ನಾಯಿ ಮೂತ್ರ ಮಾಡಿದ ಔಷಧಿ ಕೊಡುವ ಮಡಿಕೇರಿ ಜಿಲ್ಲಾಸ್ಪತ್ರೆ: ಜನರ ಜೀವದ ಜೊತೆಗೆ ಚೆಲ್ಲಾಟ

By Sathish Kumar KH  |  First Published Aug 1, 2023, 7:20 PM IST

ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಸಂಗ್ರಹಿಸಲಾದ ಔಷಧಿಗಳ ಮೇಲೆ ನಾಯಿಗಳು ಮಲಗಿ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇಂತಹ ಔಷಧಿಗಳನ್ನು ಜನರಿಗೆ ಕೊಟ್ಟು ಜೀವದೊಂದಿಗೆ ಚೆಲ್ಲಾಟ ಆಸ್ಪತ್ರೆ ಸಿಬ್ಬಂದಿ ಆಡುತ್ತಿದ್ದಾರೆ. 


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಆ.01): ಬಡವರ್ಗದ ಜನರ ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಸರ್ಕಾರವೇನೋ ಎಲ್ಲಾ ಅಸ್ಪತ್ರೆಗಳಿಗೆ ಉಚಿತವಾಗಿ ಔಷಧಿಗಳನ್ನು ಸರಬರಾಜು ಮಾಡುತ್ತಿದೆ. ಆದ್ರೆ ಈ ಔಷಧಿಗಳು ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸಿಗುವ ಬದಲು ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯ ಔಷಧಿಗಳು ವ್ಯರ್ಥವಾಗಿ ಬಿದ್ದು ಹಾಳಾಗುತ್ತಿವೆ. ಔಷಧಿಗಳ ಮೇಲೆ ನಾಯಿಗಳು ಮಲಗಿ ಸುಸ್ಸು ಮಾಡಿದ್ದು, ಅವುಗಳನ್ನೇ ಜನರಿಗೆ ಕೊಡಲಾಗುತ್ತಿದೆ ಎಂದು ಕೇಳಿಬಂದಿದೆ. 

Tap to resize

Latest Videos

undefined

ಹೌದು, ರೋಗಿಗಳ ಚಿಕಿತ್ಸೆಗೆ ಕೊಡಬೇಕಾಗಿದ್ದ ಔಷಧಿಗಳು ಕೊಳಕು ಕೊಳಕಾಗಿ ಬಿದ್ದು ಹಾಳಾಗುತ್ತಿವೆ. ಇದು ಕೊಡಗು ಜಿಲ್ಲಾಸ್ಪತ್ರೆಯ ಕರ್ಮಕಾಂಡ. ಸಾರ್ವಜನಿಕರು ಓಡಾಡುವ ಜಾಗದಲ್ಲೇ ವಿವಿಧ ಔಷಧಿಗಳ ಬಾಕ್ಸ್ ಗಳು ಬಿದ್ದಿವೆ. ಅದು ಕೂಡ ಸಾಕಷ್ಟು ಔಷಧಿಗಳು, ಗ್ಲೂಕೋಸ್ ಬಾಟಲ್ ಗಳು ಒಡೆದಿದ್ದು, ಚರಂಡಿ ನೀರಿನಂತೆ ಹರಿಯುತ್ತಿವೆ. ಅದಕ್ಕಿಂತ ವಿಪರ್ಯಾಸವೆಂದರೆ ಶೇಖರಣೆ ಮಾಡಿರುವ  ಔಷಧಿಗಳ ಮೇಲೆ ನಾಯಿಯೊಂದು ಹೋಗಿ ಮಲಗಿದ್ದರೂ ಅದರ ಬಗ್ಗೆ ಗಮನ ಹರಿಸುವವರೇ ಇಲ್ಲ. ಬಡ ಜನರ ಚಿಕಿತ್ಸೆಗೆ ಸಿಗಬೇಕಾಗಿದ್ದ ಔಷಧಿಗಳು ಹೀಗೆ ಬಿದ್ದು ಹಾಳಾಗುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಒಂದೇ ಕಾಫಿ ಎಸ್ಟೇಟ್‌ನಲ್ಲಿ ಬೀಡುಬಿಟ್ಟ 16 ಕಾಡಾನೆಗಳು: ಜೀವ ಭಯದಲ್ಲಿ ರೈತರು

ಹಾಸನ, ಮೈಸೂರು ಜಿಲ್ಲೆಯ ಜನರಿಗೂ ಅನಾರೋಗ್ಯ ಖಚಿತ: ಈ ಆಸ್ಪತ್ರೆಗೆ ಕೊಡಗು ಜಿಲ್ಲೆ ಮಾತ್ರವಲ್ಲ, ಹಾಸನ, ಮೈಸೂರು ಗ್ರಾಮೀಣ ಭಾಗದ ಬಡವರ್ಗದ ಜನರು ಅನಾರೋಗ್ಯಕ್ಕೆ ತುತ್ತಾದರೆ ಇದೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಇಲ್ಲಿ ಕೊಡುವ ಉಚಿತ ಔಷಧಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದ್ರೆ ಹೀಗೆ ರೋಗಿಗಳಿಗೆ ಕೊಡುವ ಔಷಧಿಗಳು ಈ ಆಸ್ಪತ್ರೆಯ ಒಳಗೆ ಮೂಲೆಗುಂಪುಗಳಾಗಿ ಸಾರ್ವಜನಿಕರು ಓಡಾಡುವ ಜಾಗದಲ್ಲೇ ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ‌ಕೊಡಗಿನಲ್ಲಿ ಸಾಕಷ್ಟು ಮಳೆ ಸುರಿಯುತ್ತಿರುವುದರಿಂದ ಔಷಧಿಗಳ ಬಾಕ್ಸ್ ಗಳ ಮೇಲೆ ಪಾಚಿ ಬೆಳೆಯಲಾರಂಭಿಸಿದೆ. ಔಷಧಿ ಬಾಕ್ಸ್ ಗಳಿಂದ ಟಾನಿಕ್‌ಗಳು ಸೋರಿಕೆಯಾಗಿ ನೆಲದ‌ ಮೇಲೆಯೇ ಹರಿಯುತ್ತಿದೆ. 

ಔಷಧಿ ಬಾಕ್ಸ್‌ಗಳ ಮೇಲೆ ಮಲ, ಮೂತ್ರ ವಿಸರ್ಜನೆ: ಮತ್ತೊಂದೆಡೆ ಈ ಔಷಧಿಗಳ ಬಾಕ್ಸ್ ನ ಶೇಖರಣೆ ಮಾಡಿರುವ ಜಾಗದಲ್ಲಿ ಬೀದಿ ನಾಯಿಗಳು ತಮ್ಮ ಆವಾಸ ಸ್ಥಾನ ಮಾಡಿಕೊಂಡಿವೆ. ಔಷಧಿ ಬಾಕ್ಸ್ ಗಳ ಮೇಲೆಯೇ ಮಲ ವಿಸರ್ಜನೆ ಮಾಡುತ್ತಿವೆ. ಹೀಗಾಗಿ, ಸಾಮಾನ್ಯ ಜನರಿಗೆ ಸಿಕ್ಕುವ ಈ ಔಷಧಿಗಳು ಎಷ್ಟರಮಟ್ಟಿಗೆ ಶುಚಿಯಾಗಿರುತ್ತವೆ ಎನ್ನುವ ಅನುಮಾನ ಎದುರಾಗಿದೆ. ಹೀಗಾಗಿ, ಜಿಲ್ಲಾಸ್ಪತ್ರೆ ವಿರುದ್ಧ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಔಷಧಿಗಳ ಪರಿಸ್ಥಿತಿ ಹೀಗಾದರೆ, ಮತ್ತೊಂದೆಡೆ ಜಿಲ್ಲಾ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಸೋಮವಾರ ಮಧ್ಯಾಹ್ನದಿಂದ ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತ್ತಿರುವುದರಿಂದ ಆಸ್ಪತ್ರೆಯ ಡಯಾಲಿಸಸ್ ರೋಗಿಗಳು ಪರದಾಡುವಂತೆ ಆಗಿದೆ. ಅಲ್ಲದೇ ಕತ್ತಲೆಯಲ್ಲೇ ಜಿಲ್ಲಾ ಅಸ್ಪತ್ರೆ ಕೆಲಕಾಲ ಕತ್ತಲೆಯಲ್ಲೇ ಮುಳುಗಿತ್ತು. 

ಭದ್ರಾವತಿಯಲ್ಲಿ ಮತ್ತೆ ಸುವರ್ಣಯುಗ ಆರಂಭ: ವಿಐಎಸ್‌ಎಲ್‌ ಬಾರ್‌ಮಿಲ್‌ ಆ.10ರಿಂದ ಶುರು

ಆಸ್ಪತ್ರೆಯಲ್ಲಿ ಕೊಠಡಿಗಳ ಸಮಸ್ಯೆಯಿದೆ ಎನ್ನುವ ಡೀನ್‌: ಈ ಬಗ್ಗೆ ಜಿಲ್ಲಾ ಆಸ್ಪತ್ರೆಯ ಡೀನ್ ಕಾಲ್ಯಪ್ಪ ಅವರನ್ನು ಕೇಳಿದ್ರೆ ಆಸ್ಪತ್ರೆಯಲ್ಲಿ ಭಾರಿ ಬೆಲೆ ಬಾಳುವ ಔಷಧಿಗಳನ್ನು ಔಷಧಿ ಉಗ್ರಾಣ ಕೇಂದ್ರದಲ್ಲಿ ಇಡಲಾಗಿದೆ. ಇಲ್ಲಿ ಕೆಲವೊಂದು ಡ್ರಗ್ಸ್‌ಗಳಾದ ಕೈಯಿಗೆ ಹಾಕುವ ಗ್ಲೌಸ್‌ ಮುಂತಾದವರನ್ನು ಶೇಖರಣೆ ಮಾಡಲಾಗಿದೆ. ನಮ್ಮ ಆಸ್ಪತ್ರೆಗೆ ಕೊಠಡಿಗಳ ಸಮಸ್ಯೆ ಇರುವುದರಿಂದ ಈ ರೀತಿಯ ಸಮಸ್ಯೆ ಆಗಿರಬಹುದು. ಅಲ್ಲದೇ ವಿದ್ಯುತ್ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸುವುದಾಗಿಯೂ ತಿಳಿಸಿದ್ದಾರೆ. 

ಒಟ್ಟಿನಲ್ಲಿ ಬಡವರ್ಗದ ಜನರ ಆರೋಗ್ಯವನ್ನು ಕಾಪಾಡುವ ಔಷಧಿಗಳು ಈ ರೀತಿಯಲ್ಲಿ ಹಾಳಾಗುತ್ತಿರುವುದರಿಂದ ಸಾರ್ವಜನಿಕರು ಜಿಲ್ಲಾ ಅಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಆರೋಗ್ಯ ಸಚಿವರು ಸ್ಥಳೀಯ ಶಾಸಕರು ಇತ್ತ ಗಮನಹರಿಸಬೇಕಿದೆ.

click me!