ಉಗ್ರ ನಸೀರ್‌ಗೆ ಜೈಲಲ್ಲೇ ನೆರವು ಪ್ರಕರಣ, ಮತ್ತೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ!

Published : Jan 02, 2026, 01:28 PM IST
T Nasir

ಸಾರಾಂಶ

ಲಷ್ಕರ್‌-ಎ-ತೊಯ್ಬಾ ಉಗ್ರ ಟೀ ನಸೀರ್‌ಗೆ ಜೈಲಿನಲ್ಲಿ ನೆರವು ನೀಡಿದ ಪ್ರಕರಣದಲ್ಲಿ ಎನ್‌ಐಎ ಮೂವರು ಹೊಸ ಆರೋಪಿಗಳ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದೆ. ಸಿಎಆರ್ ಎಎಸ್‌ಐ, ಮನೋವೈದ್ಯ ಹಾಗೂ ಇನ್ನೊಬ್ಬ ಮಹಿಳೆ ಹಣಕಾಸಿನ ನೆರವು, ಮಾಹಿತಿ ಸೋರಿಕೆ ಮತ್ತು ಮೊಬೈಲ್ ಫೋನ್ ಪೂರೈಸಿದ ಆರೋಪವಿದೆ.

ಬೆಂಗಳೂರು: ಲಷ್ಕರ್‌-ಎ-ತೊಯ್ಬಾ ಸಂಘಟನೆ ಉಗ್ರ ಟೀ ನಸೀರ್‌ಗೆ ಜೈಲಿನೊಳಗೆ ಸಹಾಯ ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಪ್ರಕರಣದಲ್ಲಿ ಮೂವರು ಹೊಸ ಆರೋಪಿಗಳ ವಿರುದ್ಧ ಎನ್‌ಐಎ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದೆ. ಈಗಾಗಲೇ ಈ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದ ಎನ್‌ಐಎ, ಇದೀಗ ಹೆಚ್ಚುವರಿಯಾಗಿ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ವಿವರಗಳನ್ನು ಸಲ್ಲಿಸಿದೆ.

ಎನ್‌ಐಎ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಸಿಎಆರ್ ಎಎಸ್‌ಐ ಚಾಂದ್ ಪಾಷಾ, ಅನಿಸಾ ಫಾತಿಮಾ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯರಾಗಿದ್ದ ಡಾ. ನಾಗರಾಜ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಈ ಮೂವರು ಆರೋಪಿಗಳು ಉಗ್ರ ಟೀ ನಸೀರ್‌ಗೆ ಜೈಲಿನೊಳಗಿಂದಲೇ ನೆರವು ನೀಡಿದ ಆರೋಪ ಎದುರಿಸುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೂ ಮೊದಲು ಎನ್‌ಐಎ ಪರಾರಿಯಾಗಿದ್ದ ಜುನೈದ್ ಸೇರಿ ಒಟ್ಟು 9 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇದೀಗ ತನಿಖೆ ಮತ್ತಷ್ಟು ವಿಸ್ತಾರಗೊಂಡಿದ್ದು, ಹೆಚ್ಚುವರಿ ಆರೋಪಿಗಳನ್ನು ಒಳಗೊಂಡಂತೆ ಹೊಸ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಹಣಕಾಸಿನ ನೆರವು ನೀಡಿದ್ದ ಅನಿಸಾ ಫಾತಿಮಾ

ಅನಿಸಾ ಫಾತಿಮಾ ಜುನೈದ್ ಅಹಮದ್ ಅವರ ತಾಯಿಯಾಗಿದ್ದು, ಮಗನ ಸೂಚನೆಯಂತೆ ಉಗ್ರ ಟೀ ನಸೀರ್‌ಗೆ ಹಣಕಾಸಿನ ನೆರವು ಒದಗಿಸುತ್ತಿದ್ದಳು ಎಂಬ ಆರೋಪ ಇದೆ. ಅಲ್ಲದೆ, ಹ್ಯಾಂಡ್ ಗ್ರೈನೇಡ್‌, ವಾಕಿಟಾಕಿ ಸೇರಿದಂತೆ ಅಪಾಯಕಾರಿ ಸಾಧನಗಳ ನಿರ್ವಹಣೆ, ಆರೋಪಿಗಳ ನಡುವೆ ಸಂಪರ್ಕ ಸಾಧಿಸಲು ಸಹಾಯ ಮಾಡಿದ ಆರೋಪವೂ ಆಕೆಯ ಮೇಲೆ ಹೊರಿಸಲಾಗಿದೆ. ಮತ್ತೊಬ್ಬ ಆರೋಪಿ ಸಲ್ಮಾನ್ ಖಾನ್ ಪರಾರಿಯಾಗಲು ಸಹ ಅನಿಸಾ ಫಾತಿಮಾ ನೆರವು ನೀಡಿದ್ದಾಳೆ ಎಂದು ಎನ್‌ಐಎ ಆರೋಪಿಸಿದೆ.

ಇನ್ನೊಂದು ಪ್ರಮುಖ ಆರೋಪಿ ಚಾಂದ್ ಪಾಷಾ, ಸಿಎಆರ್ (ಸಿಟಿ ಆರ್ಮ್ಡ್ ರಿಸರ್ವ್) ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದನು. ಹಣದ ಆಸೆಗೆ ಶಂಕಿತ ಉಗ್ರರ ಬಗ್ಗೆ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಆತನ ವಿರುದ್ಧ ಇದೆ. ಉಗ್ರ ಟೀ ನಸೀರ್‌ನ ಮಾಹಿತಿ ಹಾಗೂ ಜೈಲಿನಿಂದ ಸಾಗಿಸುವ ವೇಳೆ ಬೆಂಗಾವಲು ಪಡೆಯ ವಿವರಗಳನ್ನು ಸಲ್ಮಾನ್ ಖಾನ್‌ಗೆ ರವಾನಿಸುತ್ತಿದ್ದನು ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ. ನಾಗರಾಜ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ನಾಗರಾಜ್ ಕೂಡ ಈ ಪ್ರಕರಣದ ಪ್ರಮುಖ ಆರೋಪಿ. ಜೈಲಿನೊಳಗೆ ಕಾನೂನುಬಾಹಿರವಾಗಿ ಮೊಬೈಲ್ ಫೋನ್‌ಗಳನ್ನು ಸಾಗಾಟ ಮಾಡುತ್ತಿದ್ದ ಹಾಗೂ ಖೈದಿಗಳಿಂದ ಹಣ ಪಡೆದು ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದನು ಎಂಬ ಆರೋಪಗಳಿವೆ. ಇದೇ ರೀತಿ ಉಗ್ರ ಟೀ ನಸೀರ್‌ಗೆ ಕೂಡ ಮೊಬೈಲ್ ಫೋನ್ ಒದಗಿಸಲಾಗಿದ್ದು, ಆ ಮೊಬೈಲ್ ಮೂಲಕ ನಸೀರ್ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಚಾಲನೆ ಮಾಡುತ್ತಿದ್ದನೆಂದು ಎನ್‌ಐಎ ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಪ್ರಕರಣದಲ್ಲಿ ಜೈಲು ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಹೊರಗಿನ ವ್ಯಕ್ತಿಗಳು ಉಗ್ರ ಸಂಘಟನೆಗಳಿಗೆ ನೆರವು ನೀಡಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ತನಿಖೆ ಮುಂದುವರಿದಿದ್ದು, ಈ ಜಾಲದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರಾ ಎಂಬುದರ ಬಗ್ಗೆ ಎನ್‌ಐಎ ಮಾಹಿತಿ ಸಂಗ್ರಹಿಸುತ್ತಿದೆ. ದೇಶದ ಭದ್ರತೆಗೆ ಧಕ್ಕೆಯುಂಟು ಮಾಡುವ ಯಾವುದೇ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎನ್‌ಐಎ ಸ್ಪಷ್ಟಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅವಾಚ್ಯ ಪದಗಳಿಂದ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ನಿಂದನೆ, ಇಬ್ಬರು ಕಿಡಿಗೇಡಿಗಳು ಅರೆಸ್ಟ್, ವೃತ್ತಿಯಲ್ಲಿ ಇಂಜಿನಿಯರ್!
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!