
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು : ಅವನು ಸೈಲೆಂಟ್ ಆಗಿಯೇ ಇದ್ದರೂ ಸಮಾಜಘಾತುಕ ಶಕ್ತಿಗಳಿಗೆ ಸಿಂಹ ಸ್ಪಪ್ನವಾಗಿದ್ದ. ನೂರಾರು ವಿವಿಐಪಿಗಳ ರಕ್ಷಣೆ ಮತ್ತು ಭದ್ರತಾ ಕೆಲಸಗಳನ್ನು ಮಾಡುತ್ತಿದ್ದವನು. ಆ ಮೂಲಕವೇ ಇಡೀ ಪೊಲೀಸ್ ಇಲಾಖೆಯ ಹೃದಯ ಗೆದ್ದಿದ್ದ ಅವನು ತನ್ನ ಹೃದಯ ಬಡಿತವನ್ನೇ ನಿಲ್ಲಿಸಿಕೊಂಡು ಕರ್ತವ್ಯ ಮುಗಿಸಿ ಹೋಗಿದ್ದಾನೆ. ತನ್ನ ಹ್ಯಾಂಡ್ಲರ್ ಹೇಳಿದ ಮಾತನನ್ನು ಚಾಚೂ ತಪ್ಪದೆ ಶಿಸ್ತಿನ ಸಿಪಾಯಿಯಂತೆ ಕೇಳುವ ಪೃಥ್ವಿ, ತುಂಬಾ ಒಬಿಡಿಯಂಟ್ ಬಾಯ್. ಯಾವಾಗಲೂ ಅತೀ ಸಮಾಧಾನದಿಂದಲೇ ತನ್ನ ಕೆಲಸವನ್ನು ಒಂದಿನಿತು ತಪ್ಪಾಗದಂತೆ ಮಾಡಿ ಮುಗಿಸುತ್ತಿದ್ದವನು. ಆದರೆ ಸೋಮವಾರ ರಾತ್ರಿ ಇದ್ದಕ್ಕಿದ್ದಂತೆ ತನ್ನ ಕರ್ತವ್ಯವನ್ನು ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾನೆ. ಜೊತೆಗೆ ತನ್ನ ಪ್ರೀತಿಯ ಹ್ಯಾಂಡ್ಲರ್ ನನ್ನು ಒಬ್ಬಂಟಿಯನ್ನಾಗಿಸಿ ಹೋಗಿದೆ.
ಲಸಿಕೆ ಹಾಕಿಸಿಕೊಂಡರೂ ರೇಬೀಸ್ ಸೋಂಕು; ಮಲಪ್ಪುರಂನಲ್ಲಿ ಐದು ವರ್ಷದ ಬಾಲಕಿ ದಾರುಣ ಸಾವು
ಹೌದು ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸ್ಫೋಟಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 9 ವರ್ಷದ ಪೃಥ್ವಿ ಹೆಸರಿನ ಲ್ಯಾಬ್ರಡಾಲ್ ರಿಟ್ರಿವರ್ ತಳಿಯ ಶ್ವಾನ ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದೆ. ಕಳೆದ 8 ವರ್ಷಗಳಿಂದ ಸ್ಫೋಟಕ ಪತ್ತೆ ಕಾರ್ಯವನ್ನು ನಿರ್ವವಹಿಸುತ್ತಿದ್ದ ಅವನಿಗೆ ಕಳೆದ 8 ದಿನಗಳ ಹಿಂದೆ ಹೃದಯಾಘಾತವಾಗಿತ್ತಂತೆ. ಬಳಿಕ ಅದಕ್ಕೆ ನಿರಂತರವಾಗಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಪೊಲೀಸ್ ಇಲಾಖೆ ಶ್ವಾನದಳಕ್ಕೆ ಅಮೂಲ್ಯವಾಗಿದ್ದ ಅವನನ್ನು ಉಳಿಸಲೇಬೇಕೆಂದು ಪಶುವೈದ್ಯರು ಕೂಡ ತಮ್ಮ ಶಕ್ತಿ ಮೀರಿ ಚಿಕಿತ್ಸೆ ಮುಂದುವರಿಸಿದ್ದರು. ಅದ್ಯಾವುದೂ ಪ್ರಯೋಜನವಾಗದೆ ಪೃಥ್ವಿ ಇಹಲೋಕ ತ್ಯಜಿಸಿದೆ.
ತನ್ನ ಹ್ಯಾಂಡ್ಲರ್ ಆಗಿದ್ದ ಶಿವು ಅವರು ಮೂರು ದಿನಗಳಿಂದ ಬೇರೆಡೆ ಕರ್ತವ್ಯಕ್ಕೆ ಹೋಗಿದ್ದರು. ಅಂದಿನಿಂದಲೂ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಪೃಥ್ವಿ ತನ್ನ ಸ್ನೇಹಿತ ಬರುವವರೆಗೂ ಕಾದು ನಿನ್ನೆ ಶಿವು ಬರುತ್ತಿದ್ದಂತೆ ಆತನನ್ನು ಕಣ್ತುಂಬ ನೋಡಿ ಪ್ರಾಣಬಿಟ್ಟಿದ್ದಾನೆ. ಕಳೆದ 8 ವರ್ಷಗಳಿಂದ ಮಗುವಿನಂತೆ ತನ್ನೊಂದಿಗಿದ್ದ ಪೃಥ್ವಿ ಇನ್ನು ಮುಂದೆ ಇಲ್ಲ ಎನ್ನುವುದನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಪೃಥ್ವಿ ಕೆಲಸಗಳು ಎಂತಹ ದೊಡ್ಡ ದೊಡ್ಡ ಅಧಿಕಾರಿಗಳೇ ಮೆಚ್ಚುವಂತಹವುಗಳಾಗಿದ್ದವು. ದೇಶದ ಪ್ರಧಾನಿಯ ಭದ್ರತೆ ಕೆಲಸದಿಂದ ಹಿಡಿದು, ರಷ್ಯಾದ ಅಧ್ಯಕ್ಷರೇ ಬಂದರೂ ಅವರ ಭದ್ರತೆಯ ಕೆಲಸವನ್ನೂ ಅತ್ಯಂತ ಸ್ಥಿತಿನಿಂದ ಮಾಡುತ್ತಿದ್ದ.
ಜಗತ್ತಿನ ಅತ್ಯಂತ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿಗನ ಬಂಡವಾಳ ಬಯಲು ಮಾಡಿದ ಇಡಿ!
ಇಂತಹ ಭದ್ರತೆಯ 500 ಕ್ಕೂ ಹೆಚ್ಚು ಕರ್ತವ್ಯಗಳನ್ನು ನಿಭಾಯಿಸಿದ್ದ ಪೃಥ್ವಿ, ಹಲವಾರು ಪ್ರಶಸ್ತಿ ಗೌರವಗಳನ್ನು ಸಂಪಾದಿಸಿದ್ದ. ಹೀಗೆ ಇಲಾಖೆಯಲ್ಲಿ ಉತ್ತಮ ಕರ್ತವ್ಯ ಮಾಡಿ ಒಳ್ಳೆಯ ಹೆಸರು ಸಂಪಾದಿಸಿದ್ದ ಪೃಥ್ವಿಗೆ ಕೊಡಗು ಪೊಲೀಸ್ ಇಲಾಖೆ ಅಶ್ರುತರ್ಪಣ ಸಲ್ಲಿಸಿದೆ. ಡಿಆರ್ ಮೈದಾನದಲ್ಲಿ ಪೃಥ್ವಿ ಪೊಲೀಸ್ ಇಲಾಖೆ ಅಂತಿಮ ನಮನ ಸಲ್ಲಿಸಿದೆ. ಪೂಜೆ ಸಲ್ಲಿಸಿ ಮೂರು ಸುತ್ತು ಕುಶಾಲ ತೋಪು ಸಿಡಿಸಿ ಪೊಲೀಸ್ ಸರ್ಕಾರಿ ಗೌರವ ಸಲ್ಲಿಸಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಮಡಿದ ಪೃಥ್ವಿ ಹೂವುಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ತಾನು ಹುಟ್ಟಿದ ಆರು ತಿಂಗಳಿಗೆ ಪೊಲೀಸ್ ಇಲಾಖೆ ಸೇರಿ ಕೊನೆ ಉಸಿರು ಇರುವವರೆಗೆ ಪೊಲೀಸ್ ಇಲಾಖೆಗಾಗಿ ದುಡಿದ ಪೃಥ್ವಿ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಹೀಗೆ ಎಲ್ಲರನ್ನು ಬಿಟ್ಟು ಹೋಗಿರುವುದು ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ