ಕೊಡಗು ಜಿಲ್ಲೆಯಲ್ಲಿ 2019ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮನೆ ಕಳೆದುಕೊಂಡು 5 ವರ್ಷವಾದರೂ ಸಂತ್ರಸ್ಥರಿಗೆ ಸರ್ಕಾರದಿಂದ ಇನ್ನೂ ಮನೆಯನ್ನು ಕಲ್ಪಿಸಿಕೊಟ್ಟಿಲ್ಲ. ಮಳೆ ಬಂದರೆ ಜೀವ ಕೈಲಿಡಿದು ಜೀವನ ನಡೆಸುವಂತಾಗಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.17): ಕೂಲಿ ಮಾಡಿ ಬಾಡಿಗೆ ಕಟ್ಟಲಾಗುತ್ತಿಲ್ಲ ಎಂದು ದಯಾಮರಣಕ್ಕೆ ಮನವಿ ಮಾಡಿ ಕಾಯುತ್ತಿರುವ ವೃದ್ಧೆ. ಬಾಡಿಗೆ ಕಟ್ಟಲಾಗದೆ ಜೀವ ಹೋದರೆ ಹೋಗಿಯೇ ಬಿಡಲೆಂದು ಮತ್ತದೇ ಹೊಳೆ ದಂಡೆಯಲ್ಲಿ ಪ್ಲಾಸ್ಟಿಕ್ ಹೊದಿಕೆ ಗುಡಿಸಲುಗಳಲ್ಲಿ ಕಾಲ ದೂಡುತ್ತಿರುವ ಕುಟುಂಬಗಳು. ಇಂದು ಮನೆ ಸಿಗುತ್ತೆ, ನಾಳೆ ಸಿಗುತ್ತೇ ಎಂದು ಕಾಯುತ್ತಲೇ ಬಾಡಿಗೆ ಮನೆಯಲ್ಲೇ ಪ್ರಾಣ ಬಿಡುತ್ತಿರುವ ಹಿರಿಯ ಜೀವಗಳು. ಇದು ಕೊಡಗು ಜಿಲ್ಲೆಯಲ್ಲಿ 2019 ರ ಕಾವೇರಿ ಪ್ರವಾಹದಲ್ಲಿ ಮನೆ ಕಳೆದುಕೊಂಡು ಇಂದಿಗೂ ಸ್ವಂತ ಸೂರಿಲ್ಲದೆ ನರಳುತ್ತಿರುವ ಕುಟುಂಬಗಳ ವ್ಯಥೆ.
ನಾಡಿನುದ್ದಕ್ಕೂ ಹರಿದು ಜೀವ ಕಳೆ ತುಂಬುವ ಕಾವೇರಿ ನದಿ 2019 ರಲ್ಲಿ ಮುನಿದು ರುದ್ರಾವತಾರ ಪಡೆದಿದ್ದಳು. ಉಕ್ಕಿ ಹರಿದು ಎದುರಾದ ಪ್ರವಾಹದಲ್ಲಿ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮದ 140 ಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದವು. ಆದರೆ ಇಂದಿಗೂ ಆ ಕುಟುಂಬಗಳಿಗೆ ಮನೆ ಅಥವಾ ಪರಿಹಾರ ನೀಡಿಲ್ಲ. ಅದಕ್ಕೆ ಕಾರಣ ಹೊಳೆ ಬದಿಯಲ್ಲಿ ಮನೆ ಕಟ್ಟಿಕೊಂಡಿದ್ದರಿಂದ ಅವರ ಮನೆಗಳಿಗೆ ಯಾವುದೇ ದಾಖಲೆಗಳಿರಲಿಲ್ಲ ಎನ್ನುವ ಕಾರಣಕ್ಕೆ ಮನೆ, ಪರಿಹಾರ ಕೊಡಲಿಲ್ಲ. ಮನೆ ಕಳೆದುಕೊಂಡಿರುವವರಿಗೆ ಬಾಡಿಗೆ ಕೊಡುವುದಾಗಿ ಹೇಳಿದ್ದ ಸರ್ಕಾರ ನಯಾಪೈಸೆ ಬಾಡಿಗೆಯನ್ನು ಕೊಡಲಿಲ್ಲ. ಒಂದಷ್ಟು ಕುಟುಂಬಗಳು ಕೂಲಿ ಕೆಲಸ ಮಾಡಿ ಬಾಡಿಗೆ ಕಟ್ಟಿ ಜೀವನ ನಡೆಸುತ್ತಿದ್ದರೆ, ದುಡಿಯಲು ಸಾಧ್ಯವಾಗದ ವೃದ್ಧರು ದಿಕ್ಕುತೋಚದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
undefined
Temple Mobile Ban:ಕರ್ನಾಟಕದ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧ
ಬಾಡಿಗೆ ಕಟ್ಟಲಾಗದೇ ದಯಾಮರಣಕ್ಕೆ ಪತ್ರ ಬರೆದ ಕುಟುಂಬ: ಕುಂಬಾರಗುಂಡಿ ಗ್ರಾಮದ ಶಾಂತಿ ಎಂಬುವರು ಕೂಲಿ ಮಾಡಿ ಬಾಡಿಗೆ ಕಟ್ಟಲಾಗದೆ ಮನೆ ಕೊಡಿ, ಇಲ್ಲವೆ ದಯಾಮರಣ ನೀಡಿ ಎಂದು ಶಾಂತ ಎಂಬುವವರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಕೂಲಿ ಮಾಡಿ ಬಾಡಿಗೆ ಕಟ್ಟಲಾಗದೆ, ಬೇರೆ ದಾರಿಯೂ ಕಾಣದ ಇನ್ನಷ್ಟು ಕುಟುಂಬಗಳು ಪ್ರವಾಹದಲ್ಲಿ ತಮ್ಮ ಮನೆಗಳು ಕೊಚ್ಚಿ ಹೋಗಿರುವ ಜಾಗದಲ್ಲಿಯೇ ಮತ್ತೆ ಪ್ಲಾಸ್ಟಿಕ್ ಹೊದಿಕೆಗಳನ್ನು ಹೊದಿಸಿ ಶೆಡ್ಗಳನ್ನು ನಿರ್ಮಿಸಿಕೊಂಡು ಬದುಕು ದೂಡುತ್ತಿವೆ. ಚಿಕ್ಕಮಕ್ಕಳು, ವೃದ್ಧರೂ ಇದೇ ಶೆಡ್ಗಳಲ್ಲಿ ಕಾಲ ದೂಡುತಿದ್ದು ಮಳೆ ಜೋರಾಗಿ ಸುರಿದಾಗಲೆಲ್ಲಾ ಜೀವ ಕೈಯಲ್ಲಿಡಿದು ಜೀವನ ಸಾಗಿಸುತ್ತಿದ್ದಾರೆ.
ಸರ್ಕಾರ ತೋರಿಸಿದ ಜಾಗದಲ್ಲಿ ಮೂಲಸೌಕರ್ಯಗಳಿಲ್ಲ: ಪ್ರವಾಹದ ಸಂದರ್ಭ ನೆಲ್ಯಹುದಿಕೇರಿ ಶಾಲೆಯಲ್ಲಿ ತೆರೆದಿದ್ದ ಕಾಳಜಿ ಕೇಂದ್ರ ಸೇರಿದ್ದ ಈ ಕುಟುಂಬಗಳು ನಮಗೆ ಶಾಶ್ವತ ಸೂರು ಕಲ್ಪಿಸುವವರೆಗೆ ಕಾಳಜಿ ಕೇಂದ್ರ ಬಿಟ್ಟು ಹೋಗುವುದಿಲ್ಲ ಎಂದು ಒಂದುವರೆ ತಿಂಗಳಿಗೂ ಹೆಚ್ಚು ಕಾಲ ನಿರಂತರ ಧರಣಿ ನಡೆಸಿದ್ದರು. ಅವರ ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ಪ್ರತೀ ಕಟುಂಬಕ್ಕೆ ತಲಾ 5 ಲಕ್ಷ ರೂಪಾಯಿಯನ್ನು ಮನೆ ನಿರ್ಮಿಸುವುದಕ್ಕಾಗಿ ಬಿಡುಗಡೆ ಮಾಡಿತ್ತು. ಜೊತೆಗೆ ನಿವೇಶನ ಇಲ್ಲದಿದ್ದರಿಂದ ಕೊಡಗು ಜಿಲ್ಲಾಡಳಿತ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡಿನಲ್ಲಿ 8.5 ಎಕರೆ ಸರ್ಕಾರಿ ಜಾಗವನ್ನು ಈ ಸಂತ್ರಸ್ಥ ಕುಟುಂಬಗಳಿಗಾಗಿ 4 ವರ್ಷಗಳ ಹಿಂದೆಯೇ ಗುರುತ್ತಿಸಿತ್ತು. ಆದರೆ ಇಂದಿಗೂ ಅದನ್ನು ಬಡಾವಣೆಯಾಗಿ ಪರಿವರ್ತಿಸಿಲ್ಲ.
ಬಡಾವಣೆ ನಿರ್ಮಾಣಕ್ಕೆ 8 ಕೋಟಿ ರೂ. ಬೇಕು: ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡಿನಲ್ಲಿ ವಿದ್ಯುತ್ ಸಂಪರ್ಕ, ರಸ್ತೆ, ಚರಂಡಿ ಮತ್ತು ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಸೌಕರ್ಯವಿಲ್ಲ. ಬಡಾವಣೆಗೆ ಹೋಗಲು ಸೇತುವೆಯೊಂದನ್ನು ನಿರ್ಮಿಸುವ ಅಗತ್ಯವಿತ್ತು. ಅದನ್ನು ನಿರ್ಮಿಸುವುದಕ್ಕೂ ಸಂತ್ರಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನು ಬಡಾವಣೆಯಾಗಿ ಪರಿವರ್ತಿಸಲು ಅಂದಾಜು 8 ಕೋಟಿಯಷ್ಟು ಹಣದ ಅಗತ್ಯವಿದೆ. ಈ ಸಂಬಂಧ ವ್ಯಾಲ್ನೂರು ಗ್ರಾಮ ಪಂಚಾಯಿತಿ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಪಿಡಿಓ ಅನಿಲ್ ಹೇಳುತ್ತಾರೆ.
ಭೀಮನ ಅಮವಾಸ್ಯೆ: ಪಾದಪೂಜೆ ಮಾಡದೇ ತವರಿನಲ್ಲಿದ್ದ ಪತ್ನಿಯನ್ನು ಕಿಡ್ನಾಪ್ ಮಾಡಿದ ಪತಿರಾಯ
ಅನುದಾನ ಕೊಟ್ಟರೆ ಮನೆ, ಇಲ್ಲವೆಂದರೆ ಶೆಡ್ ಗತಿ: ಸರ್ಕಾರ ಈ ಅನುದಾನ ನೀಡಿದರೆ ಮಾತ್ರವೇ ಈ ಕುಟುಂಬಗಳು ಸರ್ಕಾರ ಗುರುತ್ತಿಸಿರುವ ಜಾಗದಲ್ಲಿ ನೆಲೆ ನಿಲ್ಲಲು ಸಾಧ್ಯ. ಇಲ್ಲದಿದ್ದರೆ ಇದೇ ಅತಂತ್ರ ಸ್ಥಿತಿಯಲ್ಲೇ ನೂರಾರು ಕುಟುಂಬಗಳು ಜೀವನ ನಡೆಸಬೇಕಾಗುತ್ತದೆ ಎನ್ನುವುದು ಹೋರಾಟಗಾರ ಪಿ.ಆರ್ ಭರತ್ ಅವರ ಆಕ್ರೋಶ. 2019 ರಲ್ಲಿ ಪ್ರವಾಹ ಎದುರಾಗಿ ಜನರು ಕಾಳಜಿ ಕೇಂದ್ರದಲ್ಲಿದ್ದಾಗ ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಕೂಡ ಈ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಶಾಶ್ವತ ಸೂರಿಗಾಗಿ ಒತ್ತಾಯ ಮಾಡುತ್ತೇನೆ ಎಂದು ಸಂತ್ರಸ್ಥರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು. ಇಂದು ಅವರೇ ರಾಜ್ಯದ ಸಿಎಂ ಆಗಿದ್ದು 140 ಕುಟುಂಬಗಳ ಬಗ್ಗೆ ಗಮನ ಹರಿಸುತ್ತಾರಾ ಕಾದು ನೋಡಬೇಕಾಗಿದೆ.