಭಾರತ ರಕ್ಷಣಾ ಸೇನೆಯ ಭರತ್‌ ಶೆಟ್ಟಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ನಂತರ ಭರತ್‌ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಅದಾದ ನಂತರ ರಾಕೇಶ್‌ ಟಿಕಾಯತ್‌ ಮೇಲೆ ಕೋಡಿಹಳ್ಳಿ ಚಂದ್ರಶೇಖರ್‌ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇದಕ್ಕೆ ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಪ್ರೆಸ್‌ಮೀಟ್‌ ಮಾಡುತ್ತಿದ್ದಾಗ ಭರತ್‌ ಶೆಟ್ಟಿ ತಂಡ ಮಸಿಬಳಿದಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಕೇಶ್‌ ಟಿಕಾಯತ್‌, ಮಸಿ ಬಳಿದವರು ಯಾರು ಎಂಬುದು ಗೊತ್ತಿಲ್ಲ. ಆದರೆ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ ಎಂದಿದ್ದಾರೆ. ಈಗಾಗಲೇ ಮಸಿ ಬಳಿದಿರುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. 

Tap to resize

Latest Videos

ಕುರ್ಚಿ ಹಿಡಿದು ಬಡಿದಾಟ:

ಎರಡೂ ಬಣದ ರೈತರು ಗಾಂಧಿ ಭವನದಲ್ಲಿದ್ದ ಕುರ್ಚಿಯನ್ನೇ ತೆಗೆದು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ದೃಶ್ಯ ಚಿತ್ರೀಕರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಎರಡೂ ಬಣ ರೌಡಿಗಳಂತೆ ವರ್ತಿಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟೂ ಮೂವರನ್ನು ವಶಕ್ಕೆ ಪಡೆದಿದ್ದು, ಡಿಸಿಪಿ ಶರಣಪ್ಪ ಅವರೇ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈತ ಸಂಘದ ಹೆಸರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ದಂಧೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹೆಸರಿನಲ್ಲಿ ಸಾರಿಗೆ ನೌಕರರು ಮುಂದಾದಾಗ ನೇತೃತ್ವ ವಹಿಸಿದ್ದ ಅವರು ಹಣ ಪಡೆದು ಪ್ರತಿಭಟನೆ ಕೈಬಿಟ್ಟಿದ್ದಾರೆ. ಈ ಸಂಬಂಧ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಜೆಡಿಎಸ್‌ ಕಾರ್ಯಕರ್ತರು ಈ ಹಿಂದೆ ಆರೋಪಿದ್ದರು. 

 

 

ಚರ್ಚೆಗೆ ಸಿದ್ದ: ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್‌, ರೈತ ಸಂಘದ ಕಾರ್ಯಕರ್ತರ ಮೇಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಬೆಂಬಲಿಗರಿಂದ ದಾಳಿ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆ ಬಗ್ಗೆ ಹತಾಶರಾಗಿ ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ನನ್ನ ಹೋರಾಟಕ್ಕೆ ಸಂಬಂಧಿಸಿದಂತೆ ಗೊಂದಲವಿದ್ದಲ್ಲಿ ಚರ್ಚೆ ನಾನು ಸಿದ್ಧನಿದ್ದೇನೆ. ಆದರೆ, ನನ್ನ ಹೋರಾಟದ ಕುರಿತು ಚಾರಿತ್ರ್ಯವಧೆ ಮಾಡುವುದರಿಂದ ನಿಮ್ಮ ಪಕ್ಷಕ್ಕೆ ಯಾವುದೇ ಲಾಭವಾಗುವುದಿಲ್ಲ ಎಂದರು. ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ಜಾರಿ ಮಾಡುತ್ತಿರುವ ರೈತ ಕಾಯ್ದೆಗಳ ಪರವಾಗಿ ಇದ್ದಾರೆ. ಇದನ್ನು ನಾವು ರೈತ ಸಮೂಹಕ್ಕೆ ತಿಳಿಸುತ್ತಿದ್ದೇವೆ. ಜತೆಗೆ, ನಾನು ರಾಜಕೀಯ ಪ್ರವೇಶ ಮಾಡಿರುವುದರಿಂದ ಕುಮಾರಸ್ವಾಮಿ ಅವರು ಹತಾಶೆಗೆ ಒಳಗಾಗಿದ್ದು, ಈ ರೀತಿಯ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

Kodihalli Chandrashekar: ಪ್ರಧಾನಿ ಬಳಿ ಮಾತನಾಡುವ ಧಮ್‌, ಸಿಎಂ ಬೊಮ್ಮಾಯಿಗೆ ಎಲ್ಲಿದೆ?

ತನಿಖೆ ನಡೆಸಲಿ: ನಾನು ಏನಾದರೂ ಹಣ ಪಡೆದಿದ್ದಲ್ಲಿ ಅದು ಅಪರಾಧವಾಗಲಿದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ತಪ್ಪಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ. ರಾಜ್ಯದ ರೈತ ಚಳವಳಿ ಚಾರಿತ್ರಿಕ ಚಳವಳಿ. ಅದನ್ನು ನಾನು ಮುಂಚೂಣಿಯಲ್ಲಿ ಕಂಡಿದ್ದೇನೆ. ನಾನು ಭ್ರಷ್ಟಾಚಾರ ವಿರೋಧಿಸುವವನು, ನನ್ನ ನೈತಿಕತೆಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವವರು ಯಾವುದೇ ಕೋರ್ಚ್‌ನ ನ್ಯಾಯಾಧೀಶರಲ್ಲ. ವಿನಾಕಾರಣ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ. ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೇಳಿದ್ದೇನೆ. ಈ ಬಗ್ಗೆ ಅವರಿಗೆ ನೀಡಬೇಕಾದ ಮಾಹಿತಿ ಸಲ್ಲಿಸುತ್ತೇನೆ. ನಾನು ತಪ್ಪು ಮಾಡಿದ್ದಲ್ಲಿ ಕ್ರಮ ಆಗಬೇಕು. ಸರ್ಕಾರವು ನನ್ನ ಮೇಲಿನ ಆರೋಪದ ಬಗ್ಗೆ ಸ್ವತಂತ್ರ ಸಂಸ್ಥೆಗೆ ತನಿಖೆಗೆ ನೀಡಲಿ ಎಂದು ಕೋಡಿಹಳ್ಳಿ ಆಗ್ರಹಿಸಿದ್ದರು.

click me!