
ಬೆಂಗಳೂರು (ನ. 23): ಕೆಎಂಎಫ್ ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ₹2 ಹೆಚ್ಚಿಸುವುದಾಗಿ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಹಾಲು ಹಾಗೂ ಮೊಸರು ದರ ಹೆಚ್ಚಳದ ಬಗ್ಗೆ KMF ಆಡಳಿತ ಮಂಡಳಿ ಸಭೆ ಬಳಿಕ ಹಾಲಿನ ದರವನ್ನು 2 ರೂ ಹೆಚ್ಚಳ ಮಾಡುವುದಾಗಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಹಾಗೂ ಪ್ರತಿ ಕೆಜಿ ಮೊಸರಿಗೆ 2 ರೂಪಾಯಿ ಏರಿಕೆ ಮಾಡಲಾಗಿದೆ. ನೇರವಾಗಿ ರೈತರಿಗೆ ಈ ಹಣವನ್ನು ನೀಡಲಾಗುತ್ತಿದ್ದು ಗ್ರಾಹಕರು ಸಹಕಾರ ಕೊಡುವಂತೆ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ. ನಾಳೆಯಿಂದಲೇ ಈ ದರ ಜಾರಿಯಾಗಲಿದೆ.
ಹಾಲು: ಹಳೇ ದರ: ಹೊಸ ದರ
ಕೆಎಂಎಫ್ ಸಂಸ್ಥೆಯು ನ.14ರಂದು ಹೊರಡಿಸಿ ಹಿಂಪಡೆದಿದ್ದ ಆದೇಶದಲ್ಲಿ ಹಾಲು ಹಾಗೂ ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 3 ರು. ಹೆಚ್ಚಳ ಮಾಡಿತ್ತು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಾಲಿನ ದರ ಹೆಚ್ಚಳಕ್ಕೆ ವಿವಿಧ ಹಾಲು ಒಕ್ಕೂಟಗಳಿಂದ ಕೆಎಂಎಫ್ ಮೇಲೆ ತೀವ್ರ ಒತ್ತಡವಿತ್ತು. ಹೀಗಾಗಿ ಹಲವು ತಿಂಗಳ ಹಿಂದೆಯೇ ಹಾಲಿನ ದರ ಪರಿಷ್ಕರಣೆಗೆ ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಿತ್ತು. ಸರ್ಕಾರ ಆಸಕ್ತಿ ತೋರದ ಹಿನ್ನೆಲೆಯಲ್ಲಿ ನ.14 ರಂದು ಹಾಲು ಹಾಗೂ ಮೊಸರಿನ ದರವನ್ನು ಲೀಟರ್‌ಗೆ 3 ರು.ಗಳಂತೆ ಹೆಚ್ಚಳ ಮಾಡಿ ಆದೇಶಿಸಿತ್ತು.
ಇದನ್ನೂ ಓದಿ: ಹಾಲು ಉತ್ಪಾದಕರಿಗೆ ನ.1ರಿಂದ ಪ್ರತಿ ಲೀ. ಗೆ ₹2 ಹೆಚ್ಚಳ: ಕನ್ನಡ ರಾಜ್ಯೋತ್ಸವಕ್ಕೆ ಶಿಮುಲ್ ಕೊಡುಗ
ಮರು ದಿನದಿಂದಲೇ ಜಾರಿಯಾಗಬೇಕಿದ್ದ ಪರಿಷ್ಕೃತ ದರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆ ನೀಡಿ ನ.20 ರ ಬಳಿಕ ಸಭೆ ನಡೆಸಿ ನಿರ್ಧರಿಸುವುದಾಗಿ ಪ್ರಕಟಿಸಿದ್ದರು. ಅದರಂತೆ ನವೆಂಬರ್ 21ರಂದು ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದರು. ಸಭೆಯಲ್ಲಿ ಸಚಿವ ಪ್ರಭು ಚೌಹಾಣ್, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಪಶುಸಂಗೋಪನಾ ಇಲಾಖೆಯ ಹಾಗು ಕೆಎಂಎಫ್ ಅಧಿಕಾರಿಗಳು ಭಾಗವಹಿಸಿದ್ದರು. ಗ್ರಾಹಕರಿಗೆ ಹೊರೆಯಾಗದಂತೆ ಹಾಗೂ ರೈತರಿಗೂ ನ್ಯಾಯ ಸಿಗುವಂತೆ ಸೂತ್ರವೊಂದನ್ನು ಎರಡು ದಿನಗಳೊಳಗೆ ರೂಪಿಸಿಕೊಂಡು ಬರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಸೂಚನೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ