
ಬೆಂಗಳೂರು (ಸೆ.28): ಕರಾವಳಿ ಮತ್ತು ಮಲೆನಾಡಿನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಹೂಡಿಕೆ ಉತ್ತೇಜಿಸಲು, ಬ್ಯಾಂಕ್ ಸಾಲ ತೀರುವಳಿ ಅವಧಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಭಾನುವಾರ ತುಳುನಾಡ ಜವನೆರ್ ಸಂಘಟನೆ ನಗರದಲ್ಲಿ ಆಯೋಜಿಸಿದ್ದ ಅಸ್ಟಮಿದ ಐಸಿರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಮೂಲಸೌಕರ್ಯಗಳ ನಿರ್ವಹಣೆ ವೆಚ್ಚವೂ ಸಹಜವಾಗಿಯೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಂಡವಾಳ ಹೂಡಿಕೆದಾರರಿಗೆ ನೆರವು ನೀಡುವ ಉದ್ದೇಶದಿಂದ ಬ್ಯಾಂಕು ಸಾಲ ತೀರುವಳಿ ಅವಧಿಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಜ್ಞಾನ, ಉತ್ತಮವಾದ ಪರಿಸರ, ವಿಶಾಲವಾದ ಕಡಲ ತೀರ ಹೊಂದಿದ್ದು, ವ್ಯಾಪಾರ ವಹಿವಾಟು, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇಂತಹ ಪವಿತ್ರವಾದ ನೆಲವನ್ನು ಉಳಿಸಿ ಅದನ್ನು ಅಭಿವೃದ್ಧಿಪಡಿಸುವ ಆರ್ಕಿಟೆಕ್ಟ್ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಸರ್ಕಾರ ನಿಮ್ಮ ಜತೆಯಲ್ಲಿಯೇ ಇದೆ. ನನಗೆ ರಾಜಕಾರಣ ಮುಖ್ಯವಲ್ಲ. ಉಪಕಾರ ಸ್ಮರಣೆ ನಿಮಗೆ ಬಿಟ್ಟು ಬಿಡುತ್ತೇನೆ. ನನಗೆ ಅದರ ಅವಶ್ಯಕತೆಯಿಲ್ಲ ಎಂದರು.
ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಕೇರಳ ಮಾದರಿ ವಾಟರ್ ಮೆಟ್ರೋ ಸೌಲಭ್ಯ ಆರಂಭಿಸಲು ಅನುಮೋದನೆ ನೀಡಿದ್ದೇವೆ. ಇನ್ನು ಮುಂದೆ ಬಸ್ಸಲ್ಲಿ ಸಂಚರಿಸುವ ರೀತಿಯಲ್ಲೇ, ವಾಟರ್ ಮೆಟ್ರೋದಲ್ಲಿಯೂ ಸಂಚರಿಸಬಹುದಾಗಿದೆ. ಇದಕ್ಕೆ ಪೂರಕವಾಗಿ ಬಂದರುಗಳ ನಿರ್ಮಾಣಕ್ಕೆ ಈಗಾಗಲೇ ನಾನು ಆದೇಶ ನೀಡಿದ್ದೇನೆ. ಟೀಕೆಗಳೆಲ್ಲಾ ಸಾಯುತ್ತವೆ, ಮಾಡಿದ ಕೆಲಸ ಮಾತ್ರ ಉಳಿಯುತ್ತದೆ. ಈ ತತ್ವದಲ್ಲಿ ಮಾತ್ರ ನನಗೆ ನಂಬಿಕೆಯಿದೆ ಎಂದರು.
ಕನ್ನಡ ಮಾತೃಭಾಷೆಯಾದರೆ, ತುಳು ಅದರ ಮಗಳು, ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ತುಳು ಉಳಿದರೆ ತುಳುನಾಡಿನ ಪರಂಪರೆ ಉಳಿಯಲು ಸಾಧ್ಯ. ನಮ್ಮ ಪರಂಪರೆ ಬಗ್ಗೆ ನಾವು ಹೆಮ್ಮೆಪಡಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಾಯಿಸುವ ಕುರಿತಾಗಿ ಈಗಾಗಲೇ ಹಲವು ಶಾಸಕರು, ಸಂಸದರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಾಗಿ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸರ್ಕಾರ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದರು.
ಸಾಹಿತಿಗಳು, ಗಣ್ಯರು, ರಾಜಕಾರಣಿಗಳು ಮಾತ್ರವಲ್ಲದೆ ಜನಸಾಮಾನ್ಯರೂ ಸಹ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಯಾವುದೇ ವೇದಿಕೆಯಲ್ಲಿ ವ್ಯಕ್ತಪಡಿಸಬಹುದು. ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದು ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಲು ರಾಜ್ಯದ 28 ಸಂಸದರೂ ಎಲ್ಲಾ ಪಕ್ಷ ಭೇದ ಮರೆತು ಮಾಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ,ಖಾದರ್, ಸಂಸದ ಬ್ರಿಜೇಶ್ ಚೌಟ, ಕರಾವಳಿ ಭಾಗದ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ