
ಬೆಂಗಳೂರು (ಸೆ.27): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನವೊಂದು ಟೇಲ್ ಸ್ಟ್ರೈಕ್‌ಗೆ ಒಳಗಾಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. 6E 6542 ಸಂಖ್ಯೆಯ ಈ ವಿಮಾನ ಗುವಾಹಟಿಯಿಂದ ಬೆಂಗಳೂರಿಗೆ ಬರುತ್ತಿತ್ತು. ಈ ವೇಳೆ ಗಾಳಿ ಜೋರಾಗಿ ಬೀಸುತ್ತಿದ್ದ ವೇಳೆಯೇ ಲ್ಯಾಂಡಿಂಗ್ ಆಗಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತನಿಖೆ ಆರಂಭಿಸಿದೆ.
ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಇಂಡಿಗೋ, ಗಾಳಿ ಜೋರಾಗಿ ಬೀಸುತ್ತಿದ್ದ ಸಂದರ್ಭದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನವು ಅಸಹಜ ರನ್‌ವೇ ಸಂಪರ್ಕ(Abnormal Runway Contact) ದಿಂದ ಸಮಸ್ಯೆ ಎದುರಿಸಿದೆ ಎಂದು ತಿಳಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ.
ಘಟನೆ ಬಗ್ಗೆ ನಿಯಮದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬಳಿಕ ವಿಮಾನವನ್ನು ನಿರ್ವಹಣೆ ಮತ್ತು ತಾಂತ್ರಿಕ ಪರಿಶೀಲನೆಗಾಗಿ ಕಳುಹಿಸಲಾಗಿದೆ. ಅಗತ್ಯ ಅನುಮತಿಗಳು ದೊರೆತ ಬಳಿಕ ವಿಮಾನ ಮತ್ತೆ ಕಾರ್ಯಾಚರಣೆ ಆರಂಭಿಸಲಿದೆ.
ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ ಎಂದು ಇಂಡಿಗೋ ಹೇಳಿದೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.
ಈ ತಿಂಗಳು ಇಂಡಿಗೋ ವಿಮಾನಗಳಿಗೆ ಸಂಬಂಧಿಸಿದಂತೆ ಇಂತಹ ಹಲವು ಘಟನೆಗಳು ವರದಿಯಾಗಿವೆ.
ಬುಧವಾರ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ಡ್ರೀಮ್‌ಲೈನರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೀಗಾಗಿ ಲಂಡನ್ ಹೀಥ್ರೂ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸುಮಾರು ಒಂದು ಗಂಟೆಯ ಬಳಿಕ ವಿಮಾನ ಮತ್ತೆ ಅಲ್ಲಿಗೇ ವಾಪಸ್ ಆಗಿತ್ತು ಎಂದು ಸುದ್ದಿ ಸಂಸ್ಥೆ ಪಿಟಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಲಂಡನ್ ಹೀಥ್ರೂದಿಂದ ದೆಹಲಿಗೆ ತೆರಳುತ್ತಿದ್ದ ಬೋಯಿಂಗ್ 787-9 ವಿಮಾನವು 6E4 ಸಂಖ್ಯೆಯ ವಿಮಾನವಾಗಿತ್ತು. FlightRadar24.com ಮಾಹಿತಿ ಪ್ರಕಾರ, ಬುಧವಾರ ಬೆಳಗ್ಗೆ ಸುಮಾರು 12.40ಕ್ಕೆ (IST) ಟೇಕ್ ಆಫ್ ಆಗಿದ್ದ ವಿಮಾನ ಸುಮಾರು 2 ಗಂಟೆಗೆ ಮತ್ತೆ ಲಂಡನ್ ಹೀಥ್ರೂಗೆ ಸುರಕ್ಷಿತವಾಗಿ ಮರಳಿತ್ತು. ಈ ಬಗ್ಗೆ ಇಂಡಿಗೋ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ.
ಇದೇ ತಿಂಗಳ ಸೆಪ್ಟೆಂಬರ್ 15ರಂದು ಅಗರ್ತಲಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದನ್ನು ವಿಮಾನದ ಕಾರ್ಗೋ ವಿಭಾಗದಲ್ಲಿ ಹೊಗೆ ಕಾಣಿಸಿಕೊಂಡ ಎಚ್ಚರಿಕೆಯ ಹಿನ್ನೆಲೆಯಲ್ಲಿ ಲಕ್ನೋಗೆ ತಿರುಗಿಸಲಾಗಿತ್ತು ಎಂದು ಪಿಟಿಐ ಅಧಿಕೃತ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿತ್ತು.
6E6504 ಸಂಖ್ಯೆಯ ಈ ವಿಮಾನದಲ್ಲಿ 103 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಇದ್ದರು. ವಿಮಾನ ಸಂಜೆ 6.29ಕ್ಕೆ ಲಕ್ನೋದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.
ವಿಮಾನ ನಿಲ್ದಾಣದ ಅಧಿಕಾರಿಗಳು ತಕ್ಷಣ ತುರ್ತು ಪರಿಸ್ಥಿತಿ ನಿರ್ವಹಣಾ ಕ್ರಮಗಳನ್ನು ಜಾರಿಗೆ ತಂದಿದ್ದರು. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ, ಆಂಬ್ಯುಲೆನ್ಸ್ ಹಾಗೂ ಟರ್ಮಿನಲ್ ಸಹಾಯ ತಂಡಗಳನ್ನು ನಿಯೋಜಿಸಿ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷಿತ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ