ಕೆಸಿಇಟಿ 2026 ದಿನಾಂಕ ಪ್ರಕಟ, ವಿದ್ಯಾರ್ಥಿಗಳಿಗಾಗಿ ಸಿಇಟಿ ದಿಕ್ಸೂಚಿ ಕಿರು ಹೊತ್ತಿಗೆ ಬಿಡುಗಡೆ

Published : Jan 02, 2026, 02:50 PM IST
KEA

ಸಾರಾಂಶ

 KEA 2026ನೇ ಸಾಲಿನ ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 23 ಮತ್ತು 24ರಂದು ನಡೆಸಲು ದಿನಾಂಕ ಪ್ರಕಟಿಸಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು 'ಸಿಇಟಿ ದಿಕ್ಸೂಚಿ' ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಗಿದ್ದು, ಪಿಜಿಸಿಇಟಿ, ಡಿಸಿಇಟಿ ಸೇರಿದಂತೆ ಇತರೆ ಪರೀಕ್ಷೆಗಳ ವೇಳಾಪಟ್ಟಿಯನ್ನೂ ಸಹ ಘೋಷಿಸಲಾಗಿದೆ.

ಬೆಂಗಳೂರು: 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ–CET) ದಿನಾಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತವಾಗಿ ಪ್ರಕಟಿಸಿದೆ. ಏಪ್ರಿಲ್ 23 ಮತ್ತು 24ರಂದು ಸಿಇಟಿ ಪರೀಕ್ಷೆಗಳು ನಡೆಯಲಿದ್ದು, ಜನವರಿ 17ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಸಂಬಂಧ 2026ನೇ ಸಾಲಿನ ಸಿಇಟಿ ಕುರಿತ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ‘ಸಿಇಟಿ ದಿಕ್ಸೂಚಿ’ ಕಿರು ಹೊತ್ತಿಗೆಯ ಬಿಡುಗಡೆ ಸಮಾರಂಭ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಿತು. ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ ಉಪಸ್ಥಿತರಿದ್ದರು. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಿಇಟಿ ದಿಕ್ಸೂಚಿ ಕಿರು ಹೊತ್ತಿಗೆ ಬಿಡುಗಡೆ

ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಸಿಇಟಿ ದಿಕ್ಸೂಚಿ ಕಿರು ಹೊತ್ತಿಗೆ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಮಾರ್ಗದರ್ಶಿಯಾಗಲಿದೆ ಎಂದು ತಿಳಿಸಿದರು. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದ್ದ ಗೊಂದಲ ನಿವಾರಣೆಗೆ ಇದು ಮಹತ್ವದ ಹೆಜ್ಜೆಯಾಗಿದ್ದು, ಸಿಇಟಿ ಅರ್ಜಿ ಸಲ್ಲಿಕೆ, ಪರೀಕ್ಷೆ, ಕೌನ್ಸಿಲಿಂಗ್ ಹಂತಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿದೆ ಎಂದರು.

KEA ಕಚೇರಿಯ ಆಧುನೀಕರಣ ಹಾಗೂ ನವೀಕರಿಸಿದ ಸಭಾಂಗಣಗಳ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ನಡೆಯಿತು. “ಇದು ಒಂದು ರೀತಿಯ ಹೊಸ ಪ್ರಯತ್ನ. ಈಗಾಗಲೇ ಸಾಮಾಜಿಕ ಜಾಲತಾಣಗಳು ಮತ್ತು ಚಾಟ್‌ಬಾಟ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿತ್ತು. ಆದರೂ ಕೌನ್ಸಿಲಿಂಗ್‌ನ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡುತ್ತಿದ್ದರು. ಇದನ್ನು ತಪ್ಪಿಸಲು 3.75 ಲಕ್ಷ ದಿಕ್ಸೂಚಿ ಪ್ರತಿಗಳನ್ನು ಮುದ್ರಿಸಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತದೆ” ಎಂದು ಸಚಿವರು ಹೇಳಿದರು.

2026ರ ಸಿಇಟಿ ಪರೀಕ್ಷೆಯು ಏಪ್ರಿಲ್ 23 ಮತ್ತು 24ರಂದು ನಡೆಯಲಿದ್ದು, ಹೊರನಾಡು ಹಾಗೂ ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 22ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಕೆಇಎ ಇತರೆ ಪರೀಕ್ಷೆಗಳ ದಿನಾಂಕವೂ ಪ್ರಕಟ

ಇದೇ ವೇಳೆ ಕೆಇಎ ನಡೆಸಲಿರುವ ಇತರೆ ಪರೀಕ್ಷೆಗಳ ದಿನಾಂಕಗಳನ್ನೂ ಪ್ರಕಟಿಸಲಾಯಿತು. KRIES ಆರನೇ ತರಗತಿ ಪ್ರವೇಶ ಪರೀಕ್ಷೆ ಮಾರ್ಚ್ 1ರಂದು, MBA ಮತ್ತು MCA ಪಿಜಿಸಿಇಟಿ ಮೇ 14ರಂದು, M.E / M.Tech ಪಿಜಿಸಿಇಟಿ ಹಾಗೂ ಲ್ಯಾಟರಲ್ ಎಂಟ್ರಿ ಇಂಜಿನಿಯರಿಂಗ್ ಕೋರ್ಸ್‌ಗಾಗಿ DCET ಮೇ 23ರಂದು ನಡೆಯಲಿದೆ. MSc ನರ್ಸಿಂಗ್, MPT ಹಾಗೂ MSc AHS ಪರೀಕ್ಷೆಗಳು ಜುಲೈ 18ರಂದು, KSET ಅಕ್ಟೋಬರ್ 11ರಂದು ಮತ್ತು M-Pharma ಪರೀಕ್ಷೆ ನವೆಂಬರ್ 21ರಂದು ನಡೆಯಲಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ ಮಾತನಾಡಿ, ಕೆಇಎ ವತಿಯಿಂದ ವಿವಿಧ ಪ್ರವೇಶ ಮತ್ತು ನೇಮಕಾತಿ ಪರೀಕ್ಷೆಗಳು ನಡೆಯುತ್ತಿವೆ ಎಂದು ಹೇಳಿದರು. “ಸರ್ಕಾರದ ವಿವಿಧ ಇಲಾಖೆಗಳಿಗೆ ನೇಮಕಾತಿ ಸಂಬಂಧಿತ ಪರೀಕ್ಷೆಗಳನ್ನೂ ಕೆಇಎ ಪಾರದರ್ಶಕವಾಗಿ ನಡೆಸುತ್ತಿದೆ. ಪ್ರವೇಶಾತಿ ಕೌನ್ಸಿಲಿಂಗ್ ಕೂಡ ಸಂಪೂರ್ಣ ಪಾರದರ್ಶಕವಾಗಿಯೇ ನಡೆಯುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಇಟಿ ಕೌನ್ಸಿಲಿಂಗ್‌ನಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು. ಸಿಇಟಿ ಹಾಗೂ ಇತರೆ ಪ್ರವೇಶ ಪರೀಕ್ಷೆಗಳ ಪ್ರಕ್ರಿಯೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಕೆಇಎ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಳ್ಳಾರಿ: 'ಕೈ ಕಾರ್ಯಕರ್ತನ ಎದೆ ಸೀಳಿದ ಬುಲೆಟ್ ಬಿಜೆಪಿಯದ್ದಾ, ಕಾಂಗ್ರೆಸ್‌ನದ್ದಾ?' ಸಿಎಂ ಸಿದ್ದರಾಮಯ್ಯ ಪ್ರಶ್ನೆ!
ಉಗ್ರ ನಸೀರ್‌ಗೆ ಜೈಲಲ್ಲೇ ನೆರವು ಪ್ರಕರಣ, ಮತ್ತೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ!