
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.22) : ಕೊಡಗು ಜಿಲ್ಲೆಯಲ್ಲಿ 2018 ಮತ್ತು 19 ರಲ್ಲಿ ಭೀಕರ ಭೂಕುಸಿತ ಪ್ರವಾಹ ಎದುರಾಗಿದ್ದು, ಆ ಘೋರ ದುರಂತದಲ್ಲಿ ಹತ್ತಾರು ಜನರ ಪ್ರಾಣ ಹೋಗಿದ್ದು ಗೊತ್ತೇ ಇದೆ. ಜೊತೆಗೆ ಸಾವಿರಾರು ಮನೆಗಳು ಕುಸಿದು ಬಿದ್ದರೆ, ಎಷ್ಟೋ ಮನೆಗಳು ಕಣ್ಮರೆಯಾದವು. ಇನ್ನೆಷ್ಟೋ ಮನೆಗಳು ತೀವ್ರ ಅಪಾಯದ ಸ್ಥಿತಿಗೆ ತಲುಪಿದ್ದವು. ಇದೆಲ್ಲವನ್ನು ಗಮನಿಸಿ ಮನೆ ಮಠ ಕಳೆದುಕೊಂಡ ಸಂತ್ರಸ್ಥರಿಗೆ ಅಂದಿನ ಸರ್ಕಾರ ಈಗಾಗಲೇ ವಿವಿಧೆಡೆ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಹಾಗೆ ಮನೆ ತೆಗೆದುಕೊಂಡವರಲ್ಲಿ ಕೆಲವರು ಮಡಿಕೇರಿ ನಗರದಲ್ಲಿರುವ ತಮ್ಮ ಹಳೆ ಅಪಾಯದ ಮನೆಗಳಿಗೆ ವಾಪಸ್ ಬಂದು ನೆಲೆಸಿದ್ದಾರೆ ಎನ್ನುವುದು ಈಗ ಗೊತ್ತಾಗಿದೆ.
ಹೌದು ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ, ಇಂದಿರಾನಗರ, ಮಂಗಳಾದೇವಿ ನಗರ ಮತ್ತು ಮಲ್ಲಿಕಾರ್ಜುನ ನಗರ ಸೇರಿದಂತೆ ವಿವಿಧೆಡೆ ಕೆಲವು ಕುಟುಂಬಗಳು ಸರ್ಕಾರದ ನೂತನ ಮನೆಗಳನ್ನು ಪಡೆದುಕೊಂಡರೂ, ಮತ್ತೆ ಅಪಾಯದಲ್ಲಿರುವ ಮನೆಗಳಿಗೆ ಬಂದು ನೆಲೆಸಿವೆ. ಇನ್ನು ಕೆಲವು ಕುಟುಂಬಗಳು ವಿವಿಧೆಡೆ ಪಡೆದುಕೊಂಡಿರುವ ಹೊಸ ಮನೆಗಳಲ್ಲಿ ವಯಸ್ಸಾದ ತಮ್ಮ ತಂದೆ ತಾಯಿ ವೃದ್ದರನ್ನು ಬಿಟ್ಟು ಮಡಿಕೇರಿಯಲ್ಲಿರುವ ಮನೆಗಳಿಗೆ ಅವರ ಮಕ್ಕಳು ಬಂದು ನೆಲೆಸಿದ್ದಾರೆ. ಇದೀಗ ಈ ವಿಷಯ ಮಡಿಕೇರಿ ನಗರಸಭೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಅಂತಹ ಕುಟುಂಬಗಳಿಗೆ ನೊಟೀಸ್ ನೀಡಲು ಮಡಿಕೇರಿ ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನೊಂದೇ ವಾರದಲ್ಲಿ ಮಳೆಗಾಲ ಆರಂಭವಾಗುತ್ತಿದ್ದು, ಮಡಿಕೇರಿ ನಗರದಲ್ಲಿ ಸುರಿಯುವ ಮಳೆಯಲ್ಲಿ ವಿಕೋಪಗಳು ಸಂಭವಿಸುವುದು ಸಾಮಾನ್ಯ ಸಂಗತಿಯಾಗಿವೆ. ಹೀಗಾಗಿ ಅಪಾಯದ ಪ್ರದೇಶಗಳೆಂದು ಗುರುತ್ತಿಸಲಾಗಿರುವ ಕಡೆಗಳ ಮನೆಗಳಿಗೆ ನಗರಸಭೆ ನೊಟೀಸ್ ನೀಡಲು ಸಿದ್ಧತೆ ನಡೆದಿದೆ.
ಇದನ್ನೂ ಓದಿ: ಕೊಡಗು ಜಿಲ್ಲೆಗೆ ಮತ್ತೆ ಭೂಕುಸಿತ ಆತಂಕ; ಪ್ರವಾಹ, ಭೂ-ಕುಸಿತ ಎದುರಿಸಲು ಜಿಲ್ಲಾಡಳಿತ ಸಿದ್ಧತೆ!
ಇನ್ನು ಕೆಲವರ ದುರಾಸೆ ಎಂದರೆ ಸರ್ಕಾರದಿಂದ ಪಡೆದಿರುವ ಮನೆಗಳಲ್ಲಿ ತಾವು ವಾಸವಾಗಿದ್ದು, ಮಡಿಕೇರಿ ನಗರದಲ್ಲಿ ಅಪಾಯದಲ್ಲಿ ಇರುವ ಮನೆಗಳನ್ನು ಬಾಡಿಗೆ ನೀಡಿದ್ದಾರೆ ಎನ್ನುವುದು ಗೊತ್ತಾಗಿದೆ. ಇಂತಹ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳಿಗೆ ವರದಿ ನೀಡುತ್ತೇವೆ ಎಂದು ಮಡಿಕೇರಿ ನಗರಸಭೆ ಆಯುಕ್ತ ರಮೇಶ್ ಹೇಳಿದ್ದಾರೆ.
2021-22 ರಲ್ಲಿಯೇ ಸಂತ್ರಸ್ಥರಿಗೆ ಸರ್ಕಾರ ನೂತನವಾಗಿ ಮನೆ ನಿರ್ಮಿಸಿಕೊಟ್ಟಾಗಲೇ ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ಅಪಾಯದಲ್ಲಿರುವ ಮನೆಗಳನ್ನು ತಮ್ಮ ವಶಕ್ಕೆ ಪಡೆಯಬೇಕಾಗಿತ್ತು. ಅಲ್ಲದೆ ಅವುಗಳನ್ನು ಕೆಡವಿ ಅಲ್ಲಿ ಅರಣ್ಯೀಕರಣದಂತೆ ಮಾಡಬೇಕಾಗಿತ್ತು. ಆದರೆ ಕೆಲವು ಕಡೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಜಾಣ ಕುರುಡುತನವೋ ಗೊತ್ತಿಲ್ಲ. ಸಂತ್ರಸ್ಥರಿಗೆ ಮನೆಗಳನ್ನು ಕೊಟ್ಟು ಮೂರ್ನಾಲ್ಕು ವರ್ಷಗಳೇ ಕಳೆದರೂ ಅಪಾಯದಲ್ಲಿರುವ ಮನೆಗಳನ್ನು ಇಂದಿಗೂ ಹಾಗೆಯೇ ಬಿಡಲಾಗಿದೆ. ಇದನ್ನೇ ದುರುಪಯೋಗ ಪಡಿಸಿಕೊಂಡಿರುವ ಕೆಲವರು ಅಪಾಯದ ಹಳೆಯ ಮನೆಗಳಿಗೆ ವಾಪಸ್ ಬಂದು ನೆಲೆಸಿದ್ದರೆ, ಇನ್ನು ಕೆಲವರು ಬಡವರಿಗೆ ಬಾಡಿಗೆ ನೀಡಿ ಅದರಿಂದ ಆದಾಯ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಮಲೆತಿರಿಕೆ ಬೆಟ್ಟದಲ್ಲಿ ಬಿರುಕು; ಮಳೆಗಾಲ ಬಂದ್ರೆ ಈ ಜನರಿಗೆ ನರಕ । Kodagu Rains
ಸದ್ಯ ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯಿಸಿರುವ ಮಡಿಕೇರಿ ನಗರಸಭೆ ಆಯುಕ್ತ ರಮೇಶ್ ಅವರು ಸದ್ಯ ನೊಟೀಸ್ ರೆಡಿ ಮಾಡಲಾಗಿದೆ. ಮಳೆಗಾಲ ಆರಂಭವಾಗುತ್ತಿರುವುದರಿಂದ ಕೂಡಲೇ ನೊಟೀಸ್ ನೀಡಲಾಗುವುದು. ಯಾರೆಲ್ಲಾ ಮತ್ತೆ ಬಂದು ಅಪಾಯದ ಮನೆಗಳಲ್ಲಿಯೇ ನೆಲೆಸಿದ್ದಾರೋ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ