ನಾಳೆಯಿಂದ ದೆಹಲಿಯಲ್ಲಿ ನಂದಿನಿ ಹಾಲು ಮಾರಾಟ ಆರಂಭ; ಅಮುಲ್, ಮದರ್ ಡೈರಿಗೆ ನಡುಕ!

By Sathish Kumar KH  |  First Published Nov 20, 2024, 1:15 PM IST

ಕರ್ನಾಟಕ ಹಾಲು ಒಕ್ಕೂಟ (KMF) ನಂದಿನಿ ಹಾಲು ಮತ್ತು ಮೊಸರನ್ನು ದೆಹಲಿಗೆ ಪರಿಚಯಿಸುತ್ತಿದೆ. ನವೆಂಬರ್ 26 ರಂದು ಬೆಂಗಳೂರಿನಲ್ಲಿ ನಂದಿನಿ ಬ್ರ್ಯಾಂಡ್‌ನ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಲಾಗುವುದು.


ಬೆಂಗಳೂರು (ನ.20): ಕರ್ನಾಟಕ ಹಾಲು ಒಕ್ಕೂಟ (KMF), ನಂದಿನಿ ಬ್ರಾಂಡ್‌ನಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ, ಹಾಲು ಮತ್ತು ಮೊಸರಿನಂತಹ ತಾಜಾ ಡೈರಿ ಉತ್ಪನ್ನಗಳೊಂದಿಗೆ ನವದೆಹಲಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಾಳೆ (ನವೆಂಬರ್ 21) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಂದಿನಿ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ. ಜೊತೆಗೆ, ನವೆಂಬರ್ 26 ರಂದು ಬೆಂಗಳೂರಿನಲ್ಲಿ ನಂದಿನಿ ಬ್ರ್ಯಾಂಡ್‌ನ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಪರಿಚಯಿಸುತ್ತಿದೆ.

ಈ ಬಗ್ಗೆ ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್ ಅವರು, ಕರ್ನಾಟಕ ಹಾಲು ಒಕ್ಕೂಟ (KMF) ತನ್ನ ಉತ್ಪನ್ನಗಳನ್ನು ಕರ್ನಾಟಕ, ಮಹಾರಾಷ್ಟ್ರದ ಮುಂಬೈ, ನಾಗ್ಪುರ, ಪುಣೆ ಮತ್ತು ಸೊಲ್ಲಾಪುರ, ಗೋವಾ, ಹೈದರಾಬಾದ್, ಚೆನ್ನೈ ಮತ್ತು ಕೇರಳದಲ್ಲಿ ಮಾರಾಟ ಮಾಡುತ್ತಿದೆ. ಇದೀಗ ನಂದಿನಿ ಹಾಲಿನ ಮಾರುಕಟ್ಟೆಯನ್ನು ದೆಹಲಿಗೆ ವಿಸ್ತರಣೆ ಮಾಡಲಾಗುತ್ತುದೆ. ದೆಹಲಿಯಲ್ಲಿ ನಂದಿನಿ ಬ್ರ್ಯಾಂಡ್ ಹಾಲು ಇನ್ನುಮುಂದೆ ಗುಜರಾತ್‌ನ ಅಮುಲ್ ಹಾಲಿನೊಂದಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲಿದೆ. ದೆಹಲಿಯಲ್ಲಿ ಪ್ರಸ್ತುತ ಮದರ್ ಡೈರಿ, ಅಮುಲ್, ಮಧುಸೂದನ್ ಮತ್ತು ನಮಸ್ತೆ ಇಂಡಿಯಾ ಸೇರಿ ಕೆಲವು ಬ್ರ್ಯಾಂಡ್‌ನ ಹಾಲುಗಳು ಮಾತ್ರ ಪ್ರಾಬಲ್ಯ ಹೊಂದಿದೆ. ಇದೀಗ ದೆಹಲಿಗೆ ಕೆಎಂಎಫ್ ಸಂಸ್ಥೆಯ ಮಂಡ್ಯ ಹಾಲು ಒಕ್ಕೂಟದಿಂದ ದೆಹಲಿಗೆ ಹಾಲನ್ನು ಸರಬರಾಜು ಮಾಡುವ ಟೆಂಡರ್‌ ಅನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

Tap to resize

Latest Videos

undefined

ಸದ್ಯಕ್ಕೆ ನಾವು ಪ್ರಾಯೋಗಿಕವಾಗಿ ದೆಹಲಿಗೆ ಹಾಲನ್ನು ಕಳಿಸುತ್ತಿದ್ದೇವೆ. ರಸ್ತೆಯ ಮೂಲಕ ಮಂಡ್ಯದಿಂದ ದೆಹಲಿಗೆ ಹಾಲನ್ನು ಕಳಿಸಲು 54 ಗಂಟೆಗಳ ಕಾಲ ತೆಗೆದುಕೊಂಡಿತು. ಆದರೆ, ಈ ಅವಧಿಯಲ್ಲಿ ಯಶಸ್ವಿಯಾಗಿ ಹಾಲನ್ನು ಕೆಸದಂತೆ ಸರಬರಾಜು ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇನ್ನು, ಹಾಲಿನ ಗುಣಮಟ್ಟವನ್ನೂ ಕಾಪಾಡಿಕೊಳ್ಳಲಾಗಿದೆ. ಹೀಗಾಗಿ, ಮಂಡ್ಯದಿಂದ ದೆಹಲಿ ಮತ್ತು ಹರಿಯಾಣದ ಭಾಗಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಲು ಸಾಗಿಸಲು 2,190 ಟ್ಯಾಂಕರ್‌ಗಳನ್ನು ಬಳಸಲು ಕೆಎಂಎಫ್ ಯೋಜನೆಯನ್ನು ರೂಪಿಸಿಕೊಂಡಿದೆ. ಇನ್ನು ಹಾಲಿನ ಟ್ಯಾಂಕರ್‌ಗಳು ಸುಮಾರು 2,400–2,500 ಕಿಮೀ ಒಂದು ಬದಿಯಲ್ಲಿ ಸಾಗಬೇಕಾಗುತ್ತದೆ. ಹೀಗಾಗಿ, ಹಾಲು ತಾಜಾವಾಗಿ ಉಳಿಸಿಕೊಳ್ಳಲು ಗುಣಮಟ್ಟದ ನಿಯಂತ್ರಣಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಅಧಿಕಾರಿ ತಿಳಿಸಿದ್ದಾರೆ.

ಕರ್ನಾಟಕ ಹಾಲು ಒಕ್ಕೂಟವು ರಾಜ್ಯದ 22,000 ಹಳ್ಳಿಗಳಲ್ಲಿ 15 ಉಪ ಒಕ್ಕೂಟಗಳು, 24 ಲಕ್ಷ ಹಾಲು ಉತ್ಪಾದಕರು ಮತ್ತು 14,000 ಸಹಕಾರಿ ಸಂಘಗಳ ವ್ಯಾಪಕ ಜಾಲವನ್ನು ಹೊಂದಿದೆ. ಇದರಿಂದ ಪ್ರತಿದಿನ 8.4 ಮಿಲಿಯನ್ ಲೀಟರ್ ಹಾಲನ್ನು ಉತ್ಪಾದಿಸಿ ಸಂಸ್ಕರಣ ಮಾಡಲಾಗುತ್ತದೆ. ಜೊತೆಗೆ, ದಿನನಿತ್ಯ 65ಕ್ಕೂ ಹೆಚ್ಚು ಹಾಲಿನ ಉಪ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಕೆಎಂಎಫ್ ಒಕ್ಕೂಟ ರೈತರಿಗೆ ಪ್ರತಿದಿನ 17 ಕೋಟಿ ರೂ. ಹಣವನ್ನು ನೀಡುತ್ತದೆ. ಜೊತೆಗೆ, 2021-22 ರಲ್ಲಿ ಸುಮಾರು 19,800 ಕೋಟಿ ರೂ. ವಹಿವಾಟನ್ನು ವರದಿ ಮಾಡಿದೆ.

ಬೆಂಗಳೂರಿನಲ್ಲಿ ನಂದಿನಿ ಇಡ್ಲಿ-ದೋಸಾ ಹಿಟ್ಟು ಪಾದಾರ್ಪಣೆ: ಈಗಾಗಲೇ ಬೆಂಗಳೂರಿನಲ್ಲಿ ಐಡಿ, ಅಸಲ್ ಮತ್ತು ಎಂಟಿಆರ್‌ನಂತಹ ಖಾಸಗಿ ಸಂಸ್ಥೆಗಳು ರೆಡಿಮೇಡ್ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಪೂರೈಸುವ ಮೂಲಕ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿವೆ. ಇದೀಗ ಬೆಂಗಳೂರಿನ ಮಾರುಕಟ್ಟೆಯಲ್ಲಿ ನವೆಂಬರ್ 26ರಿಂದ ಕೆಎಂಎಫ್ ಸಂಸ್ಥೆಯು ನಂದಿನಿ ಬ್ರಾಂಡ್‌ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಲಿದೆ. ಇನ್ನು ನೀಲಿ 900-ಗ್ರಾಂ ಪೌಚ್‌ನಲ್ಲಿ ಪ್ಯಾಕ್ ಮಾಡಲಾದ ಹಿಟ್ಟಿನಿಂದ 18 ಇಡ್ಲಿಗಳು ಅಥವಾ 12-14 ದೋಸೆಗಳನ್ನು ಮಾಡಬಹುದು. ಬೆಂಗಳೂರಿನ ಜನರಿಗೆ ತ್ವರಿತ ಉಪಹಾರ ಆಯ್ಕೆಗಳಿಗೆ ನಂದಿನಿಯ ಈ ರೆಡಿಮೇಡ್ ಇಡ್ಲಿ, ದೋಸೆ ಅನುಕೂಲಕರ ಆಗಲಿದೆ. ಬೆಂಗಳೂರಿನಲ್ಲಿ ಈ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ನಂತರ ಇತರ ನಗರಗಳಿಗೆ ವಿಸ್ತರಣೆ ಮಾಡಲು ಕೆಎಂಎಫ್ ಯೋಜಿಸಿದೆ.

click me!