
ಬೆಂಗಳೂರು (ಸೆ.28): ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಒಂದಷ್ಟು ತೊಂದರೆಯಾಗಿರುವುದು ನಿಜ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ‘ತೊಂದರೆಯಾಗಿಲ್ಲ ಎಂದು ನಾನು ಹೇಳುವುದಿಲ್ಲ. ಹಾಗಾಗಿಯೇ ಅರ್ಹರಿಗೆ ಮಾತ್ರ ಈ ಯೋಜನೆಗಳು ಸಿಗಬೇಕು ಎಂಬ ಉದ್ದೇಶದಿಂದ ಮರು ಪರಿಶೀಲನೆ ಮಾಡಲಾಗುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ.
ಖಾಸಗಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಗ್ಯಾರಂಟಿ ಯೋಜನೆಗಳು ಒಂದಷ್ಟು ತೊಂದರೆ ಕೊಟ್ಟಿದೆ. ಇಲ್ಲ ಎಂದು ನಾನು ಹೇಳುವುದಿಲ್ಲ. 5 ಗ್ಯಾರಂಟಿ ಯೋಜನೆಗಳಿಗೆ ನಾವು ಖರ್ಚು ಮಾಡುತ್ತಿರುವುದು ಬರೋಬ್ಬರಿ 52 ಸಾವಿರ ಕೋಟಿ ರು.ಗಳು. ಇದರಿಂದ (ಸರ್ಕಾರಕ್ಕೆ) ಎಷ್ಟು ತೊಂದರೆಯಾಗಿದೆ ಎನ್ನುವುದನ್ನು ನಾವು ಮೌಲ್ಯಮಾಪನ ಮಾಡಬೇಕಾಗುತ್ತದೆ. ಅಲ್ಲದೆ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆಯೂ ಮಾಹಿತಿ ನೀಡಿರುವ ಅವರು, ‘ಅರ್ಹರಿಗೆ ಮಾತ್ರ ಯೋಜನೆಗಳ ಫಲ ದೊರೆಯಬೇಕು. ಜೊತೆಗೆ ಇದರಿಂದ ಸರ್ಕಾರಕ್ಕೆ ಎಷ್ಟು ಹಣ ಉಳಿತಾಯವಾಗುತ್ತದೋ ಆಗಲಿ’ ಎಂದರು.
‘ಟೀವಿ ಸಂದರ್ಶನಕ್ಕೆ ಬರುವಾಗ ನನ್ನ ಜೊತೆ ಕಾರ್ಯದರ್ಶಿ ಅವರೂ ಬಂದಿದ್ದರು. ಅವರು ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಬಗ್ಗೆ ಹೇಳುತ್ತಿದ್ದರು. ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವವರಿಗೆ ನಾವ್ಯಾಕೆ ಉಚಿತ ಯೋಜನೆ ನೀಡಬೇಕು? ನಮ್ಮ ರಾಜ್ಯದ ಮತದಾರರಿಗೆ ಮಾತ್ರ ಗ್ಯಾರಂಟಿ ಸೌಲಭ್ಯಗಳನ್ನು ನೀಡುವ ಕುರಿತು ಅರ್ಜಿ ಪರಿಷ್ಕರಣೆ ಮಾಡಲಾಗುತ್ತಿದೆ’ ಎಂದರು.
‘ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಲ್ಲೂ ಅಷ್ಟೆ. ಬೇರೆ ರಾಜ್ಯಗಳ ಸಾಕಷ್ಟು ಮಂದಿ ಉದ್ಯೋಗ, ವಿದ್ಯಾಭ್ಯಾಸ ಮತ್ತಿತರರ ಕಾರಣಗಳಿಂದ ನಮ್ಮ ರಾಜ್ಯಕ್ಕೆ ಬಂದು ನೆಲೆಸಿದ್ದಾರೆ. ಅವರು ತಮ್ಮ ತಮ್ಮ ರಾಜ್ಯಕ್ಕೆ ಹೋಗುವಾಗ ಮತ್ತು ಬರುವಾಗ ಕರ್ನಾಟಕದ ಗಡಿ ಪ್ರವೇಶಿಸುತ್ತಿದ್ದಂತೆ ಶಕ್ತಿ ಯೋಜನೆಯ ಉಪಯೋಗ ಪಡೆದು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಹಾಗಾಗಿ ಅಂಥದ್ದನ್ನು ತಡೆಯಲು ನಮ್ಮ ರಾಜ್ಯದ ಮತದಾರರಿಗೆ ಮಾತ್ರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಇದಕ್ಕೆ 100 ಕೋಟಿ ರು. ವೆಚ್ಚಾಗುತ್ತದೆ ಆಗಲಿ. ಸ್ಥಳೀಯರಲ್ಲವರಿಗೆ ಯೋಜನೆಯ ಸೌಲಭ್ಯ ತಡೆಯುವುದರಿಂದ ಒಂದಷ್ಟು ಅನುದಾನ ಉಳಿಯುತ್ತದೆ. ಎಷ್ಟು ಉಳಿಯುತ್ತದೋ ಉಳಿಯಲಿ ಸಾಕು. ಎಲ್ಲಾ ಲೆಕ್ಕಾಚಾರ ನಡೆಯುತ್ತಿದೆ’ ಎಂದೂ ಡಿಕೆಶಿ ಹೇಳಿದರು.
‘ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರದಲ್ಲಿ ಹೈಕಮಾಂಡ್ ನಿಮ್ಮ ಜೊತೆ ಇದೆಯಾ?’ ಎಂಬ ಪ್ರಶ್ನೆಗೆ, ‘ನಮ್ಮ ಪಕ್ಷದ ವರಿಷ್ಠರಿಗೆ, ಹೈಕಮಾಂಡ್ ನಾಯಕರಿಗೆ ನನ್ನ ಮೇಳೆ ಸಂಪೂರ್ಣ ವಿಶ್ವಾಸವಿದೆ. ಅವರು ನನ್ನಿಂದ ಉತ್ತಮ ಆಡಳಿತ ನಿರೀಕ್ಷೆ ಮಾಡಿದ್ದಾರೆ. ಅದನ್ನು ನಾನು ಕೊಟ್ಟೇ ಕೊಡುತ್ತೇನೆ. 2028ಕ್ಕೆ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತಾನೆ ಎಂಬ ನಂಬಿಕೆ ಇದೆ. ಅದನ್ನು ಉಳಿಸಿಕೊಳ್ಳುತ್ತೇನೆ’ ಎಂದಿದ್ದಾರೆ.
ಇದಕ್ಕೆ ಸಿದ್ದರಾಮಯ್ಯ ಅವರ ಬೆಂಬಲ ಇದೆಯಾ ಎಂಬ ಪ್ರಶ್ನೆಗೆ, ‘ಸಿದ್ದರಾಮಯ್ಯ ಅವರು ನನ್ನ ಜೊತೆ ನಿಲ್ಲುತ್ತಾರೆ. ಏಕೆಂದರೆ ನಾನು ಅವರ ಜೊತೆ ಬಂಡೆಯಂತೆ ನಿಂತಿದ್ದೇನೆ. ನನ್ನ ಜೀವನದಲ್ಲೇ ಯಾರಿಗೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ. ಹಿಂದೆ ಬಂಗಾರಪ್ಪ, ಎಸ್.ಎಂ.ಕೃಷ್ಣ ಅವರ ಜೊತೆ ಇದ್ದೆ. ಸಿದ್ದರಾಮಯ್ಯ ಅವರ ಜೊತೆ ಇದ್ದೇನೆ. ಕುಮಾರಸ್ವಾಮಿ ಅವರ ಜೊತೆಗೂ ನಿಂತಿದ್ದೆ. ಅವರು (ಎಚ್‌ಡಿಕೆ) ಇಲ್ಲ ಎಂದು ಹೇಳಬಹುದು’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ