ಅಭಿವೃದ್ಧಿ ಎಂದರೆ ಉಚಿತಗಳನ್ನು ನೀಡಿ ಜನರನ್ನು ಖುಷಿಪಡಿಸುವುದಲ್ಲ. ಬದಲಾಗಿ ಆರ್ಥಿಕ ಶಕ್ತಿ ನೀಡಿ ಜನರು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡುವುದು. ಅಂತಹ ಕಾರ್ಯವನ್ನು ಅಂದು ಕೆಂಪೇಗೌಡರು ಮಾಡಿದ್ದರು. ಈಗಲೂ ಅಂತಹ ಅಭಿವೃದ್ಧಿಯ ಮಾದರಿಯನ್ನು ನಾವು ಜನರಿಗೆ ನೀಡಬೇಕಿದೆ.
ಡಾ.ಕೆ.ಸುಧಾಕರ್, ಚಿಕ್ಕಬಳ್ಳಾಪುರ ಸಂಸದ
ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ‘ಭಾರತ ಪ್ರಕಾಶಿಸುತ್ತಿದೆʼ ಎಂಬ ಘೋಷವಾಕ್ಯ ಬಹಳ ಜನಪ್ರಿಯತೆ ಪಡೆದಿತ್ತು. ಅದೇ ರೀತಿ ನರೇಂದ್ರ ಮೋದಿಯವರು ‘ಅಚ್ಛೇ ದಿನ್ʼ ಎಂಬ ಘೋಷವಾಕ್ಯದೊಂದಿಗೆ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿ ಒಳ್ಳೆಯ ದಿನಗಳನ್ನು ತಂದಿದ್ದಾರೆ. ಈಗ ‘ವಿಕಸಿತ ಭಾರತʼ ಎಂಬ ಹೊಸ ಹೆಜ್ಜೆಯ ಕಡೆಗೆ ನಡೆಯುತ್ತಿದ್ದೇವೆ. ಇಂಥದ್ದೇ ಪ್ರಗತಿ ಕಾರ್ಯಗಳನ್ನು ಐನೂರು ವರ್ಷಗಳ ಹಿಂದೆ ಒಬ್ಬ ಮಹಾನ್ ಆಡಳಿತಗಾರ ಮಾಡಿದ್ದರು. ಅದರ ಪರಿಣಾಮವಾಗಿಯೇ ಬೆಂಗಳೂರು ಇಂದು ಜಾಗತಿಕ ನಗರವಾಗಿ ಗಗನದೆತ್ತರಕ್ಕೆ ಅಪ್ರತಿಮ ಶಕ್ತಿಯಾಗಿ ಬೆಳೆದು ನಿಂತಿದೆ. ಅಂತಹ ಅಚ್ಛೇ ದಿನವನ್ನು ಅಂದು ತಂದಿದ್ದು ನಾಡಪ್ರಭು ಕೆಂಪೇಗೌಡರು.
undefined
ನವದೆಹಲಿ, ಚೆನ್ನೈ, ಹೈದರಾಬಾದ್ ಮೊದಲಾದ ಮಹಾನಗರಗಳ ಸಾಲಿನಲ್ಲಿ ಬೆಂಗಳೂರು ತಲೆ ಎತ್ತಿ ನಿಂತಿದೆ. ಇನ್ನೂ ಒಂದು ರೀತಿಯಲ್ಲಿ ನೋಡುವುದಾದರೆ ಈ ಎಲ್ಲ ನಗರಗಳಿಗಿಂತಲೂ ವಿಶಿಷ್ಟವಾದ ಹಾಗೂ ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯ ಸ್ಥಾನವನ್ನು ಬೆಂಗಳೂರು ಪಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತದಿಂದ ಆರಂಭವಾಗಿ ಸಣ್ಣ ಸಣ್ಣ ವಿಷಯಗಳಿಗೂ ಪ್ರಾಧಾನ್ಯತೆ ನೀಡಿ ಭದ್ರ ಬುನಾದಿ ಹಾಕುತ್ತಿರುವುದರ ಪ್ರಯೋಜನವಾದರೂ ಏನು, 2047ಕ್ಕೆ ವಿಕಸಿತ ಭಾರತ ನಿರ್ಮಿಸುವ ದೀರ್ಘ ಗುರಿಗೆ ಅರ್ಥವಿದೆಯೇ ಎಂದು ಅನೇಕರು ಟೀಕೆ ಮಾಡಿದ್ದರು. ಅದಕ್ಕೆ ಉತ್ತರ ಹುಡಕಲು ಹೊರಡುವುದಾದರೆ, ನಮಗೆ ಕೆಂಪೇಗೌಡರು ಕಾಣಸಿಗುತ್ತಾರೆ. ಐನೂರು ವರ್ಷಗಳ ಹಿಂದೆಯೇ ಕೆಂಪೇಗೌಡರು ದೀರ್ಘಕಾಲದ ದೃಷ್ಟಿಯನ್ನು ಕಾಲಾತೀತವಾಗಿ ಯೋಚಿಸದೇ ಇದ್ದಿದ್ದರೆ ಇಂದು ಬೆಂಗಳೂರಿನಂತಹ ಬಲಿಷ್ಠ ಆರ್ಥಿಕತೆಯ ನಗರ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.
ರಾಜ್ಯದಲ್ಲಿ ಅದ್ಧೂರಿ ಕೆಂಪೇಗೌಡರ ದಿನಾಚರಣೆಗೆ ಬಿಬಿಎಂಪಿಯಿಂದ 2.40 ಕೋಟಿ ರೂ. ಖರ್ಚು ಮಾಡಿಸುತ್ತಿರುವ ಸರ್ಕಾರ!
ಬೆಂಗಳೂರಿನ ಹಿರಿಮೆ ಹೆಚ್ಚಿಸಿದ ನಾಯಕ
ಮುಖ್ಯವಾಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್‌ಫೀಲ್ಡ್ ಪ್ರದೇಶಗಳು ಕೋಟ್ಯಂತರ ಜನರಿಗೆ ಜೀವನ ನೀಡಿದೆ. ಉಳಿದ ಭಾಗಗಳಲ್ಲೂ ಉದ್ಯಮಗಳು ತಲೆ ಎತ್ತಿ ನಿಂತಿದೆ. ಯಲಹಂಕ ವಾಯುನೆಲೆಯಲ್ಲಿ ಏಷ್ಯಾದ ಅತಿ ದೊಡ್ಡ ‘ಏರೋ ಇಂಡಿಯಾʼ ಪ್ರದರ್ಶನ ನಡೆಯುತ್ತಿದೆ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇತ್ತೀಚೆಗೆ ನವೀಕರಣಗೊಂಡು ಬೃಹದಾಕಾರ ತಾಳಿ ಕೋಟ್ಯಂತರ ಜನರಿಗೆ ಪ್ರಯಾಣದ ವಿನೂತನ ಅನುಭವ ನೀಡುತ್ತಿದೆ. ‘ನಮ್ಮ ಮೆಟ್ರೋʼ ಸೇವೆ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಾ ಬೆಂಗಳೂರಿನ ಹೊರವಲಯದಲ್ಲೂ ವ್ಯಾಪಿಸುತ್ತಿದೆ. ಐಐಎಸ್ಸಿ, ಐಐಎಮ್‌ಬಿ, ನಿಮ್ಹಾನ್ಸ್ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಿಗೆ ನಮ್ಮ ನಗರ ತಾಣವಾಗಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಅಪಾರ ಸಾಧನೆಗೈದಿರುವ ಇಸ್ರೋ ಸಂಸ್ಥೆಗೂ ಇದೇ ಕೇಂದ್ರ ಎನ್ನುವುದು ಇನ್ನೊಂದು ಹೆಮ್ಮೆ. ಇಷ್ಟೆಲ್ಲ ಗರಿಮೆ ಹೊಂದುವಂತೆ ಬೆಂಗಳೂರು ನಗರ ಬೆಳೆಯಲು ಅಡಿಪಾಯ ಹಾಕಿದ ಕೆಂಪೇಗೌಡರು ಯಾವಾಗಲೂ ಸ್ಮರಣೀಯರು. ಅದಕ್ಕಾಗಿಯೇ ಹಿಂದಿನ ಬಿಜೆಪಿ ಸರ್ಕಾರ ದೇವನಹಳ್ಳಿಯ ವಿಮಾನ ನಿಲ್ದಾಣ ಸಮೀಪ ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆ ನಿರ್ಮಿಸಿ ಅವರ ಸ್ಮರಣೆಯನ್ನು ಶಾಶ್ವತವಾಗಿಸಿದೆ.
ಕೆರೆಗಳನ್ನು ಕೊಟ್ಟ ಭಗೀರಥ
ಬೆಂಗಳೂರಿಗೆ ಸೂಕ್ತವಾದ ಜಲಮೂಲ ಇಲ್ಲ ಎಂಬ ವಾಸ್ತವ ಅರಿತ ಕೆಂಪೇಗೌಡರು, ಕೆರೆಗಳನ್ನು ಕೃತಕವಾಗಿ ಕಟ್ಟಿ ನೀರಾವರಿ ಕಲ್ಪಿಸಿದರಷ್ಟೇ ಇದು ವಾಸಯೋಗ್ಯ ಪ್ರದೇಶವಾಗಿ ಬೆಳೆಯಲು ಸಾಧ್ಯ ಎಂಬ ಸಂಕಲ್ಪ ಕೈಗೊಂಡರು. ಧರ್ಮಾಂಬುಧಿ, ಕೆಂಪಾಂಬುಧಿ, ಹಲಸೂರು, ಸಂಪಂಗಿ, ಕಾರಂಜಿ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ, ಜಕ್ಕರಾಯನಕೆರೆ ಸೇರಿದಂತೆ 347 ದೊಡ್ಡ ಕೆರೆಗಳು ಹಾಗೂ 1,200 ಕ್ಕೂ ಅಧಿಕ ಸಣ್ಣ ಕೆರೆ-ಕಟ್ಟೆಗಳನ್ನು ನಿರ್ಮಾಣ ಮಾಡಿದರು. ಇದಕ್ಕಾಗಿ ಅವರು ಮಾಡಿದ ಸಂಪನ್ಮೂಲ ಕ್ರೋಢೀಕರಣ, ಗಳಿಸಿದ ಜನರ ಬೆಂಬಲ, ಹಟ ಬಿಡದೆ ಪೂರ್ಣಗೊಳಿಸಿದ ಕಾಮಗಾರಿ ಹೇಗಿರಬಹುದು ಎಂದು ನಾವು ಊಹಿಸಿಕೊಳ್ಳಬಹುದು. ಈ ಕೆರೆಗಳು ಈಗಲೂ ಬೆಂಗಳೂರಿನ ಜೀವನಾಡಿಯಾಗಿದ್ದು, ಅಂತರ್ಜಲ ಮರುಪೂರಣದಲ್ಲಿ ಹಾಗೂ ಪರಿಸರ ಸಮತೋಲನದಲ್ಲಿ ಮುಖ್ಯ ಪಾತ್ರ ವಹಿಸಿವೆ.
ವಾಣಿಜ್ಯ ನಗರದ ಸೃಷ್ಟಿಕರ್ತ
ಕೆಂಪೇಗೌಡರು ಜನರ ಬದುಕಿಗೆ ಆರ್ಥಿಕ ಶಕ್ತಿ ಕಲ್ಪಿಸಲು ವಾಣಿಜ್ಯ ನಗರಿಯನ್ನು ಸೃಷ್ಟಿ ಮಾಡಿದರು. ಗುಡಿ ಕೈಗಾರಿಕೆ, ಸ್ಥಳೀಯ ಉದ್ಯಮಗಳನ್ನು ಉತ್ತೇಜಿಸಲು ಅರಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರಪೇಟೆ, ಗೊಲ್ಲರಪೇಟೆ, ಮಡಿವಾಳ ಪೇಟೆ, ಮಂಡಿ ಪೇಟೆ, ಬಳೇಪೇಟೆ, ಅಂಚೆಪೇಟೆ ಮೊದಲಾದ ಸಂತೆಗಳನ್ನು ನಿರ್ಮಿಸಿದರು. ಈ ಪೇಟೆಗಳು ಇಂದಿಗೂ ರಾಜಧಾನಿಯಲ್ಲಿ ಎಲ್ಲ ವರ್ಗದ ಜನರ ಶಾಪಿಂಗ್ ಕೇಂದ್ರವಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳ ಸಣ್ಣ ಉದ್ಯಮಿಗಳು ಈ ಸಂತೆಗಳಿಗೆ ಬಂದು ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಈ ಎಲ್ಲ ಪೇಟೆಗಳಲ್ಲಿ ಸಿಗದ ವಸ್ತುಗಳೇ ಇಲ್ಲ ಎನ್ನುವ ಮಟ್ಟಿಗೆ ಜನಪ್ರಿಯತೆ ಇದೆ.
ಜೂ.27ಕ್ಕೆ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ: ಡಿ.ಕೆ.ಶಿವಕುಮಾರ್
ಕೆಂಪೇಗೌಡರ ಹೆಜ್ಜೆಯ ಮಾದರಿ
ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಕೂಡ ನಾಡಪ್ರಭುಗಳ ಆಡಳಿತ ಪ್ರದೇಶದ ವ್ಯಾಪ್ತಿಯಲ್ಲಿದೆ. ಬೆಂಗಳೂರು ನಗರ ಸಮೀಪದಲ್ಲೇ ಇದ್ದರೂ ಈ ಭಾಗಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಬೆಂಗಳೂರಿಗೆ ಪರ್ಯಾಯವಾಗಿ ಉಪ ನಗರಗಳ ಅಭಿವೃದ್ಧಿ, ಹೆಚ್ಚುವರಿ ರೈಲು ಸಂಪರ್ಕ, ಶಾಶ್ವತ ನೀರಾವರಿ, ತರಕಾರಿ, ಹೂವು-ಹಣ್ಣು ಹಾಗೂ ರೇಷ್ಮೆಗೆ ಉತ್ತಮ ಮಾರುಕಟ್ಟೆ ಮತ್ತು ಕೈಗಾರಿಕಾಭಿವೃದ್ಧಿ ಮೂಲಕ ಇಲ್ಲಿನ ಜನಜೀವನವನ್ನು ಸಮೃದ್ಧವಾಗಿಸಬೇಕಿದೆ. ಇದಕ್ಕೆ ಕೆಂಪೇಗೌಡರ ಆಡಳಿತದ ಹಾದಿಯೇ ಮಾದರಿಯಾಗಿರಲಿದೆ.
ಮೋದಿಯವರ ವಿನೂತನ ಮಾದರಿ
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಜನಜೀವನದ ಪ್ರಗತಿಗೆ ಹೊಸ ಬೆಳಕು ನೀಡಿದ್ದಾರೆ. ಇನ್ನು ವಿಕಸಿತದ ಪರಿಕಲ್ಪನೆಯೊಂದಿಗೆ ಹೊಸ ದಾರಿಯಲ್ಲಿ ನಾವು ಸಾಗಲಿದ್ದೇವೆ. ಅಭಿವೃದ್ಧಿ ಎಂದರೆ ಉಚಿತಗಳನ್ನು ನೀಡಿ ಜನರನ್ನು ಸಂತುಷ್ಟಪಡಿಸುವುದಲ್ಲ. ಬದಲಾಗಿ ಆರ್ಥಿಕ ಶಕ್ತಿ ನೀಡಿ ಜನರು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡುವುದು. ಅಂತಹ ಕಾರ್ಯವನ್ನು ಅಂದು ನಾಡಪ್ರಭು ಕೆಂಪೇಗೌಡರು ಮಾಡಿದ್ದರು. ಈಗಲೂ ಅಂತಹ ಅಭಿವೃದ್ಧಿಯ ಮಾದರಿಯನ್ನು ನಾವು ಜನರಿಗೆ ನೀಡಬೇಕಿದೆ. ಅದೇ ನಾವು ಕೆಂಪೇಗೌಡರಿಗೆ ಸಲ್ಲಿಸಬಹುದಾದ ಕಾಣಿಕೆ.